Advertisement

ಗ್ರಾಹಕರಿಗೆ ವಿದ್ಯುತ್‌ ಬಿಲ್ ‘ಶಾಕ್‌’

12:06 PM Sep 15, 2019 | Naveen |

ಮಹೇಶ ಪಾಟೀಲ
ಸಿರವಾರ:
ಜೆಸ್ಕಾಂ ಇಲಾಖೆಯಿಂದ ಹೊಸ ಇಲೆಕ್ಟ್ರೋ ಸ್ಟ್ಯಾಟಿಕ್‌ ಮೀಟರ್‌ಗಳನ್ನು ಅಳವಡಿಸಿದ ನಂತರ ಸಾಮಾನ್ಯ ಮನೆಗಳ ಗ್ರಾಹಕರಿಗೂ ಯದ್ವಾತದ್ವಾ ಬಿಲ್ ಬರುತ್ತಿದ್ದು, ಗ್ರಾಹಕರು ಬಿಲ್ ನೋಡಿ ಬೆಚ್ಚಿಬೀಳುವಂತಾಗಿದೆ.

Advertisement

ಹೊಸ ಮೀಟರ್‌ ಅಳವಡಿಕೆ: ಸಿರವಾರ ಜೆಸ್ಕಾಂ ವ್ಯಾಪ್ತಿಯಲ್ಲಿ ಮಲ್ಲಟ, ಕವಿತಾಳ ಸೇರಿ ಒಟ್ಟು 3 ಸ್ಟೇಷನ್‌ಗಳು ಬರುತ್ತವೆ. ಕಳೆದ ಮೂರು ತಿಂಗಳ ಹಿಂದೆ ಜೆಸ್ಕಾಂ ಇಲಾಖೆ ವಿದ್ಯುತ್‌ ಮೀಟರ್‌ ಬದಲಾವಣೆಗೆ ವಿ.ಆರ್‌. ಪಾಟೀಲ ಎಂಬ ಕಂಪನಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಕಂಪನಿಯು ಮೊದಲಿದ್ದ ಇಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್‌ಗಳನ್ನು ತೆಗೆದು ಇಲೆಕ್ಟ್ರೋ ಸ್ಟ್ಯಾಟಿಕ್‌ ಮೀಟರ್‌ಗಳನ್ನು ಅಳವಡಿಸಿದೆ. ಸಿರವಾರ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಇಂತಹ ಮೀಟರ್‌ಗಳನ್ನು ಅಳವಡಿಸಲಾಗಿದೆ. ಈ ಮೀಟರ್‌ಗಳಿಂದ ಹೆಚ್ಚಿನ ವಿದ್ಯುತ್‌ ಬಿಲ್ ಬರುತ್ತಿದೆ ಎಂಬ ಗ್ರಾಹಕರ ಆರೋಪಗಳ ಮಧ್ಯೆಯೇ ಈ ತಿಂಗಳು ಕೆಲ ಗ್ರಾಹಕರಿಗೆ ನೀಡಲಾದ ವಿದ್ಯುತ್‌ ಬಿಲ್ ನೋಡಿ ಗ್ರಾಹಕರು ಕಂಗಾಲಾಗುವಂತಾಗಿದೆ. ಮೊದಲೆಲ್ಲ 300ರಿಂದ 400 ರೂ. ಬಿಲ್ ಬರುತ್ತಿದ್ದವರಿಗೆ ಈಗ ಸಾವಿರಾರು ಬಿಲ್ ಬರುತ್ತಿದೆ. ಇದು ಗ್ರಾಹಕರನ್ನು ಬೆಚ್ಚಿ ಬೀಳಿಸಿದೆ.

ಬಿಲ್ ದುಪ್ಪಟ್ಟು : ಹಳೆ ಮೀಟರ್‌ ಇದ್ದಾಗ ಸಿರವಾರ ಜೆಸ್ಕಾಂ ವ್ಯಾಪ್ತಿಯಲ್ಲಿ 65 ಲಕ್ಷ ಬಿಲ್ ವಸೂಲಿಯಾಗುತ್ತಿತ್ತು. ಆದರೆ ಹೊಸ ಮೀಟರ್‌ ಅಳವಡಿಕೆ ನಂತರ 75 ಲಕ್ಷ ರೂ. ಬಿಲ್ ವಸೂಲಿ ಆಗುತ್ತಿದೆ ಎನ್ನಲಾಗಿದೆ. ಇನ್ನು ತಿಂಗಳಿಗೆ 300 ರೂ. ಬರುತ್ತಿದ್ದ ತಿಂಗಳ ಬಿಲ್ ಇಲಾಖೆ ಎಡವಟ್ಟಿನಿಂದಾಗಿ ಏಕಾಏಕಿ 5 ಸಾವಿರ ದಾಟಿದ್ದು, ಗ್ರಾಹಕರು ಕಂಗಾಲು ಆಗುವಂತಾಗಿದೆ.

ಸಿರವಾರದ ಮೋಹನಕುಮಾರ ಎಂಬುವವರ ಮನೆಯ ಮೀಟರ್‌ಗೆ ಕಳೆದ ತಿಂಗಳು 63 ಯೂನಿಟ್ ಬಳಕೆಯಾಗಿ 380 ರೂ. ಬಿಲ್ ಬಂದಿತ್ತು. ಆದರೆ ಈ ತಿಂಗಳು 596 ಯೂನಿಟ್ ಸುಡಲಾಗಿದೆ ಎಂದು ತೋರಿಸಿ 2,721 ರೂ. ಬಿಲ್ ನೀಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಇದೇ ರೀತಿ ಹಲವು ಗ್ರಾಹಕರಿಗೆ ಹೆಚ್ಚಿನ ಬಿಲ್ ಬಂದಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ಅಧಿಕಾರಿ, ಸಿಬ್ಬಂದಿಗಳ ಬೇಜವಾಬ್ದಾರಿ: ಇನ್ನು ಬಿಲ್ ಕೊಡುವ ಸಂದರ್ಭದಲ್ಲಿ ಹೆಚ್ಚಿನ ಬಿಲ್ ಬಂದಾಗ ಗ್ರಾಹಕರು ಕೇಳಿದರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸದೇ ಅಧಿಕಾರಿಗಳತ್ತ ಕೈ ತೋರಿ ಜಾರಿಕೊಳ್ಳುತ್ತಿದ್ದಾರೆ. ಜೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಕೇಳಿದರೆ ಅವರು ಗುತ್ತಿಗೆದಾರರತ್ತ ಬೊಟ್ಟು ಮಾಡುತ್ತಾರೆ. ಹೀಗಾಗಿ ಗ್ರಾಹಕರು ದಾರಿ ಯಾವುದಯ್ಯ ಈ ಸಮಸ್ಯೆ ಪರಿಹಾರಕ್ಕೆ ಎಂದು ಕೇಳುವಂತಾಗಿದೆ. ಅಲ್ಲದೇ ಜೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ನಮ್ಮ ಮನೆಗೆ ಮೊದಲು ತಿಂಗಳಿಗೆ 300-400 ರೂ. ಬಿಲ್ ಬರುತ್ತಿತ್ತು. ಆದರೆ ಇಂದು ತಿಂಗಳಿಗೆ 5200 ರೂ. ಬಿಲ್ ಬಂದಿದೆ. ಈ ಕುರಿತು ಬಿಲ್ ನೀಡಲು ಬಂದವರನ್ನು ಕೇಳಿದರೆ ಮಾಹಿತಿ ನೀಡುತ್ತಿಲ್ಲ.
ಮಹಿಬೂಬ ಚಾಗಬಾವಿ,
ಗ್ರಾಹಕ

ನಮ್ಮ ಮನೆಗೆ ಮೊದಲು 400 ರೂ. ಬಿಲ್ ಬರುತ್ತಿತ್ತು. ಆದರೇ ಈ ತಿಂಗಳು 2700 ರೂ. ಬಿಲ್ ಬಂದಿದೆ. ಇದರಿಂದ ದುಡಿದ ಹಣವನ್ನು ಕೆಇಬಿ ಅವರಿಗೆ ಕಟ್ಟುವಂತಾಗಿದೆ. ಅಧಿಕಾರಿಗಳು ಈ ಸಮಸ್ಯೆ ಪರಿಹರಿಸಬೇಕು.
ನವೀನ ಮುಂಡೇವಾಡಿ,
 ಸಿರವಾರ ಗ್ರಾಹಕ.

ಹೊಸ ಮೀಟರ್‌ ಅಳವಡಿಕೆಯಿಂದ ಅನೇಕ ದೂರುಗಳು ಬರುತ್ತಿವೆ. ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸರಿಪಡಿಸುವಂತೆ ತಿಳಿಸಲಾಗಿದೆ. ಕೆಲವೊಮ್ಮ ಸಿಬ್ಬಂದಿಗಳ ತಪ್ಪಿನಿಂದಾಗಿ ಬಿಲ್ ಹೆಚ್ಚು ಬರುತ್ತಿದ್ದು, ಗ್ರಾಹಕರು ಯಾವುದೇ ಅನುಮಾನಗಳಿದ್ದಲ್ಲಿ ಕಚೇರಿಗೆ ಬಂದು ಸರಿಪಡಿಸಿಕೊಳ್ಳಬಹುದು.
ಸಿದ್ದಯ್ಯ,
ಎಇಇ ಜೆಸ್ಕಾಂ ಸಿರವಾರ

Advertisement

Udayavani is now on Telegram. Click here to join our channel and stay updated with the latest news.

Next