Advertisement
ಮೊಗವೀರಪಟ್ಣದ ಸಮುದ್ರದ ದಡದಿಂದ ಸುಮಾರು 700 ಮೀಟರ್ ದೂರದ ಸಮುದ್ರದಲ್ಲಿ ರೀಫ್ ಕಾಮಗಾರಿ ನಡೆಸಿದ ಬಳಿಕ ಬಾರ್ಜ್ ಬೇರೆ ಕಡೆ ಸ್ಥಳಾಂತರಿಸುತ್ತಿದ್ದಾಗ ಅವಘಡಕ್ಕೀಡಾಗಿ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ತಡೆದಂಡೆಗೆ ಬಡಿದು ಮುಕ್ಕಾಲಂಶ ಮುಳುಗಿ ನಿಂತಿದೆ. ಕಳೆದ 6 ದಿನಗಳಲ್ಲಿ ಹಂತ ಹಂತವಾಗಿ ಮುಳುಗುತ್ತಿದ್ದ ಬಾರ್ಜ್ ನಾಲ್ಕು ದಿನಗಳಿಂದ ಮುಳುಗದಿದ್ದರೂ ಬಾರ್ಜ್‌ನ ಕ್ಯಾಬಿನ್‌ಗಳು, ಕ್ರೈನ್ ಸಹಿತ ಬೆಲೆಬಾಳುವ ವಸ್ತುಗಳು ಸಮುದ್ರದ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗುತ್ತಿವೆ. ಬಾರ್ಜ್ ನಿರ್ವಹಣೆ ನಡೆಸುತ್ತಿರುವ ಸಂಸ್ಥೆ ಕಳೆದ ಎರಡು ದಿನಗಳ ಹಿಂದಿನವರೆಗೆ ಬಾರ್ಜ್ ಮತ್ತು ಅದರೊಳಗಿರುವ ತೈಲವನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ವಿಫಲವಾಗಿತ್ತು.
ಮಳೆಗಾಲ ಪ್ರಾರಂಭವಾಗಿದ್ದರೂ ಸಮುದ್ರದ ಬಿರುಸು ಇನ್ನೂ ಎಂದಿನ ಮಟ್ಟಕ್ಕೆ ತಲುಪಿಲ್ಲ. ಈಗ ಸಮುದ್ರ ಶೇ. 10ರಷ್ಟು ಮಾತ್ರ ಬಿರುಸು ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಇದಕ್ಕಿಂತ 10 ಪಟ್ಟು ಹೆಚ್ಚು ಬಿರುಸುಗೊಳ್ಳುವುದು ಸಾಮಾನ್ಯ. ಆ ಸಂದರ್ಭದಲ್ಲಿ ಬಾರ್ಜ್ ಸಂಪೂರ್ಣ ಮುಳುಗುವುದು ಖಚಿತ ಎನ್ನುತ್ತಾರೆ ಸ್ಥಳೀಯ ಮೀನುಗಾರರಾಗಿರುವ ವಾಸುದೇವ ಬಂಗೇರ. ಈಗ ಸಮುದ್ರದ ಅಲೆಗಳು ಸಣ್ಣ ಮಟ್ಟದಲ್ಲಿ ಏಳುತ್ತಿದ್ದು, ಮುಂದಿನ ಎರಡು ತಿಂಗಳು ಹಂತ ಹಂತವಾಗಿ ಸಮುದ್ರ ಬಿರುಸುಗೊಳ್ಳಲಿದ್ದು, ಆ ಸಂದರ್ಭದಲ್ಲಿ ಈಗಿರುವ ಬಾರ್ಜ್‌ನ ಎತ್ತರದಲ್ಲಿ ಅಲೆಗಳು ದಡಕ್ಕೆ ಅಪ್ಪಳಿಸುತ್ತವೆ. ಈ ಸಂದರ್ಭ ಬಾರ್ಜ್‌ನೊಂದಿಗೆ ತೈಲವೂ ಸಮುದ್ರ ಪಾಲಾಗುವ ಭೀತಿಯಲ್ಲಿದೆ.