Advertisement

ಕಟ್ಟುವ ಕೆಲಸಕ್ಕೆ ಮತ್ತೂಂದು ಹೆಸರೇ ಸರ್‌ಎಂವಿ

11:17 AM Sep 16, 2018 | Team Udayavani |

ಮೈಸೂರು: ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದು ನಾಡು ಕಟ್ಟಿದ ಮಹಾ ಮೇಧಾವಿ ಎಂಜಿನಿಯರ್‌ ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ. ಶಿಸ್ತು, ಶ್ರದ್ಧೆ, ದುಡಿಮೆಯ ಪ್ರತಿರೂಪದಂತಿದ್ದ ಅವರು ಕಟ್ಟುವ ಕೆಲಸಕ್ಕೆ ಮತ್ತೂಂದು ಹೆಸರೇ ಆಗಿದ್ದರು ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

Advertisement

ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಅಶೋಕಪುರಂನ ರೈಲ್ವೆ ಕಾರ್ಯಾಗಾರ ಕಾಲೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಜಿನಿಯರ್‌ಗಳ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು. 

ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸದಾಶಯದ ಹಂಬಲದಂತೆ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಹಿಡಿದಿಟ್ಟು ಕನ್ನಂಬಾಡಿ ಕಟ್ಟೆ ಕಟ್ಟಿ ಬೆಂಗಾಡಲ್ಲೆಲ್ಲಾ ಬಂಗಾರದ ಬೆಳೆಯಾಗಿಸಿದ ವಿಶ್ವೇಶ್ವಯ್ಯನವರಂತಹ ಬಂಗಾರದ ಮನುಷ್ಯನ ಮೆದುಳಿಗೆ ಇಂದಿನ ಯಾವ ಅತ್ಯಾಧುನಿಕ ಕಂಪ್ಯೂಟರ್‌ಗಳೂ ಸಮವಲ್ಲ.

ಇಂತಹ ಅದ್ಭುತ ಮೆದುಳಿನ ವಿಶ್ವೇಶ್ವರಯ್ಯನವರ ತಲೆಯಲ್ಲರಳಿ ಕಾರ್ಯರೂಪಗೊಂಡ ಯೋಜನೆಗಳು ಅಸಂಖ್ಯಾತ. ಅಭಿವೃದ್ಧಿಯ ಮಹಾಮಾಗ‌ìದಲ್ಲಿ ಆಧುನಿಕ ಭಾರತವನ್ನು ಮುನ್ನಡೆಸಿದವರ ಪೈಕಿ ಮೊದಲ ಸಾಲಿನಲ್ಲೇ ಸಿಗುವ ಹೆಸರು ಇವರದು ಎಂದರು.

ಕಾಯಕಯೋಗಿ: ವಿಶ್ವೇಶ್ವರಯ್ಯನವರ ಹೆಸರು ಜಗತ್ತಿನಲ್ಲಿ ಯಾವತ್ತೂ ಅಜರಾಮರ. ಸರ್‌ ಎಂವಿ ಯಂಥ ಮೇಧಾವಿ ಎಂಜಿನಿಯರನ್ನು ಇನ್ನೆಂದಿಗೂ ಕಾಣಲಾಗದೆಂದು ಜಗತ್ತು ಎಂದೋ ನಿರ್ಧರಿಸಿಯಾಗಿದೆ. ಇಂಥ ಬುದ್ಧಿಶಾಲಿ, ಕ್ರಿಯಾಶಾಲಿ, ನಿಸ್ವಾರ್ಥಿ, ಸರಳಜೀವಿ, ದೇಶಪ್ರೇಮಿ, ಕಾಯಕಯೋಗಿ ಶ್ರೇಷ್ಠ ಎಂಜಿನಿಯರ್‌ ವಿಶ್ವೇಶ್ವರಯ್ಯ ಈ ನಾಡಿಗೆ, ಈ ದೇಶಕ್ಕೆ, ಈ ಪ್ರಪಂಚಕ್ಕೆ ಕೊಟ್ಟ ಅನುಪಮ ಕೊಡುಗೆ ಒಂದೆರಡಲ್ಲ ಅಸಂಖ್ಯಾತ, ಇವತ್ತಿಗೂ ಅವು ವಿಶ್ವೇಶ್ವರಯ್ಯನವರ ಹೆಸರನ್ನು ಪಠಿಸುತ್ತಿವೆ ಎಂದು ಹೇಳಿದರು.

Advertisement

ಓರಿಗಾಮಿ ಕಲಾವಿದ ಎಚ್‌.ವಿ.ಮುರಳೀಧರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್‌ ಎಂವಿ ಅವರ ಪ್ರಾಮಾಣಿಕತೆ, ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಇಂದಿನ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕೆಂದರು. ಕಾರ್ಯಕ್ರಮದಲ್ಲಿ  ನಿವೃತ್ತ ಎಂಜಿನಿಯರ್‌ ಎಚ್‌.ವಿ.ಗಣೇಶ್‌, ಮುಖ್ಯ ಶಿಕ್ಷಕಿ ಎಸ್‌. ಪದ್ಮಾಂಬ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ, ವಿದ್ಯಾರ್ಥಿಗಳಾದ ಮಹಮದ್‌ ಇಬ್ರಾಹಿಂ, ದೀನು, ಇರ್ಫಾನ್‌ ಪಾಷಾ, ಪ್ರಜ್ವಲ್‌, ಸಾಕೀಬ್‌, ತಿಲಕ್‌, ಸಿದ್ದರಾಜು ಅವರಿಗೆೆ ಪ್ರತಿಷ್ಠಾನದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಮುಖ್ಯ ಶಿಕ್ಷಕ್ಷಿ  ಎಸ್‌.ಪದ್ಮಾಂಬ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್‌.ಕೆ.ಕಾವೇರಿಯಮ್ಮ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next