ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಕಾಲುಸಂಕ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂದು ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಶ್ವಾಸನೆ ಬಜೆಟ್‌ನಲ್ಲಿ ಈಡೇರದೇ ಇರುವುದು ಖೇದಕರ. ಗುಡ್ಡಗಾಡು ಪ್ರದೇಶದ ಸಂಪರ್ಕದ ಕೊರತೆಯನ್ನು ನಿಗಿಸುವಲ್ಲಿ ವಿಶೇಷ ಅನುದಾನವನ್ನ ಬಿಡುಗಡೆಗೊಳಿಸಬೇಕಾಗಿತ್ತು ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಜನವರಿ 15 ರಂದು ಶಿರಸಿಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಸಮಸ್ಯೆಗಳಲ್ಲಿ ಒಂದಾದ ಕಾಲುಸಂಕ ಅವಶ್ಯಕತೆಗಳ ಕುರಿತು ಬಜೆಟ್‌ನಲ್ಲಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕೆಂದು ನೀಡಲಾಗಿತ್ತು.
ಈ ವೇಳೆ ವಿಶೇಷ ಅನುದಾನ ನೀಡುವುದಾಗಿ ಆಶ್ವಾಸನೆ ನೀಡಿದ್ದಾಗಿಯೂ ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಕಾರ್ಯಪ್ರವೃತ್ತರಾಗದಿರುವ ಕುರಿತು ಅವರು ವಿಷಾದ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ 10,571 ಚ.ಕೀ.ಮೀ ವ್ಯಾಪ್ತಿಯಲ್ಲಿದ್ದು, ಅವುಗಳಲ್ಲಿ 8,500 ಚ.ಕೀ.ಮೀ ಅರಣ್ಯ, ಗುಡ್ಡಗಾಡು, ಹಳ್ಳತಗ್ಗುಗಳಿಂದ ಕೂಡಿದ ಪ್ರದೇಶವಾಗಿದ್ದು ಇರುತ್ತದೆ. ಗ್ರಾಮೀಣ ಭಾಗದಲ್ಲಿ ಸ್ವತಂತ್ರ ದೊರಕಿ 7 ದಶಕಗಳಾದರೂ ಇಂದಿಗೂ ಸಂಪರ್ಕದ ಕೊರತೆ ಕಾಣುತ್ತಿದೆ. ಗುಡ್ಡಗಾಡು ಜನರು ಸಂಪರ್ಕದ ಕೊರತೆಯಿಂದ ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಟ 500 ಕಾಲುಸಂಕ ಮಂಜೂರಾತಿಗೆ ವಿಶೇಷ ಆರ್ಥಿಕ ಅನುದಾನ ಘೋಷಿಸಬೇಕೆಂದು ಮುಖ್ಯಮಂತ್ರಿಗೆ ಅಂದು ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಕಾಲುಸಂಕ ಸಮಸ್ಯೆಯಿಂದ ಅತೀಹೆಚ್ಚು ಬೇಡಿಕೆ ಮತ್ತು ಅವಶ್ಯಕತೆ ಜಿಲ್ಲೆಯ ಇನ್ನೀತರ ಕ್ಷೇತ್ರಕ್ಕೆ ತುಲನೆ ಮಾಡಿದಾಗ ಶಿರಸಿ-ಸಿದ್ಧಾಪುರ ಕ್ಷೇತ್ರಕ್ಕೆ ಇರುವುದಾಗಿ ರವೀಂದ್ರ ನಾಯ್ಕ ತಿಳಿಸಿದರು.
ಇದನ್ನೂ ಓದಿ : ಪ್ರಜಾಪ್ರಭುತ್ವಕ್ಕೆ ಅಪಾಯವಿಲ್ಲ, ಕಾಂಗ್ರೆಸ್ ರಾಜಕೀಯವಾಗಿ ನಾಶವಾಗಿದೆ: ಸ್ಮೃತಿ ಇರಾನಿ