Advertisement

ಕಾನೇರಿ ದಡದಲಿ.. ಸಿಂಥೇರಿ ಬಂಡೆಯಲಿ..

03:09 PM Mar 04, 2017 | |

ಜಲಪಾತ ನೆನಪಿಸುವ ನೀರಿನ ಹರಿವು, ದೊಡ್ಡ ಬಂಡೆಗಂಟಿರುವ ಅಸಂಖ್ಯಾತ ಜೇನುಗೂಡುಗಳು, ಸೋರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಕಾಣುವ ಸಹಸ್ರ ಸಂಖ್ಯೆಯ ಬಾನಾಡಿಗಳು, ಮುಖ್ಯದಾರಿಯಿಂದ ಎರಡು ಕಿ.ಮೀ. ದೂರವಿರುವ ಕಾಡಿನ ದಾರಿಯಲಿ ಕಾಣಸಿಗುವ ನಿಸರ್ಗದ ಸೊಬಗು ಸಿಂಥೇರಿ ರಾಕ್ಸ್‌..

Advertisement

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಗೆ ಬರುವ ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೃಹತ್‌ ಗಾತ್ರ ಏಕಶಿಲೆಯ ಕೆಳಗೆ ಪೂರ್ವಾಭಿಮುಖವಾಗಿ ಹರಿಯುವ ಕಾನೇರಿ ನದಿಯ ಹರಿವಿನ ಸೌಂದರ್ಯ ಎಷ್ಟು ಬಣ್ಣಿಸಿದರೂ ಸಾಲದು.

ಸುಮಾರು 10 ವರ್ಷಗಳ ಹಿಂದೆ ಈ ಏಕ ಶಿಲೆಯಡಿ ಜಲ ಸೌಂದರ್ಯ ಗೋಚರವಾಗಿದ್ದು, ದಶಕದಿಂದಲೂ ಇದು ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ನಿಸರ್ಗದ ಈ ಸೌಂದರ್ಯವನ್ನು ಸವಿಯಬೇಕೇ ಹೊರತು ಮೋಜು ಮಾಡಲು ಪ್ರಯತ್ನಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಎಚ್ಚರಿಕೆಯ ಫಲಕಗಳು ದಾರಿಯುದ್ದಕ್ಕೂ ಕಾಣಸಿಗುತ್ತವೆ.

ಮಳೆಗಾಲದಲ್ಲಂತೂ ಸಿಂಥೇರಿ ರಾಕ್ಸ್‌ ನೋಡಲು ಪ್ರವಾಸಿಗರ ದೊಡ್ಡ ದಂಡೇ ಬರುತ್ತದೆ. ಆದರೆ ವೀಕ್ಷಣೆಗೆ ಅವಕಾಶ ಸಿಗುವುದು ಕಷ್ಟ. ಈ ಹಿಂದೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿತ್ತು. ಕೆಲ ಅವಘಡಗಳು ಸಂಭವಿಸಿದ ಮೇಲೆ ಮಳೆಗಾಲದಲ್ಲಿ ಸಿಂಥೇರಿ ರಾಕ್ಸ್‌ನ ಸ್ಥಿತಿ-ಗತಿಗೆ ಅನುಗುಣವಾಗಿ ವೀಕ್ಷಣೆಯ ಅವಕಾಶ ನಿರ್ಧರಿಸಲಾಗುತ್ತದೆ.

ಬೇಸಿಗೆಯ  ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಗೆ ಕಡಿಮೆ ಏನಿಲ್ಲ. ಇಲ್ಲಿಂದ 12 ಕಿ.ಮೀ. ಕ್ರಮಿಸಿದರೆ ಉಳವಿಯ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಇರುವುದರಿಂದ ಸಾಕಷ್ಟು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದುವರೆಗೂ ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧಿಯಾಗಿದ್ದ ಸಿಂಥೇರಿ ರಾಕ್ಸ್‌, ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆ ಏನಿಲ್ಲ.

Advertisement

ಸಿಂಥೇರಿ ರಾಕ್ಸ್‌ ಹೆಸರೇಕೆ?


ಸಿಂಥೇರಿ; ಇದೊಂದು ಬಗೆಯ ಶಿಲೆಯ ಹೆಸರು. ಸಿಂಥೇರಿ ಪ್ರಬೇಧಕ್ಕೆ ಸೇರಿದ ಬೃಹತ್‌ ಏಕಶಿಲೆ ಇದಾಗಿರುವುದರಿಂದ ಈ ಪ್ರದೇಶಕ್ಕೆ ಸಿಂಥೇರಿ ರಾಕ್ಸ್‌ ಎನ್ನುವ ಹೆಸರು ಬಂದಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಇದು ಕೇವಲ ಪ್ರವಾಸಿ ತಾಣ ಮಾತ್ರವಲ್ಲ, ಶಿಲಾಧ್ಯಯನಕ್ಕೂ ಹೇಳಿ ಮಾಡಿಸಿದ ಜಾಗ. ಅಮೇಜಾನ್‌ ಕಾಡು ಪ್ರದೇಶವನ್ನು ನೆನಪಿಸುವ ಇಲ್ಲಿನ ದಟ್ಟ ಕಾನನದೊಳಗೆ ಪಯಣಿಸಲು ಮೈ ಜುಂ ಎನ್ನುತ್ತದೆ. ಜೊತೆಗೆ ಇದು ಹುಲಿ ಸಂರಕ್ಷಿತ ಪ್ರದೇಶ ಎನ್ನುವ ಫಲಕಗಳಿಂದಾಗಿ ಎಲ್ಲಿಯಾದರೂ ಹುಲಿ ಕಾಣಿಸುತ್ತದೆಯೇ ಎನ್ನುವ ಆತಂಕ, ಕೌತುಕ ಕಾಡುತ್ತದೆ.

ದಾಂಡೇಲಿ-ಉಳವಿ ಮುಖ್ಯ ರಸ್ತೆಯಿಂದ  ಒಳಗಡೆ 2 ಕಿ.ಮೀ.ಕ್ರಮಿಸಿದ ನಂತರ ಸಿಂಥೇರಿ ರಾಕ್ಸ್‌ ಗೆ ಸ್ವಾಗತ ಎನ್ನುವ ಫಲಕ ನಿಸರ್ಗದ ಸೊಬಗು ಸವಿಯಲು ಆಹ್ವಾನಿಸುತ್ತದೆ. ಅಲ್ಲಿಂದ ಸುಮಾರು 250 ಮೆಟ್ಟಿಲು ಕೆಳಗಿಳಿದರೆ ಸ್ವರ್ಗವೇ ನಾಚುವಂಥ ಪ್ರಕೃತಿ ಸೌಂದರ್ಯ ಕಣ್ಮುಂದೆ ಕಾಣಿಸುತ್ತದೆ.

250 ಮೆಟ್ಟಿಲು ಇಳಿಯುವ ಮಾರ್ಗದುದ್ದಕ್ಕೂ ಈ ಪ್ರದೇಶದಲ್ಲಿ ಲಭಿಸುವ ವಿವಿಧ ಮಾದರಿಯ ಶಿಲಾ ಪ್ರಬೇಧಗಳ ಪರಿಚಯ ಫಲಕ, ಮಾಹಿತಿ ಹಾಗೂ ಶಿಲಾ ಮಾದರಿ ಗಮನ ಸೆಳೆಯುತ್ತವೆ. ಡೈಕ್‌ ಶಿಲೆ, ಸ್ತಂಬಾಕಾರದ ಆ್ಯಂಡ್‌ಸೈಟ್‌, ಗ್ರೇವ್ಯಾಕ್‌, ಪೆಂಟೆಗಲ್ಲು, ಮ್ಯಾಗ್ನಟೈಟ್‌ ಬೆಣಚುಕಲ್ಲು, ಪೊರಾಫೈರಿ.. ಹೀಗೆ ನಾನಾ ವಿಧದ ಶಿಲಾ ಮಾದರಿಗಳು ಇಲ್ಲಿವೆ.

ಮೆಟ್ಟಿಲು ಇಳಿಯಲು ಆಯಾಸ ವೆನಿಸಿದರೆ ಮಾರ್ಗದ ನಡುವೆ ವಿರಮಿಸಲು ಮೂರು ನೆರಳುತಾಣಗಳಿವೆ. ಅಲ್ಲಿಂದಲೂ ಸಿಂಥೇರಿಯ ಸೊಬಗು ಸವಿಯಬಹುದು.

10 ನೇ ಜೀವ ನಿಮ್ಮದಾಗದಿರಲಿ

ಮೆಟ್ಟಿಲು ಮುಗಿದ ತಕ್ಷಣ ಮತ್ತೂಂದು ಎಚ್ಚರಿಕೆಯ ಫಲಕ ಎದುರಾಗುತ್ತದೆ. ಅದರ ಮೇಲೊಮ್ಮೆ ಕಣ್ಣಾಡಿಸಿ ಕೆಳಗಿಳಿದರೆ ಹಿಂದೆ ಆಗಿರುವ ಅವಘಡಗಳ ಬಗ್ಗೆ ಮುಂಜಾಗ್ರತೆ ವಹಿಸಲು ಹೆಚ್ಚು ಅನುಕೂಲ.
ಹಾಲಿನ ನೊರೆಯಂಥ ನೀರಿನ ಹರಿವು ನೋಡಿದ ತಕ್ಷಣ ಅದರಲ್ಲಿ ಇಳಿಯಬೇಕು. ನೊರೆಯ ತೆರೆಯನ್ನೊಮ್ಮೆ ಮುಟ್ಟಬೇಕು ಎನ್ನುವ ಆಸೆ ಹುಟ್ಟುವುದು ಸಹಜ. ಹೀಗೆ ಆಸೆ ಹೊತ್ತು ನೊರೆಯ ಹತ್ತಿರ ಹೋದವರು ಕಾಲು ಜಾರಿ ಕೆಳಗೆ ಬಿದ್ದು ಮೇಲೆದ್ದು ಬಂದ ಉದಾಹರಣೆಯೇ ಇಲ್ಲ. ಇಂಥವರ ಸಂಖ್ಯೆ ಈಗಾಗಲೇ 9 ಆಗಿದೆ. 10 ನೇ ವ್ಯಕ್ತಿ ನೀವಾಗಬೇಡಿ ಎನ್ನುವ ಎಚ್ಚರಿಕೆ ಫಲಕದಲ್ಲಿದೆ.

ಜೇನು ಇದ್ದರೂ ಕಚ್ಚೊಲ್ಲ
ಸಿಂಥೇರಿ ಬಂಡೆಗೆ ಅಂಟಿಕೊಂಡು ಅಸಂಖ್ಯಾತ ಜೇನುಗೂಡುಗಳಿವೆ. ಜೇನುನೊಣಗಳು ಪ್ರವಾಸಿಗರ ಸುತ್ತ ಸುತ್ತತ್ತವೆ. ಆದರೆ ಯಾರಿಗೂ ಕಚ್ಚುವುದಿಲ್ಲ. ಕಪಿಚೇಷ್ಟೆ ಮಾಡಿದರೆ ಶಾಸ್ತಿ ಮಾಡದೆ ಬಿಡುವುದಿಲ್ಲ. ಬೆಳಗ್ಗೆ ಹಾಗೂ ಸಂಜೆಯ ಹೊತ್ತಿಗೆ ಈ ಬಂಡೆಯ ಪದರದಡಿ ಗೂಡು ಕಟ್ಟಿರುವ ಪಾರಿವಾಳಗಳ ಕಲರವ, ನದಿಯ ನಿನಾದ, ಜೇನುನೊಣಗಳ ಝೇಂಕಾರ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರಕೃತಿಯ ಈ ಸೊಬಗು ಸವಿದ ಬಳಿಕ ಮತ್ತೇ 250 ಮೆಟ್ಟಿಲು ಹತ್ತುವುದು ಆಯಾಸದ ಸಂಗತಿಯೇ. ಹಾಗಾಗಿ ಮೆಟ್ಟಿಲುಗಳ ಪಕ್ಕ ಮೇಲೇರಲು ಸಮತಟ್ಟಾದ ಏರು ಹಾದಿ ಇದೆ. ಅಲ್ಲಲ್ಲಿ ವಿಶ್ರಮಿಸಿ ಮೇಲೆರಬಹುದು. ಮೇಲೆ ಬಂದಾಕ್ಷಣ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ.

ತಲುಪುವ ಹಾದಿ
ರಾಜ್ಯದ ಯಾವುದೇ ಮೂಲೆಯವರಿಗೆ ಹುಬ್ಬಳ್ಳಿ ಗೊತ್ತೆ ಇದೆ. ಉತ್ತರ ಕನ್ನಡ ಹಾಗೂ ಹತ್ತಿರದ ಜಿಲ್ಲೆಯವರನ್ನು ಹೊರತುಪಡಿಸಿ ಉಳಿದ ಜಿಲ್ಲೆಯವರು ಹುಬ್ಬಳ್ಳಿಗೆ ಬಂದರೆ ಅಲ್ಲಿಂದ ಧಾರವಾಡ-ಹಳಿಯಾಳ-ದಾಂಡೇಲಿ ಮಾರ್ಗವಾಗಿ 120 ಕಿ.ಮೀ. ಕ್ರಮಿಸಿದರೆ ಈ ನಿಸರ್ಗದ ತಾಣ ಸಿಗುತ್ತದೆ. ದಾಂಡೇಲಿಯಿಂದ ಉಳವಿಗೆ ಹೋಗುವ ಮಾರ್ಗದಲ್ಲಿ 30 ಕಿ.ಮೀ. ಸಾಗಿದರೆ ಎಡಭಾಗಕ್ಕೆ ಸಿಂಥೇರಿ ರಾಕ್ಸ್‌ನ ಸ್ವಾಗತ ಕಮಾನು, ಪ್ರವೇಶ ದ್ವಾರ ಕಾಣಿಸುತ್ತದೆ. ಪ್ರವೇಶ ಶುಲ್ಕ ಕಟ್ಟಿ (ವಾಹನಕ್ಕೆ ಮಾತ್ರ) 2 ಕಿ.ಮೀ. ಕ್ರಮಿಸಿದರೆ ಸಿಂಥೇರಿ ರಾಕ್ಸ್‌ ಕೈ ಬೀಸಿ ಕರೆಯುತ್ತದೆ. ಇಲ್ಲಿಗೆ ಹೋಗಲು ಸ್ವಂತ ವಾಹನ ಹಾಗೂ ಕುಡಿಯಲು ನೀರು (ಕೆಳಗಿಳಿದಾಗ ಅಗತ್ಯ ಎನಿಸುತ್ತದೆ.)ಇದ್ದರೆ ಉತ್ತಮ.

-ಬಸವರಾಜ ಕರುಗಲ್‌

Advertisement

Udayavani is now on Telegram. Click here to join our channel and stay updated with the latest news.

Next