Advertisement

ಸಿರ್ಸಿ ಮೇಲ್ಸೇತುವೆ ವಾಹನ ಸಂಚಾರಕ್ಕೆ ನಿಷೇಧ

12:18 PM Dec 18, 2018 | Team Udayavani |

ಬೆಂಗಳೂರು: ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ (ಸಿರ್ಸಿ) ಮಲ್ಸೇತುವೆಯಲ್ಲಿ ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು “ಟಿಕ್ಕಿಟಾರ್‌’ ಮೊರೆ ಹೋಗಿರುವ ಬಿಬಿಎಂಪಿ, ತಾತ್ಕಾಲಿಕವಾಗಿ ಮೇಲ್ಸೇತುವೆಯ ಒಂದು ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಿದೆ. 

Advertisement

ಬೆಂಗಳೂರಿನ ಪ್ರಥಮ ಮೇಲ್ಸೇತುವೆ ಎಂಬ ಹೆಗ್ಗಳಿಕೆಯನ್ನು ಸಿರ್ಸಿ ಮೇಲ್ಸೇತುವೆ ಹೊಂದಿದೆ. ಆದರೆ, ಮೇಲ್ಸೇತುವೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾದ ಪರಿಣಾಮ, ನಿರಂತರವಾಗಿ ಗುಂಡಿ ಸಮಸ್ಯೆ ಕಾಡುತ್ತಿದ್ದು, ಸಾವು-ನೋವು ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಆ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ಮರುಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ಪಾಲಿಗೆ ಸಜ್ಜಾಗಿದೆ. 

ರಸ್ತೆಗುಂಡಿ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಅಧಿಕಾರಿಗಳು, ಮೇಲ್ಸೇತುವೆ ದುರಸ್ತಿ ಕಾರ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಟಿಕ್ಕಿಟಾರ್‌ ಬಳಲು ಮುಂದಾಗಿದ್ದು, 4.30 ಕೋಟಿ ರೂ. ವೆಚ್ಚದ ದುರಸ್ತಿ ಗುತ್ತಿಗೆಯನ್ನು ನಾಗೇಶ್‌ ಮಾಯಣ್ಣ ಸಾಯಿ ತ್ರಿಷಾ ಇನ್‌ಫ್ರಾ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ವಹಿಸಿದೆ.

ಕಾಮಗಾರಿಗೆ ಡಾಂಬರು ಬಂದಿಲ್ಲ: ಮೇಲ್ಸೇತುವೆಯ ಎರಡು ಬದಿಯ ರಸ್ತೆಗಳ ಮರುಡಾಂಬರೀಕರಣ ಕಾಮಗಾರಿ ನವೆಂಬರ್‌ ತಿಂಗಳಲ್ಲಿಯೇ ನಗರ ಸಂಚಾರ ಪೊಲೀಸರು ಅನುಮತಿ ನೀಡಿದ್ದು, ಪಾಲಿಕೆಯಿಂದ ಕಾರ್ಯಾದೇಶ ನೀಡಲಾಗಿದೆ. ಮುಂಬೈನಿಂದ ಬರಬೇಗಿದ್ದ ಟಿಕ್ಕಿಟಾರ್‌ ಗುತ್ತಿಗೆದಾರರ ಕೈಸೇರದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಟಿಕ್ಕಿಟಾರ್‌ ಬಂದ ಕೂಡಲೇ ಕಾಮಗಾರಿ ಆರಂಭವಾಗಲಿದ್ದು, ತಾತ್ಕಾಲಿಕವಾಗಿ ಸಂಚಾರ ನಿಷೇಧ ಮಾಡಲಾಗುತ್ತದೆ ಎಂದು ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್‌ ಕೆ.ಟಿ.ನಾಗರಾಜ್‌ ಹೇಳಿದರು. 

ನಾಲ್ಕು ತಿಂಗಳು ತಲೆನೋವು!: ಮುಂದಿನ 10 ದಿನಗಳಲ್ಲಿ ಮುಂಬೈನಿಂದ ಟಿಕ್ಕಿಟಾರ್‌ ಶೀಟ್‌ಗಳು ಗುತ್ತಿಗೆದಾರರಿಗೆ ಲಭ್ಯವಾಗಲಿದ್ದು, ಕಾಮಗಾರಿ ಆರಂಭವಾಗಲಿದೆ. ಕಾಮಗಾರಿಗಾಗಿ ಮೇಲ್ಸೇತುವೆ ಒಂದು ಭಾಗದಲ್ಲಿ ಸಂಚಾರ ನಿಷೇಧಿಸುವುದರಿಂದ ಕೆ.ಆರ್‌.ಮಾರುಕಟ್ಟೆ, ರಾಯನ್‌ ವೃತ್ತ, ಚಾಮರಾಜಪೇಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸಂಚಾರ ಬದಲಾವಣೆ ಮಾಡಲಾಗುತ್ತದೆ. ಇನ್ನು ಎರಡು ಬದಿಯ ನಾಲ್ಕು ಪಥದ 2.65 ಕಿಲೋ ಮೀಟರ್‌ ರಸ್ತೆಗೆ ಮರು ಡಾಂಬರೀಕರಣ ನಡೆಸಲು ಕನಿಷ್ಠ ನಾಲ್ಕು ತಿಂಗಳು ಬೇಕಾಗಿರುವುದರಿಂದ ತೀವ್ರ ಸಂಚಾರ ದಟ್ಟಣೆಯಿಂದ ಸವಾರರು ತೊಂದರೆ ಅನುಭವಿಸುವ ಸಾಧ್ಯತೆಯಿದೆ.

Advertisement

ಕಾಮಗಾರಿ ಹೇಗೆ ನಡೆಸಲಾಗುತ್ತದೆ: ಮೊದಲಿಗೆ ಕೆ.ಆರ್‌.ಮಾರುಕಟ್ಟೆಯಿಂದ ಮೈಸೂರು ರಸ್ತೆಯ ಕಡೆಗೆ ಹೋಗುವ ಪಥದಲ್ಲಿ ದುರಸ್ತಿ ನಡೆಯಲಿದೆ. ಅದರಂತೆ ರಾಯನ್‌ ವೃತ್ತದವರೆಗಿನ ಮೇಲ್ಸೇತುವೆಯ ಸಂಚಾರಕ್ಕೆ ಅವಕಾಶಕ್ಕೆ ಮಾಡಿಕೊಟ್ಟು, ನಂತರದಲ್ಲಿ ಮುಚ್ಚಲಾಗುತ್ತದೆ. ಎರಡನೇ ಹಂತದಲ್ಲಿ ಮೈಸೂರು ರಸ್ತೆಯಿಂದ ನಗರಕ್ಕೆ ಬರುವ ಮಾರ್ಗದಲ್ಲಿ ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಸಲಿದ್ದಾರೆ. ಹೀಗಾಗಿ ಮೊದಲ ಹಂತದ ಕಾಮಗಾರಿ ನಡೆಯುವ ವೇಳೆ ಮೇಲ್ಸೇತುವೆಯಲ್ಲಿ ಎಡಕ್ಕೆ ತಿರುಗಿ ರಾಯನ್‌ ವೃತ್ತ ತಲುಪಿ, ಅಲ್ಲಿಂದ ಮೈಸೂರು ರಸ್ತೆಗೆ ತಲುಪಬೇಕಾಗುತ್ತದೆ.

ಠೇವಣಿ ಮುಟ್ಟುಗೋಲು: ಮೇಲ್ಸೇತುವೆ ದುರಸ್ತಿ ಕಾಮಗಾರಿಯನ್ನು 2014ರಲ್ಲಿ ಆರ್‌ ಟ್ರೆ ಇನ್‌ಫ್ರಾ ಪ್ರಾಜೆಕ್ಟ್ ಸಂಸ್ಥೆಗೆ ವಹಿಸಲಾಗಿತ್ತು. ಈ ವೇಳೆ ಮೇಲ್ಸೇತುವೆಯನ್ನು 5 ವರ್ಷ ನಿರ್ವಹಿಸುವ ಜವಾಬ್ದಾರಿಯನ್ನು ಸಂಸ್ಥೆಗೆ ನೀಡಲಾಗಿತ್ತು. ಆದರೆ, ಸಂಸ್ಥೆ ಟೆಂಡರ್‌ ಷರತ್ತುಗಳನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ ಟೆಂಡರ್‌ ರದ್ದುಪಡಿಸಿದ ಅಧಿಕಾರಿಗಳು, ಕಂಪೆನಿಯ 11.13 ಲಕ್ಷ ರೂ. ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. 

ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೇಲ್ಸೇತುವೆ ಮರುಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಂಕ್ರಿಟ್‌ ರಸ್ತೆಯ ಮೇಲೆ ಸಾಮಾನ್ಯ ಡಾಂಬರು ಸರ್ಮಕವಾಗಿ ಉಳಿಯುವುದಿಲ್ಲ. ಹೀಗಾಗಿ ರಸ್ತೆಯ ಒಂದು ಪದರ ಡಾಂಬರು ತೆರವುಗೊಳಿಸಿ, 3 ಎಂಎಂ ದಪ್ಪದ ಟಿಕ್ಕಿಟಾರ್‌ ಶೀಟ್‌ ಹೊದಿಸಿದ ನಂತರದಲ್ಲಿ 40 ಎಂಎಂ ದಪ್ಪದ ಬಿಟುವಿನ್‌ ಹಾಕಲಾಗುತ್ತದೆ.
-ಕೆ.ಟಿ.ನಾಗರಾಜ್‌, ಮುಖ್ಯ ಎಂಜಿನಿಯರ್‌ (ಯೋಜನೆ)

Advertisement

Udayavani is now on Telegram. Click here to join our channel and stay updated with the latest news.

Next