ಸಿರವಾರ: ಪಟ್ಟಣದ ಪುರಾತನ ಊರುಬಾವಿಯ ಸ್ವಚ್ಛತಾ ಕಾರ್ಯಕ್ಕೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಕಳೆದ ವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎಸ್.ಬಿ. ವೇದಮೂರ್ತಿ ಪುರಾತನ ಬಾವಿಗೆ ಭೇಟಿ ನೀಡಿ, ಹೂಳು ತುಂಬಿದ್ದನ್ನು ಗಮನಿಸಿ ಊರಿನ ಎಲ್ಲರ ಸಹಕಾರದಿಂದ ಬಾವಿ ಸ್ವಚ್ಛತೆ ಮಾಡಲು ತೀರ್ಮಾನಿಸಿದ್ದರು.
ಈ ಕಾರ್ಯಕ್ಕೆ ವಿವಿಧ ಸಂಘಟನೆಗಳು ಕೂಡಾ ಸಾಥ್ ನೀಡಲು ಮುಂದಾದರು. ಹೀಗಾಗಿ ಶನಿವಾರ ಪುರಾತನ ಬಾವಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ಕೆ ಪಟ್ಟಣದ ವಿವಿಧ ಸಂಘಟನೆಗಳ ಯುವಕರು ಸೇರಿದಂತೆ ತಹಶೀಲ್ದಾರ್ ಕೆ. ಶೃತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓಂಪ್ರಕಾಶ, ವೈದ್ಯಾಧಿಕಾರಿ ಸುನೀಲ ಸರೋದೆ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಣ್ಣಾರಾವ್ ನಾಯಕ ಕೂಡ ಕೈಜೋಡಿಸಿ ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾದರು. ಆದರೆ ಅನ್ಯ ಕಾರ್ಯ ನಿಮಿತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ವೇದಮೂರ್ತಿ ಗೈರಾಗಿದ್ದರು.
ಸ್ವಾಮೀಜಿ ಬೆಂಬಲ: ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಕೆಲ ಸಮಯ ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಊರಿನ ಮುಖಂಡರು, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಸಿಬ್ಬಂದಿ, ವೈದ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿ ಶ್ರಮದಾನ ಮಾಡಿದರು.