Advertisement

ಸಿರ್ಸಿ ಮೇಲ್ಸೇತುವೆ ಒಂದು ಮಾರ್ಗ ಬಂದ್‌

11:34 AM Dec 28, 2018 | Team Udayavani |

ಬೆಂಗಳೂರು: ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ (ಸಿರ್ಸಿ) ಮಲ್ಸೇತುವೆಯಲ್ಲಿ ಬಿಬಿಎಂಪಿಯಿಂದ ಮರುಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶುಕ್ರವಾರ (ಡಿ.28) ಸಂಜೆಯಿಂದ ಟೌನ್‌ಹಾಲ್‌ನಿಂದ ಮೈಸೂರು ರಸ್ತೆಗೆ ಸಂಪರ್ಕಿಸುವ ಮೇಲ್ಸೇತುವೆ ಮಾರ್ಗ ಬಂದ್‌ ಆಗಲಿದೆ.

Advertisement

ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟಿಕ್ಕಿಟಾರ್‌ ಮೊರೆ ಹೋಗಿರುವ ಪಾಲಿಕೆ, ಶುಕ್ರವಾರದಿಂದ ಮರುಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ. ಹೀಗಾಗಿ ಮೇಲ್ಸೇತುವೆಯ ಒಂದು ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿದ್ದು, ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕಾರ ನೀಡಬೇಕೆಂದು ಪಾಲಿಕೆ ಆಯುಕ್ತರು ಕೋರಿದ್ದಾರೆ.

ಮತ್ತೆ ಮತ್ತೆ ರಸ್ತೆ ಗುಂಡಿ ಸಮಸ್ಯೆ ಕಾಣಿಸಿಕೊಳ್ಳದಂತೆ ಮೇಲ್ಸೇತುವೆಯ ದುರಸ್ತಿಜಛಿ ಅತ್ಯಾಧುನಿಕ ತಂತ್ರಜ್ಞಾನದ ಟಿಕ್ಕಿಟಾರ್‌ ಪದರಗಳನ್ನು ಬಳಸಲಾಗುತ್ತಿದೆ. ಅದರಂತೆ 4.30 ಕೋಟಿ ರೂ. ವೆಚ್ಚದ ದುರಸ್ತಿ ಗುತ್ತಿಗೆಯನ್ನು ನಾಗೇಶ್‌ ಮಾಯಣ್ಣ ಸಾಯಿ ತ್ರಿಷಾ ಇನ್‌ಫ್ರಾ ಇಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ವಹಿಸಿದ್ದು, 40 ದಿನಗಳಲ್ಲಿ ಕಾಮಗಾರಿ ಮುಗಿಸುವಂತೆ ಗಡುವು ನೀಡಲಾಗಿದೆ.

ವಿಪರೀತ ದಟ್ಟಣೆ ಸಾಧ್ಯತೆ: ಮೇಲ್ಸೇತುವೆ ಮರುಡಾಂಬರೀಕರಣ ಕಾಮಗಾರಿ ನಡೆಸಲು ಕನಿಷ್ಠ ಎಂದರೂ ಎರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಇದರಿಂದಾಗಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಪಾಲಿಕೆ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಿದ್ದು, ಮೊದಲ ಹಂತವಾಗಿ ಟೌನ್‌ಹಾಲ್‌ನಿಂದ ಮೈಸೂರು ರಸ್ತೆ ಕಡೆಗಿನ ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲು ಪಾಲಿಕೆ ನಿರ್ಧರಿಸಿದೆ.

ಇದರಿಂದಾಗಿ ಟೌನ್‌ಹಾಲ್‌, ಜೆ.ಸಿ.ರಸ್ತೆ, ಕೆ.ಆರ್‌.ಮಾರುಕಟ್ಟೆ, ರಾಯನ್‌ ವೃತ್ತ, ಚಾಮರಾಜಪೇಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಆದರೆ, ಸಂಚಾರ ಪೊಲೀಸರು ಮಾತ್ರ ದಟ್ಟಣೆ ನಿವಾರಣೆಗೆ ಯಾವುದೇ ಯೋಜನೆ ರೂಪಿಸಿಲ್ಲ. ಜತೆಗೆ ಸಾರ್ವಜನಿಕರು ಯಾವ ರಸ್ತೆಗಳಲ್ಲಿ ಸಂಚರಿಸಬೇಕೆಂಬ ಮಾಹಿತಿಯನ್ನೂ ನಿಡದಿರುವುದು ವಾಹನ ಸವಾರರ ಕೋಪಕ್ಕೆ ಕಾರಣವಾಗಿದೆ.

Advertisement

ಪರ್ಯಾಯ ಮಾರ್ಗಗಳು ಯಾವುವು?
ಮಾರ್ಗ-1: ಟೌನ್‌ಹಾಲ್‌ನಿಂದ ಮೈಸೂರು ರಸ್ತೆಗೆ ಹೋಗಲು ಮೇಲ್ಸೇತುವೆ ಬದಲಿಗೆ ಎಡ ಭಾಗದ ರಸ್ತೆಯಲ್ಲಿ ಸಾಗಿ ಕೆ.ಆರ್‌.ಮಾರುಕಟ್ಟೆ ಸಿಗ್ನಲ್‌ನಲ್ಲಿ ಎಡ ತಿರುವು ಪಡೆಯಬೇಕು. ಅಲ್ಲಿಂದ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ಒಂದು ಕಿ.ಮೀ. ಸಾಗಿ ನಂತರ ಬಲ ತಿರುವು ಪಡೆದು ಟಿಪ್ಪು ಸುಲ್ತಾನ್‌ ಅರಮನೆ ರಸ್ತೆ ಮೂಲಕ ಸಾಗಿ ಮೈಸೂರು ರಸ್ತೆ ತಲುಪಬಹುದು.

ಮಾರ್ಗ 2: ಟೌನ್‌ಹಾಲ್‌ನಿಂದ ಮೈಸೂರು ರಸ್ತೆಯ ಮೇಲ್ಸೇತುವೆ ಎಡ ಭಾಗದ ರಸ್ತೆಯಲ್ಲಿ ಸಾಗಿ ಕೆ.ಆರ್‌.ಮಾರುಕಟ್ಟೆ ಸಿಗ್ನಲ್‌ನಿಂದ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ ಚಲಿಸಿ ಮೈಸೂರು ರಸ್ತೆ ತಲುಪುವುದು.

ಸಂಚಾರ ವ್ಯವಸ್ಥೆ ಹೇಗಿರುತ್ತದೆ?: ಮೇಲ್ಸೇತುವೆಯ ಒಂದು ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡುವುದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆವರೆಗೆ ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಮೇಲ್ಸೇತುವೆಯ ಮಾರ್ಗದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

ಸಂಜೆ ವೇಳೆ ಅದೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅಂದರೆ, ಮೈಸೂರು ರಸ್ತೆಯಿಂದ ನಗರಕ್ಕೆ ಬರುವ ರಸ್ತೆಯಲ್ಲಿ ಟೌನ್‌ಹಾಲ್‌ ಕಡೆಯಿಂದ ಮೈಸೂರು ರಸ್ತೆಗೆ ಹೋಗುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಇದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ತೀವ್ರ ಸಂಚಾರ ದಟ್ಟಣೆ ಉಂಟಾಗುವುದು ತಪ್ಪುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ. 

ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶುಕ್ರವಾರ ಸಂಜೆಯಿಂದ ಮೇಲ್ಸೇತುವೆ ಮರುಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ನಗರದಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಮಾರ್ಗವನ್ನು ಸಂಪೂರ್ಣ ಬಂದ್‌ ಮಾಡಿದ್ದು, ಮತ್ತೂಂದು ಮಾರ್ಗದಲ್ಲಿ ಪಾಳಿ ವ್ಯವಸ್ಥೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next