Advertisement

ಕುಡಿವ ನೀರಿನ ಸಮಸ್ಯೆಗೆ ಮುಕ್ತಿ ಯಾವಾಗ?

11:06 AM May 03, 2019 | Team Udayavani |

ಸಿರವಾರ: ಸಮೀಪದ ಅತ್ತನೂರು ಗ್ರಾಮದ ಕೆರೆ ಸ್ವಚ್ಛಗೊಳಿಸುವ ಉದ್ದೇಶದಿಂದ ಕೆರೆಯಲ್ಲಿದ್ದ ನೀರನ್ನು ಖಾಲಿ ಮಾಡಿದ ಗ್ರಾಮ ಪಂಚಾಯಿತಿ ಕಾಲುವೆ ಮೂಲಕ ನೀರು ತುಂಬಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

Advertisement

ಅತ್ತನೂರು ಕೆರೆಗೆ ಕಾಲುವೆ ಮೂಲಕ ನೀರು ಹರಿಸಿ ತುಂಬಿಸಲಾಗುತ್ತಿತ್ತು. 2017ರಲ್ಲಿ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆಗ ಕೆರೆ ಖಾಲಿ ಮಾಡಿ ನೀರು ಬಿಡಲಾಗುತ್ತಿತ್ತು. ನಂತರ ಪ್ರತಿ ವರ್ಷ ಕೆರೆ ಸ್ವಚ್ಛ ಮಾಡಿ ಕೆರೆ ತುಂಬಿಸಲಾಗುತ್ತಿತ್ತು. ಪ್ರಸಕ್ತ ವರ್ಷ ಕೆರೆ ಸ್ವಚ್ಛಗೊಳಿಸುವ ಉದ್ದೇಶದಿಂದ ಎರಡು ತಿಂಗಳ ಹಿಂದೆಯೇ ಕೆರೆಯಲ್ಲಿನ ನೀರನ್ನು ಖಾಲಿ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಎರಡು ತಿಂಗಳಾದರೂ ಕೆರೆಗೆ ನೀರು ಹರಿಸಲು ನಿರ್ಲಕ್ಷ್ಯ ತೋರಿದೆ.

ಮೆಟಲಿಂಗ್‌ ಕಾಮಗಾರಿ: ಎರಡು ತಿಂಗಳ ಹಿಂದೆಯೇ ಕೆರೆಯಲ್ಲಿನ ನೀರು ಖಾಲಿ ಮಾಡಿದ್ದರೂ ಇದೀಗ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ 21ಲಕ್ಷ ಅನುದಾನದಲ್ಲಿ ಕೆರೆಯ ಒಂದು ಬದಿಗೆ ಮೆಟ್ಲಿಂಗ್‌ ಕಾಮಗಾರಿ ನಡೆಯುತ್ತಿದೆ. ಇದು ಕೂಡ ಕೆರೆಗೆ ನೀರು ಹರಿಸಲು ವಿಳಂಬವಾಗುತ್ತಿದೆ.

ದೂರದ ಕೆರೆಗಳೆ ಆಸರೆ: ಅತ್ತನೂರು ಕೆರೆ ಬರಿದಾಗಿದ್ದರಿಂದ ಗ್ರಾಮಸ್ಥರು ತಳ್ಳುವ ಗಾಡಿ, ಸೈಕಲ್, ಬೈಕ್‌ಗಳಲ್ಲಿ ಕೊಡಗಳನ್ನು ಹಾಕಿಕೊಂಡು ಅತ್ತನೂರು ಕ್ಯಾಂಪ್‌, ನೀಲಗಲ್, ಅತ್ತನೂರು ಹೊರವಲಯದಲ್ಲಿರುವ ಕೆರೆಗಳಿಗೆ ತೆರಳಿ ನೀರು ತರುವಂತಾಗಿದೆ.

ಶುದ್ಧೀಕರಣ ನೀರೂ ಅಶುದ್ಧ: ಗ್ರಾಮದಲ್ಲಿ ನೀರಿನ ಶುದ್ಧೀಕರಣ ಘಟಕವಿದೆ. ಆದರೆ ಈ ನೀರು ಕುಡಿದರೆ ಮೊಣಕಾಲು ನೋವು ಇತರೆ ಕಾಯಿಲೆ ಬರುತ್ತಿರುವುದರಿಂದ ಗ್ರಾಮಸ್ಥರು ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಹುಸಿ ಭರವಸೆ: ಕಲ್ಲೂರು ಜಿಪಂ ಕ್ಷೇತ್ರದ ಸದಸ್ಯರಾಗಿ ಅತ್ತನೂರಿನವರೇ ಇದ್ದಾರೆ. ಅತ್ತನೂರು ತಾಪಂ ಕ್ಷೇತ್ರಕ್ಕೂ ಸ್ಥಳೀಯರೇ ಆಯ್ಕೆಯಾಗಿದ್ದಾರೆ. ಅತ್ತನೂರು ಗ್ರಾಪಂ ಅಧ್ಯಕ್ಷರೂ ಸ್ಥಳೀಯರೇ ಇದ್ದರೂ ಕೆರೆ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆರೆ ಅಭಿವೃದ್ಧಿ ಭರವಸೆ ನೀಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕುಡಿಯುವ ನೀರಿನ ಕೆರೆ ಸ್ವಚ್ಛತೆ ಮಾಡಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಎರಡು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಂಗಾರಪ್ಪ ಕೆರೆಯಿಂದ ಕಾಲುವೆ ಮೂಲಕ ಅತ್ತನೂರು ಕೆರೆಗೆ ನೀರು ಹರಿಸಲಾಗುವುದು.
•ಮಹಾಂತೇಶ ಪಾಟೀಲ ಅತ್ತನೂರು,
ಜಿಪಂ ಸದಸ್ಯರು.

ಎರಡು ತಿಂಗಳ ಹಿಂದೆಯೇ ಕೆರೆಯನ್ನು ಖಾಲಿ ಮಾಡಲಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಹೆಚ್ಚಿದ್ದು ದೂರದಿಂದ ನೀರು ತರಬೇಕಿದೆ. ಈ ಸಮಸ್ಯೆಗೆ ಮುಕ್ತಿಯೆ ಇಲ್ಲದಂತಾಗಿದೆ.
••ಹೆಸರು ಹೇಳಲಿಚ್ಛಿಸದ ಗ್ರಾಮಸ್ಥ,
ಅತ್ತನೂರು

Advertisement

Udayavani is now on Telegram. Click here to join our channel and stay updated with the latest news.

Next