ಸಿರುಗುಪ್ಪ: ನಗರದ ತಾಲೂಕು ಕಚೇರಿಯಲ್ಲಿರುವ ಪಡಿತರ ಇಲಾಖೆಯಿಂದ ಪಡಿತರ ಚೀಟಿಗಳನ್ನು ಪಡೆಯಲು ಬಂದ ಸಾರ್ವಜನಿಕರು ಪಡಿತರ ಇಲಾಖೆ ಮುಂದೆ ಬೆಳಗಿನಿಂದ ಸಂಜೆವರೆಗೂ ಕಾದರೂ ಪಡಿತರ ಚೀಟಿ ನೀಡುವ ಅಧಿಕಾರಿಗಳಿಲ್ಲದೆ ಬೇಸತ್ತ ಸಾರ್ವಜನಿಕರು ತಹಶೀಲ್ದಾರ್ ಕಚೇರಿಯಲ್ಲಿ ಗಲಾಟೆ ಮಾಡಿದ ಘಟನೆ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿ, ಹೊಸ ಪಡಿತರ ಚೀಟಿ ಪಡೆಯಲು, ಹೆಸರು ಸೇರ್ಪಡೆ ಮಾಡಲು ಪಡಿತರ ಇಲಾಖೆ ಮುಂದೆ ಬೆಳಗಿನ 10ಗಂಟೆಯಿಂದಲೇ ಕಾಯುತ್ತಿದ್ದು ಸಂಜೆ 4 ಗಂಟೆಯಾದರೂ ರೇಷನ್ ಕಾರ್ಡ್‌ಗಳನ್ನು ನೀಡಲು ಯಾವುದೇ ಅಧಿಕಾರಿಗಳು ಇಲ್ಲದ ಕಾರಣ ಸಾರ್ವಜನಿಕರು ಗಲಾಟೆ ಮಾಡಿದರು.
ನಮ್ಮ ಸಮಸ್ಯೆಯನ್ನು ತಹಶೀಲ್ದಾರರ ಮುಂದೆ ತಿಳಿಸುತ್ತೇವೆ. ನಮಗೆ ತಹಶೀಲ್ದಾರ್ ರನ್ನು ಭೇಟಿ ಮಾಡಲು ಅವಕಾಶಕೊಡಿ ಎಂದು ಸಾರ್ವಜನಿಕರು ಒತ್ತಾಯಿಸಿದರು. ಕೋರ್ಟ್ ನಡೆಯುತ್ತಿರುವುದರಿಂದ ತಹಶೀಲ್ದಾರ್‌ರನ್ನು ಭೇಟಿಮಾಡಲು ಸಾಧ್ಯವಿಲ್ಲವೆಂದು ತಹಶೀಲ್ದಾರ್ ಕಚೇರಿ ಸಿಬ್ಬಂದಿ ತಿಳಿಸಿದ್ದು ಸಾರ್ವಜನಿಕರನ್ನು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿತು. ನಾವು ಬೆಳಗಿನಿಂದ ಕಚೇರಿ ಮುಂದೆಯೇ ಬಿಸಿಲಿನಲ್ಲಿ ತು ಕಾರ್ಡ್‌ಗಾಗಿ ಕಾಯುತ್ತಿದ್ದೇವೆ. ಆದರೆ ಒಬ್ಬ ಅಧಿಕಾರಿಯೂ ನಮಗೆ ಕಾರ್ಡ್‌ಕೊಡುವ ವ್ಯವಸ್ಥೆ ಮಾಡಿಲ್ಲ. ಆದ್ದರಿಂದ ನಮಗೆ ಕಾರ್ಡ್‌ಕೊಡಿಸಲು ವ್ಯವಸ್ಥೆ ಮಾಡಿ ಎಂದು ತಹಶೀಲ್ದಾರ್‌ರನ್ನು ಭೇಟಿಮಾಡಲು ಇಲ್ಲಿನ ಸಿಬ್ಬಂದಿ ಬಿಡುತ್ತಿಲ್ಲವೆಂದು ಪಡಿತರ ಚೀಟಿಗಾಗಿ ಬಂದಿದ್ದ ವಿವಿಧ ಗ್ರಾಮಗಳ ಜನರು ಆಕ್ರೋಶ ಹೊರಹಾಕಿದರು.
ಕಂದಾಯ ಕಚೇರಿ ಸಿಬ್ಬಂದಿ ಎನ್. ಬಾಬು ಸಾರ್ವಜನಿಕರನ್ನು ಸಮಾಧಾನಪಡಿಸಿ ಪಡಿತರ ಇಲಾಖೆ ಅಧಿ ಕಾರಿ ಬೇರೆಡೆಗೆ ಹೋಗಿದ್ದಾರೆ. ಆದ್ದರಿಂದ ಇಂದು ಪಡಿತರ ಚೀಟಿಗಳನ್ನು ವಿತರಿಸಿಲ್ಲ ಎಂದು ಸಮಜಾಯಿಷಿ ನೀಡಿದರು.
ಅಧಿಕಾರಿಗಳು ಇಲ್ಲ ಎನ್ನುವ ಬಗ್ಗೆ ನಾಳೆ ಕಾರ್ಡ್‌ಗಳನ್ನು ಕೊಡುತ್ತೇವೆ ಎನ್ನುವ ಮಾಹಿತಿ ಫಲಕವನ್ನು ಕಚೇರಿ ಮುಂದೆ ಹಾಕಿದ್ದರೆ ನಾವು ಇಲ್ಲಿಯವರೆಗೆ ಕಾಯುವ ಅವಶ್ಯಕತೆ ಇರುತ್ತಿರಲಿಲ್ಲ. ಯಾವುದೇ ಮಾಹಿತಿ ಕೂಡ ನೀಡುವವರು ಈ ಕಚೇರಿಯಲ್ಲಿ ಇಲ್ಲ ಎಂದು ಬಲಕುಂದಿ ಗ್ರಾಮಸ್ಥ ಶ್ರೀಧರ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.