Advertisement

ಅಪಾಯವಿಲ್ಲದ ಜಲರಾಶಿ ಸಿರಿಮನೆ ಫಾಲ್ಸ್‌

09:11 PM Sep 25, 2019 | mahesh |

40 ಅಡಿ ಎತ್ತರದಿಂದ ಜಿಗಿಯುವ ಈ ಜಲಪಾತ ಅಷ್ಟೇನೂ ಅಪಾಯಕಾರಿ ಯಲ್ಲ. ಸುಲಭವಾಗಿ ಇಳಿದು ನೀರಿನಲ್ಲಿ ಆಟವಾಡಬಹುದು. ಸಿರಿಮನೆ ಫಾಲ್ಸ್‌ಗೆ ಹೋಗಲು ಅನುಕೂಲಕರ ರಸ್ತೆ ಇದೆ. ಮಳೆಗಾಲ ಮುಗಿದ ಸೆಪ್ಪಂಬರ್‌ನಿಂದ ಫೆಬ್ರವರಿ ಕೊನೆಯವರೆಗೆ ಸೂಕ್ತ ಸಮಯ.

Advertisement

ಹಿತವಾಗಿ ಸುರಿಯುವ ಮಳೆ, ರಸ್ತೆಯುದ್ದಕ್ಕೂ ಮೈದುಂಬಿಕೊಂಡಿರುವ ಮಂಜು. ಆ ಮಂಜಿನ ನಡುವೆ ಹೆಡ್‌ಲೈಟ್‌ಗಳನ್ನು ಉರಿಸುತ್ತಾ ಸಾಗುತ್ತಿರುವ ವಾಹನಗಳು, ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ತೊರೆಗಳು, ಈ ಮಳೆ-ಮಲೆನಾಡಿನ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ? ಮಳೆಗಾಲದಲ್ಲಿ ಮಲೆನಾಡಿನ ಪ್ರದೇಶಗಳಿಗೆ ಒಮ್ಮೆ ನೀವು ಪ್ರವಾಸ ತೆರಳಲೇಬೇಕು. ದಿನನಿತ್ಯದ ಜಂಜಾಟದಲ್ಲಿ ವ್ಯಸ್ತರಾದವರಿಗೆ ಮಲೆನಾಡಿನ ಪ್ರಕೃತಿ ಸೌಂದರ್ಯ ಖುಷಿ ನೀಡುತ್ತದೆ. ಇದರೊಂದಿಗೆ ಸುರಿಯುವ ಚಿಟ ಪಟ ಮಳೆಗೆ ಮೈಯೊಡ್ಡಿ ನಿಂತರೆ ಅದಕ್ಕಿಂತ ಸ್ವರ್ಗ ಬೇರೆ ಬೇಕೆ?

ಅಂದು ಕೂಡ ಹೀಗೆ ಚಿಟ ಪಟ ಮಳೆ ಸುರಿಯುತ್ತಿತ್ತು. ಮನೆಯಲ್ಲಿ ಒಂದಿಷ್ಟು ಸಮಾನ ಮನಸ್ಸಿನವರು ಸೇರಿದ್ದೆವು. ಎಲ್ಲಿಗಾದರೂ ಟ್ರಿಪ್‌ ಹೋಗೋಣ ಎಂಬ ಪ್ಲಾನ್‌ ಒಬ್ಬನಲ್ಲಿ ಹೊಳೆದಿದ್ದೇ ತಡ. ಎಲ್ಲರ ಬಾಯಿಯಲ್ಲಿ ಬಂದಿದ್ದು ಆಗುಂಬೆ. ಆಗುಂಬೆಯ ಸೌಂದರ್ಯವನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವೇ? ದೂರದಿಂದಲೇ ಕೈಬೀಸಿ ಎಂಥವರನ್ನೂ ತನ್ನತ್ತ ಸೆಳೆ ಯುವ ಶಕ್ತಿ ಈ ತಾಣಕ್ಕಿದೆ. ದಕ್ಷಿಣದ ಚಿರಾಪುಂಜಿ ಎಂದೇ ಖ್ಯಾತಿಯಾಗಿರುವ ಆಗುಂಬೆಯಲ್ಲಿ ಮಳೆ ಸುರಿಯುತ್ತಲೇ ಇರುತ್ತದೆ. ಆಗುಂಬೆ ಹೆಸರು ಕೇಳುವಾಗಲೇ ಮೈಮನ ಗಳಲ್ಲಿ ಪುಳಕವಾಗುತ್ತದೆ. ಇನ್ನು ಅಲ್ಲಿಗೆ ಹೋಗದೇ ಸುಮ್ಮನಿದ್ದರೆ ಮನಸ್ಸು ಕೇಳುವುದಿಲ್ಲ.

ಅಂತೂ ಇಂತೂ ಒಂದು ನಿರ್ಧಾರಕ್ಕೆ ಬಂದು ಐದು ಬೈಕ್‌ಗಳಲ್ಲಿ 10 ಜನ ಮಳೆಯನ್ನು ಲೆಕ್ಕಿಸದೆ ಆಗುಂಬೆ ಘಾಟಿಯನ್ನು ಹತ್ತಿಯೇ ಬಿಟ್ಟವು. ತಿರುವುಗಳನ್ನು ದಾಟುತ್ತಾ ಅಂತೂ ಆಗುಂಬೆಯ ತುದಿ ತಲುಪಿ ಮಳೆಯಲ್ಲಿ ಬಿಸಿ ಬಿಸಿ ಬಜ್ಜಿ ತಿಂದೆವು. ಕುಂದಾದ್ರಿ ಬೆಟ್ಟಕ್ಕೆ ತೆರಳಿ ಅಲ್ಲಿಂದ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದು ಮತ್ತೆ ಬೈಕನ್ನೇರಿ ಹೊರಟಿದ್ದು ಸಿರಿಮನೆ ಜಲಪಾತದತ್ತ.

ಮಳೆಗಾಲದಲ್ಲಿ ಸಿರಿಮನೆ ಫಾಲ್ಸ್‌ ಮೈದುಂಬಿರು ತ್ತದೆ. ಸುಲಭವಾಗಿ ತಲುಪಿ ಈ ಜಲಪಾತದಲ್ಲಿ ಮನದಣಿಯೆ ವಿಹರಿಸ ಬಹುದು. ಧುಮ್ಮಿಕ್ಕಿ ಹರಿಯುವ ಜಲಪಾತದ ನೀರಿನಲ್ಲಿ ಚಳಿ, ಮಳೆ ಯಾವುದನ್ನೂ ಲೆಕ್ಕಿಸದೆ ನೀರಲ್ಲಿ ಆಟ ಆಡಿದ್ದೇ ಆಡಿದ್ದು. ಸ್ನಾನ, ಈಜು ಮುಗಿಸಿ ನೀರಿನಿಂದ ಮೇಲೆ ಬಂದಾಗ ಚಳಿಯಲ್ಲಿ ಮೈಯೆಲ್ಲ ನಡುಗುತ್ತಿತ್ತು. ಇಂಥ ಅನುಭವವನ್ನು ನೀವೂ ಪಡೆಯಲೇಬೇಕು. ಸಿರಿಮನೆ ಫಾಲ್ಸ್‌ ನಲ್ಲಿ ಜಲಾಭಿಷೇಕಗೊಂಡ ನಾವು ಮತ್ತೆ ಬೈಕ್‌ ಹತ್ತಿ ದಾರಿಯಲ್ಲೇ ಸಿಕ್ಕ ಸಣ್ಣ ಗೂಡಂಗಡಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿಯುತ್ತಾ ಮಲೆನಾಡಿನಿಂದ ಕರಾವಳಿಗೆ ವಾಪಸಾದೆವು.

Advertisement

ಶೃಂಗೇರಿ ಮಠಕ್ಕೆ ಭೇಟಿ ನೀಡುವವರು ಸಿರಿಮನೆ ಜಲಪಾತಕ್ಕೂ ಭೇಟಿ ಕೊಟ್ಟರೆ ಸೂಕ್ತ. ಶೃಂಗೇರಿಯಿಂದ ಸುಮಾರು 10 ಕಿಲೋ ಮೀಟರ್‌ ದೂರದಲ್ಲಿ ಕಿಗ್ಗ ಎಂಬ ಹಳ್ಳಿಯೊಂದಿದೆ. ಅಲ್ಲಿಂದ ಸುಮಾರು ಐದು ಕಿ.ಮೀ. ಕ್ರಮಿಸಿದರೆ ಸಿರಿಮನೆ ಫಾಲ್ಸ್‌ ಸಿಗುತ್ತದೆ. ಪಶ್ವಿ‌ಮ ಘಟ್ಟಗಳ ಜಲಪಾತಗಳಲ್ಲಿ ಈ ಜಲಪಾತವು ಅಪೂರ್ವ ಸೌಂದರ್ಯದಿಂದ ಕೂಡಿದೆ. ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಟೂರ್‌ ಹೋಗಲು ಈ ಸ್ಥಳ ಸೂಕ್ತ ಮತ್ತು ಪ್ರೇಕ್ಷಣೀಯ. ಅರಣ್ಯ ಪ್ರದೇಶ ಚಾರಣ ತಾಣಗಳ ಮಧ್ಯೆ ಈ ಜಲಪಾತದ ಸೊಬಗು ನೋಡುಗರ ಕಣ್ಮನ ಸೆಳೆಯುತ್ತದೆ. ಉಡುಪಿಯಿಂದ ಸುಮಾರು 96 ಕಿ.ಮೀ. ದೂರವಿದೆ. 40 ಅಡಿ ಎತ್ತರದಿಂದ ಜಿಗಿಯುವ ಈ ಜಲಪಾತ ಅಷ್ಟೇನೂ ಅಪಾಯಕಾರಿ ಯಲ್ಲ. ಸುಲಭವಾಗಿ ಇಳಿದು ನೀರಿನಲ್ಲಿ ಆಟವಾಡಬಹುದು. ಸಿರಿಮನೆ ಫಾಲ್ಸ್‌ಗೆ
ಹೋಗಲು ಅನುಕೂಲಕರ ರಸ್ತೆ ಇದೆ. ಮಳೆಗಾಲ ಮುಗಿದ ಸೆಪ್ಪಂಬರ್‌ನಿಂದ ಫೆಬ್ರವರಿ ಕೊನೆಯವರೆಗೆ ಈ ಫಾಲ್ಸ್‌ ನೋಡಲು ಸರಿಯಾದ ಸಮಯ.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಸಿರಿಮನೆ ಫಾಲ್ಸ್‌ಗೆ 113.5 ಕಿ.ಮೀ.
· ಶೃಂಗೇರಿಯಲ್ಲಿ ಇನ್ನಷ್ಟು ಪ್ರೇಕ್ಷಣೀಯ ಸ್ಥಳಗಳಿವೆ
· ಶೃಂಗೇರಿಯಿಂದ 15 ಕಿ.ಮೀ.
· ಕಿಗ್ಗದಿಂದ 5 ಕಿ.ಮೀ. ದೂರದಲ್ಲಿದೆ ಸಿರಿಮನೆ ಫಾಲ್ಸ್‌

- ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next