ಮಹೇಶ ಪಾಟೀಲ
ಸಿರವಾರ: ಪಟ್ಟಣದ ಬಯಲು ಆಂಜನೇಯ ದೇವಸ್ಥಾನದಿಂದ ಮಾರೆಮ್ಮ ದೇವಸ್ಥಾನದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಟ್ಟಡಗಳನ್ನು ತೆರವುಗೊಳಿಸಿ 8 ತಿಂಗಳಾದರೂ ರಸ್ತೆ ಕಾಮಗಾರಿ ಆರಂಭಿಸದ್ದರಿಂದ ನಿತ್ಯ ಜನ ಧೂಳಿನಲ್ಲೇ ಸಂಚರಿಸುವಂತಾಗಿದೆ.
ನಗರೋತ್ಥಾನ ಯೋಜನೆಯಡಿ ಪಟ್ಟಣದ ಬಯಲು ಆಂಜನೇಯ ದೇವಸ್ಥಾನದಿಂದ ಮಾರೆಮ್ಮ ದೇವಸ್ಥಾನದವರೆಗೆ ರಸ್ತೆ ಅಗಲೀಕರಣ ಮಾಡಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಲಕ್ಷಾಂತರ ರೂ. ಅನುದಾನ ಬಿಡುಗಡೆ ಆಗಿದೆ. ಗುತ್ತಿಗೆಯನ್ನೂ ನೀಡಲಾಗಿದೆ. ಕಟ್ಟಡಗಳ ತೆರವಿಗೆ ತೋರಿದ ಆತುರವನ್ನು ರಸ್ತೆ ಕಾಮಗಾರಿ ಆರಂಭಿಸಲು ತೋರುತ್ತಿಲ್ಲ. 8 ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಸಂಚಾರಕ್ಕೆ ತೊಂದರೆ ಆಗಿದೆ.
ಸಂಚಾರಕ್ಕೆ ತೊಂದರೆ: ರಸ್ತೆ ಅಗಲೀಕರಣಕ್ಕಾಗಿ ಕಟ್ಟಡಗಳನ್ನು ತೆರವುಗೊಳಿಸಿದ ನಂತರ ಎಲ್ಲೆಂದರಲ್ಲಿ ತಗ್ಗುಗಳು ಬಿದ್ದಿವೆ. ವಾಹನ ಸವಾರರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತ ಸಂಚರಿಸುತ್ತಿದ್ದಾರೆ.
ಧೂಳಿನ ಸಮಸ್ಯೆ: ರಸ್ತೆ ಅಗಲೀಕರಣದ ನಂತರ ರಸ್ತೆಯಲ್ಲಿ ಕಟ್ಟಡಗಳ ಮಣ್ಣು ಬಿದ್ದು, ಮೊದಲಿಗಿಂತಲೂ ಧೂಳಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ರಸ್ತೆ ಪಕ್ದ ಮನೆ, ಅಂಗಡಿಗಳು ಧೂಳು ಮಯವಾಗುತ್ತಿವೆ. ಧೂಳಿನಿಂದಾಗಿ ಕೆಲವರು ಕೆಮ್ಮು, ಶೀತದಿಂದ ಬಳಲುವಂತಾಗಿದೆ.
ಬಗೆಹರಿಯದ ರಸ್ತೆ ತೆರವು: ಪಟ್ಟಣ ಪಂಚಾಯಿತಿ ಸರ್ಕಾರದ ನಿರ್ದೇಶನದಂತೆ ಎರಡು ಬದಿ ಸೇರಿ 26 ಅಡಿ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಿತ್ತು. ಇದರಿಂದ ಮಾರ್ಗದ ಅನೇಕ ಮನೆಗಳಿಗೆ ತೊಂದರೆ ಉಂಟಾಗುತ್ತದೆ. ಕಡಿಮೆ ಮಾಡುವಂತೆ ಸ್ಥಳೀಯರ ಮನವಿ ಮೇರೆಗೆ 22ಅಡಿಗೆ ನಿಗದಿಪಡಿಸಲಾಗಿದೆ. ಮನೆಯವರು ಸ್ವಯಂಪ್ರೇರಿತವಾಗಿ ಕಟ್ಟಡಗಳನ್ನು ತೆರವುಗೊಳಿಸಿದರು. ನಂತರ ಪಟ್ಟಣದ ವಿವಿಧ ಸಂಘಟನೆಗಳು ಮೊದಲಿನ ಯೋಜನೆಯಂತೆ 26 ಅಡಿಗೆ ರಸ್ತೆ ಅಗಲೀಕರಣ ಮಾಡಬೇಕು. ಇದರಿಂದಾಗಿ ಸಂಚಾರಕ್ಕೆ ಅನುಕೂಲ ವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ಪ್ರಾರಂಭಿಸದೆ ಪಟ್ಟಣ ಪಂಚಾಯಿತಿ ಕಾಮಗಾರಿಗೆ ತಡೆ ನೀಡಿದೆ ಎನ್ನಲಾಗಿದೆ.
ಪಟ್ಟಣ ತಾಲೂಕು ಕೇಂದ್ರವಾಗಿದ್ದರೂ ಕೂಡ ಸಮಸ್ಯೆ ಗಳಿಗೆ ಮುಕ್ತಿ ಸಿಗುತ್ತಿಲ್ಲ. ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡಬೇಕಿದೆ.