Advertisement

ಸಿರವಾರ ಅಭಿವೃದ್ಧಿಗೆ ಗ್ರಹಣ

03:23 PM Sep 16, 2019 | Naveen |

ಮಹೇಶ ಪಾಟೀಲ
ಸಿರವಾರ:
ಸ್ಥಳೀಯ ಪಟ್ಟಣ ಪಂಚಾಯಿತಿ ಯಲ್ಲಿ ಕಳೆದ 10 ತಿಂಗಳಿನಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯಿಲ್ಲದೆ ಪಂಚಾಯಿತಿ ಅನಾಥವಾಗಿದ್ದು ಅಭಿವೃದ್ಧಿ ಕುಂಠಿತವಾಗುತ್ತಿದೆ.

Advertisement

ಸಿರವಾರ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ 2016 ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆದು, ಮೇ ತಿಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಆಡಳಿತ ಮಂಡಳಿ ರಚನೆಯಾಗಿತ್ತು, ನಂತರ ಸರ್ಕಾರದ ನಿಯಮದಂತೆ 30 ತಿಂಗಳ ಅವಧಿ ಮುಗಿದಿದೆ. ಎರಡನೇ ಅವಧಿಗೆ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಪಟ್ಟಣದ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿದೆ.

ಹೈಕೋರ್ಟ್‌ ಮೊರೆ: ಪಟ್ಟಣ ಪಂಚಾಯಿತಿ ಮೊದಲನೇ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ನೀಡಲಾಗಿತ್ತು. ಎರಡನೇ ಅವಧಿಗೆ ಪರಿಶಿಷ್ಟ ಜಾತಿಗೆ ಅಧ್ಯಕ್ಷ, ಪರಿಶಿಷ್ಟ ಪಂಗಡಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು. ಆದರೆ ಮೀಸಲಾತಿ ಬದಲಿಗೆ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರಿಂದ ಮತ್ತು ಈವರೆಗೆ ತೀರ್ಪು ಪ್ರಕಟವಾಗದ್ದರಿಂದ ಆಡಳಿತ ಮಂಡಳಿ ರಚನೆಗೆ ಹಿನ್ನಡೆ ಆಗಿದೆ.

ಸಾಮಾನ್ಯ ಸಭೆಯಿಲ್ಲ: ವಿಧಾನಸಭೆ ಚುನಾವಣೆ ನಡೆದು ನೂತನ ಶಾಸಕರು ಅಧಿಕಾರಕ್ಕೆ ಬಂದ ನಂತರ ಈವರೆಗೆ ಒಮ್ಮೆ ಸದಸ್ಯರ ಸಭೆ ನಡೆಸಲಾಗಿದೆ. ನಂತರ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಕಳೆದ 1 ವರ್ಷದಿಂದ ಸಾಮಾನ್ಯ ಸಭೆ ನಡೆಸಿಲ್ಲ. ಇದರಿಂದಾಗಿ ಪಟ್ಟಣದಲ್ಲಿನ ಸಮಸ್ಯೆಗಳ ಚರ್ಚೆಗೆ ಅವಕಾಶ ವಿಲ್ಲದಾಗಿದೆ.

ಸದಸ್ಯರಿಗಿಲ್ಲ ಸ್ಪಂದನೆ: ಪಟ್ಟಣ ಪಂಚಾಯಿತಿ ಸದಸ್ಯರು ತಮ್ಮ ವಾರ್ಡ್‌ನಲ್ಲಿನ ಚರಂಡಿ, ಕುಡಿಯುವ ನೀರು ಇತರೆ ಮೂಲ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಹೋದರೆ ಮುಖ್ಯಾಧಿಕಾರಿಯಿಂದ ಹಿಡಿದು ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಸಮಸ್ಯೆಗೆ ಪರಿಹಾರವಿಲ್ಲದೆ ಸದಸ್ಯರು ವಾರ್ಡ್‌ನ ಜನರಿಂದ ದಿನನಿತ್ಯ ಛೀಮಾರಿ ಹಾಕಿಸಿಕೊಳ್ಳಿವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next