ಸಿರವಾರ: ಸಸಿಗಳಿಗೆ ನೀರು ಹಾಕಿ ಬೆಳಸಿದರೆ ಪ್ರಕೃತಿ ತಾನಾಗಿಯೇ ನಮಗೆ ಮಳೆ ನೀಡುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ನೀಲಗಲ್ಲು ಬೃಹನ್ಮಠದ ಬಾಲಯೋಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಬಲ್ಲಟಗಿಯ ಲಿಂಗೈಕ್ಯ ವೇದಮೂರ್ತಿ ಬಸವಲಿಂಗ ತಾತನವರ ದೇವಸ್ಥಾನ ಸೇವಾ ಸಮಿತಿ, ಮಲ್ಲದಗುಡ್ಡದ ಶ್ರಮಜೀವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಸ್ವಾಮೀಜಿ ಮಾತನಾಡಿದರು.
ನಂಬಿಕೆಗಿಂತ ಮಿಗಿಲಾಗಿದ್ದು ಯಾವುದು ಇಲ್ಲ. ನಮ್ಮ ನಂಬಿಕೆ ಪ್ರಕೃತಿ ಮೇಲಿರಲಿ. ನಾವು ಪರಿಸರ ಬೆಳಸಿದರೆ ಅದು ನಮಗೆ ಜೀವನ ನೀಡುತ್ತದೆ. ಗಿಡಮರಗಳನ್ನು ಬೆಳೆಸುವುದರಿಂದ ಸಮಯಕ್ಕೆ ಸರಿಯಾಗಿ ಮಳೆ ಬೆಳೆಯಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಒಂದಾದರೂ ಸಸಿ ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಡಾ| ಶರಣಪ್ಪ ಬಲ್ಲಟಗಿ ಮಾತನಾಡಿ, ಇಂದಿನ ಅನಾರೋಗ್ಯ, ಬಿಸಿಲಿನ ತಾಪಮಾನ ಹೆಚ್ಚಳ, ನೀರಿನ ಕೊರತೆ ಪ್ರತಿಯೊಂದಕ್ಕೂ ಮಳೆ ಅಭಾವೊಂದೇ ಕಾರಣ. ನಮ್ಮ ಇಂದಿನ ದುಸ್ಥಿತಿ ಕೊನೆಗಾಣಲು ಪರಿಸರ ಬೆಳೆಸಿ ಪೋಷಣೆಯೊಂದೆ ಪರಿಹಾರ ಮಾರ್ಗ. ಹಾಗಾಗಿ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಬೆಳೆಸಬೇಕು ಎಂದು ಹೇಳಿದರು.
ಮಲ್ಲದಗುಡ್ಡದ ಶ್ರಮಜೀವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ಸಾವಿರ ಸಸಿಗಳನ್ನು ವಿತರಿಸಲಾಯಿತು.
ಬಲ್ಲಟಗಿಯ ಬಸವರಾಜಯ್ಯ ಸ್ವಾಮಿ ಹಿರೇಮಠ, ಮರಿಸ್ವಾಮಿ ಸಗರಮಠ, ಶ್ರಮಜೀವಿ ಸಂಸ್ಥೆಯ ಮಲ್ಲಯ್ಯ ಗೋರ್ಕಲ್, ಮಲ್ಲಣ್ಣ ಸಾಹುಕಾರ, ವೈ. ಬಸವನಗೌಡ, ಮುದ್ದಪ್ಪ ಸಾಹುಕಾರ, ಬಿ. ಬಸವರಾಜ, ಅಮರೇಶಗೌಡ ಸಜ್ಜನ, ಆದೇಶ ಸಗರಮಠ, ಬಸವಲಿಂಗ ಹೂಗಾರ, ಮೌನೇಶ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಇದ್ದರು.