ಸಿರಿಗೆರೆ: ರಾಜ್ಯದಲ್ಲಿರುವ ಸುಮಾರು 1800ಕ್ಕೂ ಹೆಚ್ಚು ಭೂಮಾಪಕರ ಸೇವಾ ಭದ್ರತೆ, ನೌಕರಿ ಕಾಯಂಗೊಳಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಶನಿವಾರ ರಾತ್ರಿ ಸಭೆ ನಡೆಸಿದರು.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಭೂದಾಖಲೆ ವಿಭಾಗದ ಆಯುಕ್ತ ಮನೀಶ್ ಮೌದ್ಗಿಲ್, ಪ್ರಾಜೆಕ್ಟ್ ಮ್ಯಾನೇಜರ್ ಸುರೇಶ್ ನಾಯರ್, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಭೂದಾಖಲೆ ಇಲಾಖೆ ಅಧಿಕಾರಿ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಭೂಮಾಪಕರು ಸಭೆಯಲ್ಲಿ ಭಾಗವಹಿಸಿದ್ದರು.
ರಾಜ್ಯದ 30 ಜಿಲ್ಲೆಗಳಲ್ಲಿ ಸುಮಾರು 1800 ರಿಂದ 2000 ಭೂಮಾಪಕರಿದ್ದಾರೆ. ಅವರಲ್ಲಿ ಕೆಲವರು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ಇರುವುದಿಲ್ಲ. ಭೂಮಾಪನ ಕಾರ್ಯಕ್ಕೆ ಸಮರ್ಪಕವಾದ ಸೇವಾ ಶುಲ್ಕವೂ ವಿತರಣೆಯಾಗುತ್ತಿಲ್ಲ. ಜೊತೆಗೆ ಈ ನೌಕರರನ್ನು ತಮ್ಮ ಸ್ವಂತದ ತಾಲೂಕು ಕೇಂದ್ರಗಳಿಂದ ರಾಜ್ಯದ ಬಹು ದೂರದ ತಾಲೂಕುಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಭೂಮಾಪನ ಕೆಲಸ ಮಾಡುತ್ತಿರುವ ನೌಕರರ ಸಂಸಾರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಶ್ರೀಗಳು, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಹಂಗಾಮಿಯಾಗಿ ಕೆಲಸ ನಿರ್ವಹಿಸುತ್ತಿರುವ ಭೂಮಾಪಕರ ವಿಚಾರದಲ್ಲಿ ಸರ್ಕಾರ ಸೇವಾಭದ್ರತೆ ಕಲ್ಪಿಸಿಕೊಡಲು ಮುಂದಾಗಬೇಕಿತ್ತು. ಅದು ಬಿಟ್ಟು 2972 ಪರವಾನಗಿ ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿರುವುದು ಈ ನೌಕರರಲ್ಲಿ ಆತಂಕ ಹುಟ್ಟಿಸಿದೆ.