ಸಿರವಾರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಅವರ ಸಂಕಲ್ಪದಂತೆ ಪಟ್ಟಣದ ಪುರಾತನ ಐತಿಹಾಸಕ ಹಿನ್ನೆಲೆಯ, ಬತ್ತಿಹೋದ ಊರುಬಾವಿಗೆ ಮರುಜೀವನ ನೀಡಲು ಪಟ್ಟಣದ ವಿವಿಧ ಸಂಘಟನೆಗಳು ಮುಂದಾಗಿವೆ.
Advertisement
ಯಾವುದೇ ಒಂದು ಗ್ರಾಮವಿದ್ದರೂ ಅದಕ್ಕೆ ಪ್ರಮುಖವಾದ ಒಂದು ಬಾವಿ ಇರುತ್ತದೆ. ಯಾವುದೇ ಧಾರ್ಮಿಕ ಕಾರ್ಯಗಳು ನಡೆದರೂ ಸಹ ಅಲ್ಲಿಂದ ನೀರನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡುವುದು ಪದ್ಧತಿ. ಅದರಂತೆ ಇಲ್ಲಿನ ಊರುಬಾವಿಯ ನೀರನ್ನು ಪಟ್ಟಣದ ವಿವಿಧ ದೇವಸ್ಥಾನ ಮತ್ತು ಮನೆಗಳಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳಿಗೆ ಪೂಜೆಗಾಗಿ ಬಳಸುತ್ತಿದ್ದರು.
Related Articles
Advertisement
ಪುನರುಜ್ಜೀವನಕ್ಕೆ ಸಂಕಲ್ಪ: ಕಸ ಕಡ್ಡಿ, ಬಳ್ಳಿ, ತ್ಯಾಜ್ಯದಿಂದ ತುಂಬಿದ ಊರುಬಾವಿಯನ್ನು ಇತ್ತೀಚೆಗೆ ಪಟ್ಟಣಕ್ಕೆ ಆಗಮಿಸಿದ್ದ ಎಸ್ಪಿ ಡಾ| ಸಿ.ಬಿ. ವೇದಮೂರ್ತಿ ವೀಕ್ಷಿಸಿದ್ದರು. ಸಾಮಾಜಿಕ ಕಳಕಳಿ ಮತ್ತು ಪರಿಸರ ಪ್ರೇಮಿಗಳಾದ ಎಸ್ಪಿ ಪುರಾತನ ಬಾವಿಯನ್ನು ಸ್ವಚ್ಛಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇವರ ಆಶಯಕ್ಕೆ ಪಟ್ಟಣದ ವಿವಿಧ ಸಂಘಟನೆಗಳ ಯುವಕರು, ಪಟ್ಟಣ ಪಂಚಾಯಿತಿ ಕೂಡ ಸಾಥ್ ನೀಡಲು ಮುಂದಾಯಿತು.
ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಊರಿನ ಮುಖಂಡರು, ಸರ್ಕಾರಿ ಅಧಿಕಾರಿಗಳು, ಖಾಸಗಿ ವೈದ್ಯರು, ಯುವಕರು ಎಸ್ಪಿ ಅವರ ಕಾರ್ಯಕ್ಕೆ ಕೈಜೋಡಿಸಿದ್ದು, ಶನಿವಾರವಷ್ಟೇ ಬಾವಿಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ರವಿವಾರ ಬೆಳಗ್ಗೆ ಭೇಟಿ ನೀಡಿದ್ದ ಎಸ್ಪಿ ಡಾ| ಸಿ.ಬಿ. ವೇದಮೂರ್ತಿ ಸ್ವತಃ ಬಾವಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿದರು.
ತ್ಯಾಜ್ಯ ಎಸೆಯದಂತೆ ಕ್ರಮ ಅಗತ್ಯ: ಬಾವಿ ಸಂಪೂರ್ಣ ಸ್ವಚ್ಛಗೊಂಡು ನೀರು ಸಂಗ್ರಹವಾದರೆ ಬಾವಿಯಲ್ಲಿ ಕಸ, ಕಡ್ಡಿ, ಪೂಜಾ ಸಾಮಗ್ರಿ ಎಸೆಯದಂತೆ ಬಾವಿಯ ಮೇಲೆ ಜಾಲರಿ ಹಾಕಬೇಕಿದೆ. ಈ ದಿಶೆಯಲ್ಲಿ ಪಟ್ಟಣ ಪಂಚಾಯಿತಿ ಅನುದಾನ ಮೀಸಲಿಟ್ಟು ಬಾವಿಯಲ್ಲಿ ನೀರು ಸಂಗ್ರಹಗೊಂಡ ನಂತರ ಶುದ್ಧೀಕರಣ ಘಟಕ ಅಳವಡಿಸಿ ನೀರು ಶುದ್ಧೀಕರಿಸಿ ಪೂರೈಕೆಗೆ ಮುಂದಾದಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗಾದರೂ ನೀಗಬಹುದು ಎಂಬುದು ಸಾರ್ವಜನಿಕರ ಆಶಯವಾಗಿದೆ.