ಮಂಡ್ಯ: ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಸಕ್ಕರೆ ಜಿಲ್ಲೆ ಅವುಗಳಿಂದ ಮುಕ್ತಿ ಪಡೆಯಲು ಸರ್ ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿ ಯೋಜನೆಗಳನ್ನು ಇಂದಿನವರು ಪ್ರೇರಣೆಯಾಗಿಸಿಕೊಳ್ಳಬೇಕು ಎಂದು ಪತ್ರಕರ್ತ ಡಿ.ಎನ್. ಶ್ರೀಪಾದು ಬಣ್ಣಿಸಿದರು.
ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ಹಾಗೂ ಎಂಜಿನಿಯರ್ ಅಸೋಸಿಯೇಷನ್ ವತಿಯಿಂದ ನಡೆದ ಸರ್ ಎಂ.ವಿಶ್ವೇಶ್ವರಯ್ಯನವರ 158ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿ, ನಾಲ್ವಡಿ ಹಾಗೂ ವಿಶ್ವೇಶ್ವರಯ್ಯವರ ಶ್ರಮದ ಫಲವಾಗಿ ಬರಡಾಗಿದ್ದ ನಾಡು ಬಂಗಾರವಾಯಿತು. ಆದರೆ, ಇಂದು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಅದರಿಂದ ಮುಕ್ತರಾಗಲು ವಿಶ್ವೇಶ್ವರಯ್ಯ ನವರ ಕಾರ್ಯ ದಕ್ಷತೆಯನ್ನು ಪ್ರೇರಣೆಯಾಗಿಸಿ ಕೊಳ್ಳಬೇಕು ಎಂದು ಹೇಳಿದರು.
ಮಂಡ್ಯ ಜಿಲ್ಲೆಯನ್ನು ಇಡೀ ಜಗತ್ತಿಗೆ ಪರಿಚಯ ಮಾಡಿಕೊಟ್ಟರು. ವಿಶ್ವೇಶ್ವರಯ್ಯನವರು ಪ್ರತಿ ನಿಮಿಷ, ಪ್ರತಿ ವಸ್ತುವಿಗೂ ಅಪಾರ ಬೆಲೆ ನೀಡುತ್ತಿದ್ದರು. ಅವರ ಆದರ್ಶಗಳಲ್ಲಿ ಕೆಲವನ್ನಾದರೂ ನಾವು ಪಾಲಿಸಬೇಕು. ಸರ್ ಎಂ.ವಿ. ಜಗತ್ತಿಗೆ ಮಾದರಿಯಾಗಿ 102 ವರ್ಷ ತುಂಬು ಜೀವನ ನಡೆಸಿದರು. ಪ್ರಸ್ತುತ ಅವರ 158ನೇ ವರ್ಷದ ಜನ್ಮದಿನೋತ್ಸವವನ್ನು ಆಚರಿಸುತ್ತಿದ್ದೇವೆ. ವಿಶ್ವೇಶ್ವರಯ್ಯನವರು ವಿಶ್ವವ್ಯಾಪ್ತಿಯಾದವರು. ಲಂಡನ್‌ನಲ್ಲಿ ಅವರ ಹೆಸರಿನಲ್ಲಿ ಎಂಜಿನಿಯರ್ ಡೇ ಆರಂಭಿಸಿ, ಇಡೀ ವಿಶ್ವದಲ್ಲಿ ಅವರ ಜನ್ಮದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯನವರು ಜಿಲ್ಲೆಯ ಅನ್ನದಾತರು. ಅವರ ದೂರದೃಷ್ಟಿ ದೂರಾಲೋಚನೆ, ಸಮಯಪ್ರಜ್ಞೆ, ಶಿಸ್ತು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿವೆ. ಜಿಲ್ಲೆಯ ಜನತೆ ಉತ್ತಮ ಜೀವನ ನಡೆಸಲು ವಿಶ್ವೇಶ್ವರಯ್ಯನವರ ದೂರದೃಷ್ಟಿ ಕಾರಣ. ಅನೇಕ ಕಾರ್ಖಾನೆಗಳು, ಬ್ಯಾಂಕ್‌ಗಳನ್ನು ಸ್ಥಾಪಿಸಿದ ಕೀರ್ತಿ ಅವರದು. ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಿಸಿದರು. ಅವರ ಕೀರ್ತಿ ವಿಶ್ವದಾದ್ಯಂತ ಪಸರಿಸಿದೆ. ಮುಂದಿನ ಪೀಳಿಗೆಗೆ ಅವರ ದೂರದೃಷ್ಟಿ, ದೂರಾಲೋಚನೆ, ಶಿಸ್ತು, ಸಮಯಪಾಲನೆ ಮಾರ್ಗದರ್ಶನವಾಗಬೇಕು. ಅವರಂತೆ ರಾಜ್ಯಕ್ಕೆ ಕೊಡುಗೆಯಾಗಬೇಕು ಎಂದು ಹೇಳಿದರು.
ಬ್ರಾಹ್ಮಣಸಭಾದಿಂದ ಸರ್ ಎಂ.ವಿ. ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬ್ರಾಹ್ಮಣ ಸಭಾ ಜಿಲ್ಲಾಧ್ಯಕ್ಷ ಬೆಳ್ಳೂರು ಶಿವರಾಂ, ಉಪಾಧ್ಯಕ್ಷ ಬಿ.ಆರ್.ಸೀತಾರಾಮಯ್ಯ, ಕಾರ್ಯದರ್ಶಿ ಶಂಕರ ನಾರಾಯಣಶಾಸ್ತ್ರ, ಖಜಾಂಚಿ ಮಮತಾ ರಮೇಶ್, ಇಂಜಿನಿಯರ್ ಅಸೋಸಿಯೇಷನ್ ಬೋರೇಗೌಡ, ಕೆ.ಎಂ.ನಾಗರಾಜು, ಹರ್ಷ, ಕೆಂಪೇಗೌಡ, ಬಿ.ಸಿ.ಸುರೇಶ್, ಹೆಚ್.ಎಸ್.ನಾಗರಾಜು, ಎಂ.ಕೆ.ತಮ್ಮಣ್ಣ, ಗೋಪನಹಳ್ಳಿ ಕೆಂಪರಾಜು, ಜಯರಾಮು ಮತ್ತಿತರರು ಹಾಜರಿದ್ದರು.