ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಆರೋಪದಡಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಪ್ರಕರಣವನ್ನು ರಾಜ್ಯ ಸರಕಾರ ಕೂಡಲೇ ಸಿಓಡಿ ತನಿಖೆಗೆ ವಹಿಸಬೇಕು ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಒತ್ತಾಯಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಡಬಗೆರೆ ಶ್ರೀನಿವಾಸ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಶೋಧದ ನೆಪದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದ ತಂಡ ಏಕಾಏಕಿ ನಮ್ಮ ಮನೆ ಮೇಲೆ ದಾಳಿ ನಡೆಸಿತ್ತು.
ಈ ವೇಳೆ ಸಿಕ್ಕ ಎರಡು ಮಚ್ಚುಗಳು, ನಾಲ್ಕು ಗನ್‌ಗಳು ಮತ್ತು ಎರಡು ಕತ್ತಿಗಳನ್ನು ವಶಪಡಿಸಿಕೊಂಡ ಪೊಲೀಸರು “ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದೀರಾ..?’ ಎಂದು ಪ್ರಶ್ನಿಸಿ ಅನುಚಿತವಾಗಿ ವರ್ತಿಸಿದ್ದರು. ರಕ್ಷಣೆಗಾಗಿ ಪರವಾನಗಿ ಪಡೆದ ರಿವಾಲ್ವಾರ್ ಹೊಂದಿದ್ದೇನೆ ಎಂದು ಹೇಳಿದ್ದಕ್ಕೆ, “ನೀವೊಬ್ಬ ರೌಡಿಶೀಟರ್. ನಿಮಗೆ ಪರವಾನಗಿ ಕೊಡಲು ಸಾಧ್ಯವೇ ಇಲ್ಲ,’ ಎಂದು ಬಾಯಿಗೆ ಬಂದಂತೆ ನನ್ನ ವಿರುದ್ಧ ಮಾತನಾಡಿದ್ದರು.
ತಮಸ್ಸು ಚಿತ್ರದ ಚಿತ್ರೀಕರಣಕ್ಕೆ ಬಳಿಸಿದ್ದ ಕತ್ತಿಗಳು: “ಅಂದು ಸಿಕ್ಕ ಕತ್ತಿಗಳೂ ತಮಸ್ಸು ಚಿತ್ರ ಶೂಟಿಂಗ್‌ಗೆ ಬಳಸಿದ್ದಾಗಿದ್ದವು. ರಿವಾಲ್ವಾರ್‌ಗೆ ಪೊಲೀಸ್ ಕಮೀಷನರ್ ಅವರಿಂದ ಪರವಾನಗಿ ಪಡೆಯಲಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಆ ಕ್ಷಣಕ್ಕೆ ಸಿಗಲಿಲ್ಲ. ಆದರೆ, ನನ್ನ ಮಾತು ಕೇಳುವ ಮನಸ್ಥಿತಿಯಲ್ಲಿ ಹೇಮಂತ ನಿಂಬಾಳ್ಕರ್ ಅವರು ಇರಲಿಲ್ಲ. ಡಕಾಯಿತಿ ಉದ್ದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಾರೆ ಎಂದು ಕೇಸು ದಾಖಲಿಸಿದ್ದಾರೆ,” ಎಂದು ದೂರಿದರು.
“19 ವರ್ಷಗಳ ಹಿಂದೆಯೇ ಭೂಗತ ಲೋಕದಿಂದ ಹೊರ ಬಂದಿದ್ದೇನೆ. ಈ ವರೆಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಆಗಿದ್ದರೆ ಸಾಬೀತುಪಡಿಸಲಿ,” ಎಂದು ಸವಾಲು ಹಾಕಿದ ಅಗ್ನಿಶ್ರೀಧರ್, “ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡಿರುವ ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ. ಈ ಸಂಬಂಧ ಸೋಮವಾರ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ. ರಿವಾಲ್ವರ್‌ಗಿರುವ ಅನುಮತಿ ಪತ್ರಗಳ ದಾಖಲೆ ಕೊಟ್ಟಿದ್ದೇನೆ. ಹತ್ತು ದಿನಗಳ ಒಳಗಾಗಿ ನನ್ನ ಮೇಲಿನ ಕೇಸಗಳನ್ನು ಸಿಓಡಿ ವಹಿಸದಿದ್ದರೆ, ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ,” ಎಂದು ಎಚ್ಚರಿಸಿದರು.
ರೌಡಿಗಳಾಗೇ ಸಾಯಬೇಕೇ?
ಕಳೆದ ಮೂರ್‍ನಾಲ್ಕು ವರ್ಷಗಳಿಂದ ಭೂಗತ ಜಗತ್ತಿನ ನಂಟಿನಿಂದ ದೂರವಾಗಿದ್ದ ರೋಹಿತ್, ಸೈಲೆಂಟ್ ಸುನೀಲ್‌ರನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ಕೋಕಾ ಕೇಸ್ ದಾಖಲಿಸಲಾಗಿದೆ. ರೌಡಿ ಯಾಗಿದ್ದವರು ರೌಡಿಗಳಾಗಿಯೇ ಸಾಯಬೇಕೇ ಎಂದು ಪ್ರಶ್ನಿಸಿದರು. ಅಲ್ಲದೆ, ಅವರಿಬ್ಬರ ಮೇಲೆ ಕೋಕಾ ಕೇಸು ಹಾಕಿರುವುದು ಸರಿಯಲ್ಲ ಎಂದರು. ನನ್ನ ಹಾಗೂ ನನ್ನ ಸಹಚರರ ಮೇಲೆ ದಾಖಲಾಗಿರುವ ಕೇಸ್‌ಗಳ ಕುರಿತಂತೆ ಸರ್ಕಾರ ಸಿಓಡಿ ತನಿಖೆ ನಡೆಸಬೇಕು. ಪ್ರಕರಣಗಳ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದರು.