Advertisement

ಶಿರಸಿ ಜಾತ್ರೆ:2 ಟನ್‌ ಚಪ್ಪಲಿ-10 ಟನ್‌ ಹಸಿ ಕಸ ಸಂಗ್ರಹ!

10:41 AM Mar 04, 2018 | |

ಶಿರಸಿ: ಜಾತ್ರೆ ಎಂದರೆ ಎಲ್ಲರಿಗೂ ಒಂಥರಾ ಖುಷಿ. ಸ್ವತ್ಛ ಹಾಗೂ ಸುಂದರ ನಗರದಲ್ಲಿ ಜಾತ್ರೆ ನೋಡುವುದು ಎಲ್ಲರ ಮನಸ್ಸು. ಆದರೆ, ನಿನ್ನೆ ಹೋದ ಭಕ್ತರು, ಜಾತ್ರಾ ಪ್ರಿಯರು ಮಾಡಿದ ಕಸ ಇಂದು ಹೋಗುವ ಭಕ್ತರು ನೋಡಿದರೆ ಅಸಹ್ಯಪಡುತ್ತಾರೆ. ಇದಕ್ಕೆಂದೇ ಜಾತ್ರಾ ನಗರಿಯನ್ನು ಸ್ವಚ್ಛಗೊಳಿಸುವ ಪಡೆಯೇ ಇದೆ. ನಡುರಾತ್ರಿ ನಡೆಸುವ ಈ ಸೇವೆಯನ್ನು ಪ್ರೀತಿಯಿಂದಲೇ ಮಾಡುತ್ತಿದ್ದಾರೆ.

Advertisement

ಬಿಡಕಿಬಯಲು, ಗದ್ದುಗೆ ಸುತ್ತ, ಬಸ್‌ ನಿಲ್ದಾಣ ಸಮೀಪ, ತೊಟ್ಟಿಲುಗಳು, ಶಿವಾಜಿ ಚೌಕ, ಅಂಚೆ ವೃತ್ತ, ದೇವಿಕೆರೆ, ನಟರಾಜ್‌ ರಸ್ತೆ, ಕೋಟೆಕೆರೆ, ಮಾರಿಗುಡಿ ಸೇರಿದಂತೆ ಇತರೆಡೆ ನಡೆಯುವ ಜಾತ್ರಾ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಸ್ವಚ್ಛ ಅಭಿಯಾನ ಮಾಡುತ್ತಿದ್ದಾರೆ. ಆಹಾರ ನಿರೀಕ್ಷಕ ಆರ್‌.ಎಂ. ವೆರ್ಣೇಕರ್‌ ನೇತೃತ್ವದಲ್ಲಿ ಜೆಸಿಬಿ, ಹತ್ತಾರು ಟಿಪ್ಪರ್‌ ಬಳಸಿ ಸ್ವತ್ಛತೆ ಮಾಡುತ್ತಿದ್ದಾರೆ.

ನಡುರಾತ್ರಿ ಕೆಲಸ: ಜಾತ್ರಾ ಬಯಲು ಎಂದರೆ ನಡುರಾತ್ರಿ ತನಕವೂ ಹುಡುಗರು, ಹೆಣ್ಮಕ್ಕಳು ಓಡಾಡುತ್ತಾರೆ. ರಾತ್ರಿ ಎರಡು ಗಂಟೆಯ ತನಕವೂ ಜಾತ್ರೆ ನಡೆಯುತ್ತದೆ. ತೊಟ್ಟಿಲು, ಬಳೆಪೇಟೆಯಲ್ಲಿ ಖರೀದಿಗಳೂ ಜೋರಾಗಿರುತ್ತವೆ. ಜನರು ಮನೆಗೆ ಮರಳುತ್ತಿದ್ದರೆ ಮನೆಯಿಂದ ಕಣ್ಣುಜ್ಜಿಕೊಂಡು ಒಂದು ತಂಡ ಜಾತ್ರೆ ಪೇಟೆಗೆ ಬರುತ್ತದೆ.

ಕೈಯ್ಯಲ್ಲಿ ಗುದ್ದಲಿ, ಬುಟ್ಟಿ ಹಿಡಿದು, ಜೆಸಿಬಿ ಪಡೆದು ಯುದ್ಧಕ್ಕೆ ಸನ್ನದ್ಧರಾದಂತೆ ಬರುತ್ತಾರೆ. ಕೊರೆಯುವ ಚಳಿ ಇದ್ದರೂ ಬೆವರುತ್ತಾರೆ. ಅಷ್ಟು ಕಸವನ್ನು ತಡ ರಾತ್ರಿ 2 ಗಂಟೆಯಿಂದ ಬೆಳಗ್ಗೆ 6ರೊಳಗೆ ಸ್ವತ್ಛಗೊಳಿಸುತ್ತಾರೆ. ಕೇವಲ ಕಸ ತೆಗೆಯುವದು ಮಾತ್ರವಲ್ಲ, ಇಡೀ ರಥ ಬೀದಿ, ಜಾತ್ರಾ ಸುತ್ತಲಿನ ರಸ್ತೆಗಳನ್ನು ನೀರು ಹಾಕಿ ತೊಳೆಯುತ್ತಾರೆ.

ಚಪ್ಪಲಿಗಳೇ ಟನ್‌ಗಳಷ್ಟು!: ಜಾತ್ರೆಯಲ್ಲಿ ಕಸಗಳು ವೆರೈಟಿಯವೇ. ಪ್ಲಾಸ್ಟಿಕ್‌ ಕಪ್‌ಗ್ಳು, ಕೊಟ್ಟೆಗಳು, ಹಾಳೆಗಳು ಒಂದೆರಡೇ ಅಲ್ಲ. ಇವೇ ಹತ್ತು ಟನ್‌ ದಾಟಿದರೆ, ಕಲ್ಲಂಗಡಿ ಹಣ್ಣಿನ ಸಿಪ್ಪೆ ಆರು ಟನ್‌ ದಾಟುತ್ತದೆ. ಕಬ್ಬಿನ ಸಿಪ್ಪೆ ಮೂರು ಟನ್‌. ಹಸಿಕಸ  ಗೊಬ್ಬರಕ್ಕೆ ಬಳಸಿಕೊಂಡರೂ ಉಳಿದ ಕರಗದ, ಒಣ ಕಸಗಳು ನೇರವಾಗಿ ಡಂಪಿಂಗ್‌ ಯಾರ್ಡ್‌ ಗೆ ಹೋಗುತ್ತದೆ.ಆಹಾರ ನಿರೀಕ್ಷಕ ವೆರ್ಣೇಕರ್‌ ಅನಿಸಿಕೆ ಪ್ರಕಾರ ಹೊಸ ಹೊಸ ಚಪ್ಪಲಿಗಳೇ ಅಧಿ ಕವಿದೆ. ಜನರೇ ಚಪ್ಪಲಿ ಬಿಡುವ ಸೇವೆ ಆರಂಭಿಸಿದರೆ ಎಂಬ ಅನುಮಾನ ಬರುವಷ್ಟು ಬಿಟ್ಟು ಹೋಗಿದ್ದು ಆಗಿದೆ.

Advertisement

ಅಧಿಕವಾಯ್ತು: ಕಳೆದೆರಡು ವರ್ಷದ ಹಿಂದೆ ನಡೆದ ಜಾತ್ರೆಯಲ್ಲಿ ರವಿವಾರ, ಶುಕ್ರವಾರ ಸೇರಿಸಿದರೆ 18ರಿಂದ 25 ಟನ್‌ ಕಸ ಸಿಗುತ್ತಿತ್ತು. ಆದರೆ, ಈ ಬಾರಿ ಗುರುವಾರ 25 ಟನ್‌, ಶುಕ್ರವಾರದ ಕಸ 32 ಟನ್‌ ಆಗಿದೆ. ಅದು ಈ ವರ್ಷದ ದಾಖಲೆ ಕಸ ಎಂಬಷ್ಟು ನಿರ್ಮಾಣ ಆಗಿದೆ. ಅಂಗಡಿಕಾರರು ಹಸಿ ಕಸ, ಒಣಕಸ ಬೇರೆ ಮಾಡಿ ಕೊಡಲು ಸಹಕರಿಸುತ್ತಿದ್ದಾರೆ. ನಗರಸಭೆ ಅಲ್ಲಲ್ಲಿ ತ್ಯಾಜ್ಯ ಬುಟ್ಟಿಯನ್ನೂ ಇಟ್ಟಿದೆ. ಪೌರ ಕಾರ್ಮಿಕರು ಎತ್ತಿದ ಕಸವನ್ನು 25 ಟ್ರಿಪ್‌ ಮೂಲಕ ಕಸದ ಗುಡ್ಡೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಯ್ಯಲಾಗಿದೆ.

ಈ ಬಾರಿ ಒಂಬತ್ತು ನೀರಿನ ಟ್ಯಾಂಕರ್‌ ಬಳಸಿ ಜಾತ್ರಾ ಬೀದಿ ಸ್ವತ್ಛಗೊಳಿಸುತ್ತಿದ್ದಾರೆ. ತೊಳೆದ ನೀರು ಹರಿವಲ್ಲಿ ರೋಗಾಣು ಹರಡದಂತೆ ಔಷಧ ಕೂಡ ಸಿಂಪರಣೆ ಮಾಡುತ್ತಿದ್ದಾರೆ. 

ದೀಡ್‌ ನಮಸ್ಕಾರ ಹಾಕುವ ಭಕ್ತರಿಗೂ ಬೀದಿ ಮನೆ ಅಂಗಳದಂತೆ ಸ್ವಚ್ಛವಾಗಿರಬೇಕು. ಅದಕ್ಕಾಗಿ ಜಾತ್ರಾ ಬಯಲು ಸ್ವತ್ಛತೆಗೆ ಆದ್ಯತೆ ನೀಡಿದ್ದೇವೆ. ರಾತ್ರಿ 2ರಿಂದ ಬೆಳಿಗ್ಗೆ 6 ರ ತನಕ ಜಾತ್ರಾ ಬಯಲು ಸ್ವತ್ಛ ಮಾಡಿದರೆ, ಬೆಳಗ್ಗೆ 6:30ರಿಂದ ನಗರದ ಉಳಿದ ಭಾಗದ ಸ್ವಚ್ಛತೆ ಮಾಡಲಾಗುತ್ತಿದೆ.
 ಆರ್‌.ಎಂ.ವೆರ್ಣೇಕರ್‌ ಅಧಿಕಾರಿ, ನಗರಸಭೆ

ಜಾತ್ರೆ ವೇಳೆ ಯಾರಿಗೂ ಕಾಣದಂತೆ ಕೆಲಸ ಮಾಡುತ್ತಲಿರುವವರು ಪೌರ ಕಾರ್ಮಿಕರು. ಜಾತ್ರೆಗೆ ಬರುವ ಯಾತ್ರಿಕರ ಆರೋಗ್ಯ ಕಾಪಾಡುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ವಿಶೇಷ ಅಭಿನಂದನೆಗಳು. 

 ಡಾ| ರವಿಕಿರಣ ಪಟವರ್ಧನ್‌ ಪ್ರಸಿದ್ದ ಆಯುರ್ವೇದ ವೈದ್ಯ

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next