ಸಿರುಗುಪ್ಪ: ತುಂಗಭದ್ರಾ, ವೇದಾವತಿ ಹಗರಿ ನದಿ ದಂಡೆಯಲ್ಲಿ ವಿವಿಧ ಬಗೆಯ ಪಕ್ಷಿಗಳ ಹಿಂಡು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ದೊಡ್ಡ ಹಳ್ಳ, ಗರ್ಜಿಹಳ್ಳ, ಕೆಂಚಿಹಳ್ಳಗಳು ಬತ್ತಿ ಹೋಗಿದ್ದು, ಪಕ್ಷಿಗಳಿಗೆ ಈ ಪ್ರದೇಶದಲ್ಲಿ ಯಥೇಚ್ಚವಾಗಿ ಆಹಾರ ಸಿಗುತ್ತಿದ್ದು, ಈ ಕಾರಣಕ್ಕಾಗಿಯೇ ಹಕ್ಕಿಗಳು ಹಿಂಡು ಹಿಂಡಾಗಿ ನದಿ ಮತ್ತು ಹಳ್ಳಗಳ ಅಂಗಳಕ್ಕೆ ಲಗ್ಗೆ ಇಡುತ್ತಿವೆ.
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ನೂರಾರು ವಿವಿಧ ಜಾತಿಯ ಪಕ್ಷಿಗಳು ನದಿಗೆ ಲಗ್ಗೆ ಇಟ್ಟಿವೆ. ನೀರುಕೋಳಿ, ಕೆನ್ನೀರಿಬಕ್, ಕೊಳದ ಬಕ್, ಬೆಳ್ಳಕ್ಕಿಗಳು ದಾಸ ಕೊಕ್ಕರೆ, ನೀರು ಕಾಗೆ, ಬಿಳಿಕತ್ತಿನ ಕೊಕ್ಕರೆ, ಬಿಳಿನಾಮದ ನೀರುಕೋಳಿ, ಚುಕ್ಕೆ ಬಾತುಕೋಳಿ, ಸಿಳ್ಳೆ ಬಾತುಕೋಳಿ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ನದಿಯ ಪಾತ್ರ ಆಕ್ರಮಿಸಿಕೊಂಡಿವೆ.
ಕಪ್ಪೆಚಿಪ್ಪು, ಶಂಖುಹುಳು, ಏಡಿ, ಮಣ್ಣಿನ ಹುಳು, ಸಣ್ಣ ಸಣ್ಣ ಮೀನುಗಳು, ನದಿಯಲ್ಲಿ ನಿಂತ ನೀರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಿರುವುದರಿಂದ ದಿನವಿಡೀ ಪಕ್ಷಿಗಳ ಹಿಂಡು ನದಿಯ ಪಾತ್ರದಲ್ಲಿಯೇ ಕಳೆದು ಸಂಜೆಯಾಗುತ್ತಿದ್ದಂತೆ ಗೂಡಿನತ್ತ ಮುಖ ಮಾಡುತ್ತವೆ. ಮತ್ತೆ ಬೆಳಕು ಹರಿಯುತ್ತಿದ್ದಂತೆ ನದಿಯ ಪಾತ್ರಕ್ಕೆ ಬರುತ್ತವೆ. ನದಿಯಲ್ಲಿ ನೀರು ಸಂಪೂರ್ಣವಾಗಿ ಒಣಗುವವರೆಗೆ ನಡೆಯುತ್ತಿರುತ್ತದೆ.
ನದಿಯು ಒಣಗುವ ಹಂತಕ್ಕೆ ಬಂದಾಗ ಪಕ್ಷಿಗಳಿಗೆ ನದಿ ಪಾತ್ರದಲ್ಲಿ ಯತೇಚ್ಚವಾಗಿ ಆಹಾರ ಸಿಗುತ್ತದೆ. ಆದ್ದರಿಂದ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ನದಿ ಪಾತ್ರದಲ್ಲಿ ಕಾಣ ಸಿಗುತ್ತವೆ. ರಾಜ್ಯ ಮತ್ತು ನೆರೆಯ ಜಿಲ್ಲೆಗಳ ಪಕ್ಷಿಗಳು ಅಲ್ಲಲ್ಲಿ ಬೀಡು ಬಿಟ್ಟಿರುತ್ತವೆ. ಎಲ್ಲಿ ನದಿ ಒಣಗುತ್ತದೋ ಅಲ್ಲಿಗೆ ಗುಂಪಾಗಿ ಹಕ್ಕಿಗಳು ಲಗ್ಗೆ ಇಡುತ್ತವೆ. ನದಿ ನೀರು ಖಾಲಿಯಾದಾಗ ತಗ್ಗುದಿನ್ನೆಗಳಲ್ಲಿರುವ ನೀರಿನಲ್ಲಿ ವಾಸವಾಗಿರುವ ಮೀನು, ಇತರೆ ಹುಳುಗಳು ಪಕ್ಷಿಗಳಿಗೆ ಗೋಚರಿಸುತ್ತವೆ. ಓಡಾಡಿ ಹೆಕ್ಕಿ ತಿನ್ನುತ್ತವೆ. ನೀರಿದ್ದರೆ ಸುಲಭವಾಗಿ ಅವುಗಳಿಗೆ ಆಹಾರ ಸಿಗುವುದಿಲ್ಲ.
ಪಕ್ಷಿಗಳು ಅಲ್ಪ ಪ್ರಮಾಣದ ನೀರನ್ನು ಸೇವಿಸುತ್ತವೆ. ಸ್ವಲ ನೀರಿದ್ದರೂ ಸಾಕು ಅದರಲ್ಲಿಯೇ ಪಕ್ಷಿಗಳು ಜೀವನ ನಡೆಸುತ್ತವೆ. ಆದರೆ ಆಹಾರ ಮಾತ್ರ ಯಥೇಚ್ಚವಾಗಿ ಬೇಕು. ಎಲ್ಲಿ ಹೆಚ್ಚು ಆಹಾರ ಸಿಗತ್ತದೆಯೋ ಅಂತಹ ಕಡೆಗಳಲ್ಲಿ ಪಕ್ಷಿಗಳು ಬರುತ್ತವೆ. ಮಳೆಗಾಲ ಪ್ರಾರಂಭವಾಗಿ ನದಿ, ಹಳ್ಳಗಳಿಗೆ ನೀರು ಬರುತ್ತಿದ್ದಂತೆ ಅವುಗಳ ಮೂಲಸ್ಥಾನಕ್ಕೆ ತಿರುಗುತ್ತವೆ.
•
ಅಂದಾನಗೌಡ ದಾನಪ್ಪಗೌಡ್ರ,
ಹವ್ಯಾಸಿ ಪಕ್ಷಿ ತಜ್ಞ.