ಸಿರಿಗೆರೆ: ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸರ್ಕಾರದಿಂದ ಮಂಜೂರಾಗಿರುವ ಸಾಸ್ವೆಹಳ್ಳಿ, ಜಗಳೂರು ಹಾಗೂ ಭರಮಸಾಗರ ಏತ ನೀರಾವರಿ ಯೋಜನೆಗಳಿಗೆ ಅಡ್ಡಿಯಾಗುವ ಅಂಶಗಳ ನಿವಾರಣೆಗೆ ಮುಂದಾಗಬೇಕು ಎಂದು ಎರಡೂ ಜಿಲ್ಲೆಗಳ ಸಂಸದರು ಮತ್ತು ಶಾಸಕರಿಗೆ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೂಚಿಸಿದರು.
ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜನಪ್ರತಿನಿಧಿಗಳು ಹಾಗೂ ರೈತರ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ರೈತರು ಕೂಡ ಏತ ನೀರಾವರಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡದೇ ಇದ್ದರೆ ಅವು ಯಶಸ್ವಿಯಾಗುವುದಿಲ್ಲ. ಆದ್ದರಿಂದ ರೈತರು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಎಲ್ಲರಿಗೂ ನೀರು ಸಿಗಲಿ ಎಂಬ ವಿಶಾಲ ಮನೋಭಾವ ಬೆಳೆಸಿಕೊಂಡರೆ ನೀರಾವರಿ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು.
ಜಗಳೂರು ಭಾಗದ ಕೆರೆಗಳ ಯೋಜನೆಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 500 ಕೋಟಿ ರೂ.ಗಳನ್ನು ತಮ್ಮ ಬಜೆಟ್‌ನಲ್ಲಿ ಸೇರಿಸಿದ್ದರು. ನಂತರ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರ್ನಾಟಕ ನೀರಾವರಿ ನಿಗಮದ ಮೂಲಕ 1200 ಕೋಟಿ ರೂ. ಮಂಜೂರಾತಿಗೆ ಅನುಮತಿ ನೀಡಿದ್ದರು. ಇಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎರಡೂ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಹಿಂದಿನ ಸರ್ಕಾರಗಳು ಮಂಜೂರಾತಿ ನೀಡಿರುವ ಯೋಜನೆಗಳ ಮಾಹಿತಿ ನೀಡಿದ್ದೇವೆ. ಜಗಳೂರು ಕೆರೆಗಳ ಯೋಜನೆಗೆ 220 ಕೋಟಿ ಹಾಗೂ ಭರಮಸಾಗರ ಯೋಜನೆಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ರಾಜನಹಳ್ಳಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರಾಜನಹಳ್ಳಿ ಹತ್ತಿರದ ನದಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಹಾಗೆಯೇ ಮಲಶೆಟ್ಟಿಹಳ್ಳಿ ಹತ್ತಿರ 4 ಎಕರೆ ಜಾಕ್‌ವೆಲ್ ಬಳಿ ಸುಮಾರು 16 ಎಕರೆ ವಿಸ್ತೀರ್ಣದ ಜಮೀನಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೆರೆಯೊಂದನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ಈ ಯೋಜನೆ ಯಶಸ್ವಿಯಾಗಲಿದೆ. ಬಿಟ್ಟು ಹೋಗಿರುವ ಕೆರೆಗಳ ಸೇರ್ಪಡೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಜಿ.ಎಚ್. ತಿಪ್ಪಾರೆಡ್ಡಿ, ಎಸ್.ವಿ. ರಾಮಚಂದ್ರ, ಪ್ರೊ| ಲಿಂಗಣ್ಣ, ಎಂ. ಚಂದ್ರಪ್ಪ, ಮಾಡಾಳು ವಿರೂಪಾಕ್ಷಪ್ಪ, ಕಾಂಗ್ರೆಸ್ ಮುಖಂಡ ಎಚ್.ಎ. ಷಣ್ಮುಖಪ್ಪ, ಕೆರೆಗಳ ಹೋರಾಟ ಸಮಿತಿ ಅಧ್ಯಕ್ಷ ಡಾ| ಮಂಜುನಾಥ ಗೌಡ, ಚೌಲಿಹಳ್ಳಿ ಶಶಿ ಪಾಟೀಲ್ ಮೊದಲಾದವರು ಭಾಗವಹಿಸಿದ್ದರು.