Advertisement

ಕೋಟೆನಾಡಿನಲ್ಲಿ ರಂಗೇರಿದೆ ಉಪಕದನ:ಗುಟ್ಟು ಬಿಟ್ಟುಕೊಡದ ಮತದಾರ, ಶಿರಾ ಕಿರೀಟ ಯಾರಿಗೆ ಪಾಲಿಗೆ?

04:06 PM Oct 31, 2020 | keerthan |

ತುಮಕೂರು: ಕಲ್ಪತರು ನಾಡಿನಲ್ಲಿ ಉಪಕದನ ಕಣ ದಿನೇ ದಿನೇ ರಂಗೇರಿದೆ. ಕಾಂಗ್ರೆಸ್- ಜೆಡಿಎಸ್ ಭದ್ರಕೋಟೆಗೆ ಈಗ ಬಿಜೆಪಿ ದೃಷ್ಟಿ ಹರಿಸಿದ್ದು, ಮೂರು ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಜಾತಿ ಲೆಕ್ಕಾಚಾರದ ನಡುವೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ.

Advertisement

ರಾಜ್ಯದ ಗಮನ ಸೆಳೆದಿರುವ ಕಲ್ಪತರು ನಾಡಿನ ಕೋಟೆ ಕೊತ್ತಲಗಳ ಬೀಡಿನಲ್ಲಿ ಶಿರಾ ರಾಜ ಯಾರಾಗುತ್ತಾರೆ ಎನ್ನುವ ಕುತೂಹಲ ದಿನೇ ದಿನೇ ಮೂಡುತ್ತಿದೆ.

ಅಭಿವೃದ್ಧಿಯ ಮಾತುಗಳು, ಹೊಸ ಮುಖದ ಪ್ರಚಾರದ ನಡುವೆ ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆ ಎನ್ನುವ ಕುತ್ತೂಹಲ ಇದ್ದು ಇಲ್ಲಿ ಮೂರು ಪಕ್ಷಗಳೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಹರಸಾಹಸ ಪಡುತ್ತಿದ್ದಾರೆ

ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಾಗಿದ್ದ ಬಿ.ಸತ್ಯನಾರಾಯಣ್ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆಉಪಚುನಾವಣೆ ನಡೆಯುತ್ತಿದ್ದು ಬಿಜೆಪಿ ಯಿಂದ ಡಾ.ಸಿ.ಎಂ.ರಾಜೇಶ್ ಗೌಡ, ಜೆಡಿಎಸ್ ನಿಂದ ಬಿ.ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ, ಕಾಂಗ್ರೆಸ್ ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸ್ಪರ್ಧೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ಉಪಚುನಾವಣೆಯಲ್ಲಿ ಗೆದ್ದ ಕೂಡಲೇ ಮುನಿರತ್ನಗೆ ಸಚಿವ ಸ್ಥಾನ: ಬಿ ಎಸ್ ಯಡಿಯೂರಪ್ಪ

Advertisement

ಶಿರಾ ಕ್ಷೇತ್ರದಲ್ಲಿ 1,10,265 ಪುರುಷ, 1,05,419 ಮಹಿಳಾ ಮತದಾರರು ಸೇರಿ ಒಟ್ಟು 2,15,694 ಮತದಾರರು ಇದ್ದು ಜಾತಿ ಲೆಕ್ಕಾಚಾರ ನೋಡಿದರೆ ಕುಂಚಿಟಿಗ ಒಕ್ಕಲಿಗರೇ ಹೆಚ್ಚಿದ್ದಾರೆ. ಪ್ರಮುಖ ಮೂರು ಅಭ್ಯರ್ಥಿಗಳೂ ಕುಂಚಿಟಿಗ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ.

ಈ ಕ್ಷೇತ್ರದಲ್ಲಿ ವಕ್ಕಲಿಗರ ಜೊತೆಗೆ ದಲಿತ ಹಿಂದುಳಿದ ಮತಗಳು ನಿರ್ಣಾಯಕವಾಗಲಿವೆ. ಕ್ಷೇತ್ರದ ಜಾತಿ ಲೆಕ್ಕಾಚಾರದಲ್ಲಿ ಗಮನಿಸಿದರೆ ಅಂದಾಜಿನ ಪ್ರಕಾರ ಕುಂಚಿಟಿಗ ಒಕ್ಕಲಿಗರು 60,000, ಎಸ್.ಸಿ. ಎಸ್.ಟಿ 80,000, ಯಾದವ 35,000, ಕುರುಬ 25,000, ಬಲಿಜಿಗ 18,000 ಮುಸ್ಲಿಂ 20,000 ಮತಗಳಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ ಜಯಚಂದ್ರ ಹಿರಿಯ ರಾಜಕಾರಣಿ 50 ವರ್ಷಗಳಿಂದ ನಿರಂತರ ರಾಜಕಾರಣ ಮಾಡಿದ್ದಾರೆ. ಶಿರಾ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ ನಾನು ಶಿರಾ ಅಭಿವೃದ್ದಿಗೆ ಶ್ರಮಿಸಿದ್ದೇನೆ ಮುಂದೆ ಇನ್ನೂ ಅಭಿವೃದ್ಧಿ ಮಾಡುತ್ತೇನೆ ನನಗೆ ಮತನೀಡಿ ಎಂದು ಮತಯಾಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ನೀವು ಸರಿಯಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ತಮ್ಮ ಪತಿ ಬಿ.ಸತ್ಯನಾರಾಯಣ್ ಅವರು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದಾರೆ ಅದಕ್ಕಾಗಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಈ ಕ್ಷೇತ್ರದ  ಅಭಿವೃದ್ಧಿ ಆಗಬೇಕಾದರೆ ಆಡಳಿತ ಪಕ್ಷದ ಅಭ್ಯರ್ಥಿಯಾದ ನನಗೆ ಮತನೀಡಿ ಎಂದು ಮತಯಾಚನೆ ಮಾಡುತ್ತಿದ್ದಾರೆ.

ಮೂರು ಪಕ್ಷದ ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಆಗಮಿಸಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಮತದಾರರನ್ನು ಸೆಳೆಯುವ ತಂತ್ರಗಾರಿಕೆಯೂ ನಡೆಯುತ್ತಿದೆ. ಮತದಾರರಿಗೆ ಆಸೆ ಆಮಿಷ ಒಡ್ಡುವ ಪ್ರಯತ್ನವಾಗುತ್ತಿದೆ, ಕೆಲವು ಕಡೆ ಹಣ- ಮದ್ಯದ ಹೊಳೆ ಹರಿಯುತ್ತಿದೆ.

ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಕೆ ಆರ್ ಪೇಟೆ ಕ್ಷೇತ್ರದಂತೆ ಇಲ್ಲೂ ಕಮಲ ಅರಳಿಸುತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಮೂರು ಪಕ್ಷಗಳ ರಾಲಿಗಳಿಗೆ ಜನ ಸೇರುತ್ತಿದ್ದಾರೆ. ಗ್ರಾಮಕ್ಕೆ ಬರುವ ಎಲ್ಲರನ್ನೂ ಗೌರವಿಸುತ್ತಾರೆ. ಆದರೆ ಮತಯಾರಿಗೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಒಟ್ಟಾರೆಯಾಗಿ ಕಾಂಗ್ರೆಸ್ ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಯಾರು ದಲಿತರು ಮತ್ತು ಹಿಂದುಳಿದವರ ಮತಗಳನ್ನು ಹೆಚ್ಚು ಪಡೆಯುತ್ತಾರೆ ಅವರಿಗೆ ವಿಜಯ ಮಾಲೆ ಒಲಿಯಲಿದೆ ಆದರೆ ಶಿರಾ ರಾಜ ಯಾರು ಆಗುತ್ತಾರೆ ಎನ್ನುವುದೇ ಕುತೂಹಲ. ಈ ಕುತೂಹಲ ತಣಿಯಲು ನವೆಂಬರ್ 10ರವರೆಗೆ ಕಾಯಲೇಬೇಕು.

ವರದಿ: ಚಿ.ನಿ.ಪುರುಷೋತ್ತಮ್

Advertisement

Udayavani is now on Telegram. Click here to join our channel and stay updated with the latest news.

Next