ಶಿರಸಿ: ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂದೇ ಹೆಸರಾದ ಮಲೆನಾಡ ಸಿರಿದೇವಿ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವ ಫೆ.27 ರಿಂದ ಮಾರ್ಚ್ 7ರವರೆಗೆ ನಡೆಯಲಿದೆ.
ಲೋಕಕಲ್ಯಾಣಾರ್ಥ 2 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಭಾನುವಾರ ನಗರದ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿದ್ವಾನ್ ಶರಣ ಆಚಾರ್ಯ ಜಾತ್ರಾ ಮುಹೂರ್ತ ಘೋಷಿಸಿದರು. ಬಳಿಕ ದೇವಿ ತವರು ಮನೆಯವರು ಎಂದೇ ಕರೆಯಲಾಗುವ ಅಜಯ್ ನಾಡಿಗ್ ದೇವರ ಮುಂದೆ ದೀಪ ಬೆಳಗಿಸಿ ರಾಯಸಕ್ಕೆ ಪೂಜೆ ಸಲ್ಲಿಸಿದರು.
ಜ.10 ರಿಂದ ಜಾತ್ರಾ ಪೂರ್ವ ತಯಾರಿ ವಿಧಿ ವಿಧಾನಗಳು ಆರಂಭಗೊಳ್ಳಲಿದ್ದು, ಅಂದೇ ಬೆಳಗ್ಗೆ 9:25ಕ್ಕೆ ಶ್ರೀದೇವಿಯ ಪ್ರತಿಷ್ಠಾ ಮಂಟಪ ಕಳಚುವ ಮೂಲಕ ವಿದ್ಯುಕ್ತ ಚಾಲನೆ ಸಿಗಲಿದೆ. ಫೆ.6ಕ್ಕೆ ಮೊದಲ ಹೊರಬೀಡು, ಫೆ.9ಕ್ಕೆ ಎರಡನೇ ಹೊರಬೀಡು, ಫೆ.13 ಮೂರನೇ ಹಾಗೂ ಫೆ.16ಕ್ಕೆ ನಾಲ್ಕನೇ ಹೊರಬೀಡು ನಡೆಯಲಿದೆ. ಫೆ.20ಕ್ಕೆ ದೇವರ ರಥದ ಮರ ತರುವುದು, ಅಂದೇ ಅಂಕೆಯ ಹೊರಬೀಡು ನಡೆಯಲಿದ್ದು ಫೆ.21ರಂದು ಅಂಕೆ ಹಾಕುವ ಕಾರ್ಯಕ್ರಮ ಹಾಗೂ ದೇವಿ ವಿಗ್ರಹದ ವಿಸರ್ಜನೆ ನಡೆಯಲಿದೆ.
ಫೆ.27ಕ್ಕೆ ಮಧ್ಯಾಹ್ನ 11:53ರಿಂದ ದೇವಿ ರಥದ ಕಳಶ ಪ್ರತಿಷ್ಠೆ ನಡೆಯಲಿದೆ. ಅಂದು ರಾತ್ರಿ 11:21ರಿಂದ ಜಾತ್ರಾ ಕಲ್ಯಾಣ ಪ್ರತಿಷ್ಠೆ ಸಕಲ ಸಂಭ್ರಮದಲ್ಲಿ ಜರುಗಲಿದೆ. ಫೆ.28ರಂದು ಮುಂಜಾನೆ 7:14 ರಿಂದ ದೇವಿಯ ರಥಾರೋಹಣ ನಡೆಯಲಿದೆ. ಮುಂಜಾನೆ 8:51ರಿಂದ ದೇವಿಯ ಶೋಭಾಯಾತ್ರೆ ಕಳೆ ಕಟ್ಟಲಿದೆ. ಅದೇ ದಿನ ಮಧ್ಯಾಹ್ನ 12:56ರಿಂದ ದೇವಿಯನ್ನು ಬಿಡಕಿಬಯಲಿನ ಗದ್ದುಗೆ ಮೇಲೆ ಪ್ರತಿಷ್ಠಾಪಿಸಲಾಗುತ್ತಿದೆ.
ಮಾರ್ಚ್ 1ರಿಂದ ಗದ್ದುಗೆ ಏರಿದ ಅಮ್ಮನಿಗೆ ಹಣ್ಣು, ಕಾಯಿ, ಉಡಿ ಸೇವೆ ಆರಂಭವಾಗಲಿದೆ. ಮಾ.7ರಂದು ಮುಂಜಾನೆ 10:30ಕ್ಕೆ ಜಾತ್ರೆ ಮುಕ್ತಾಯವಾಗಲಿದೆ. ಮಾ.18 ರಂದು ಯುಗಾದಿಯಂದು ದೇವಾಲಯದಲ್ಲಿ ದೇವಿಯ ಪುನಃ ಪ್ರತಿಷ್ಠೆ ನಡೆಯಲಿದೆ.