Advertisement

ಡಿ. 15ರಿಂದ ಏಕಗವಾಕ್ಷಿ ವ್ಯವಸ್ಥೆ: ಖಾದರ್‌

10:32 AM Dec 10, 2018 | |

ಮಂಗಳೂರು: ಬಿಲ್ಡಿಂಗ್‌ ಪ್ಲಾನ್‌ ಹಾಗೂ ಲೇಔಟ್‌ ಪ್ಲಾನ್‌ಗಳಿಗೆ ಅಂಗೀಕಾರ ವ್ಯವಸ್ಥೆಯನ್ನು ಸುಗಮ ಹಾಗೂ ತ್ವರಿತಗೊಳಿಸುವ ನಿಟ್ಟಿನಲ್ಲಿನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಏಕಗವಾಕ್ಷಿ ವ್ಯವಸ್ಥೆಗೆ (ಸಿಂಗಲ್‌ ವಿಂಡೋ) ಡಿ. 15ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಬೆಂಗಳೂರಿನಲ್ಲಿ ಚಾಲನೆ ನೀಡುವರು ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿದಾರರು ಬಿಲ್ಡಿಂಗ್‌ ಅಥವಾ ಲೇಔಟ್‌ ಪ್ಲಾನ್‌ಗೆ ಅಂಗೀಕಾರ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಮರ್ಪಕವಾಗಿದ್ದರೆ ಕೂಡಲೇ ಸ್ವೀಕೃತಗೊಳ್ಳುತ್ತದೆ ಇಲ್ಲದಿದ್ದರೆ ತಿರಸ್ಕೃತವಾಗುತ್ತದೆ. ಸರಿಪಡಿಸಿ ಮತ್ತೆ ಸಲ್ಲಿಸ ಬೇಕು. ಅರ್ಜಿ ಸ್ವೀಕಾರವಾದ ಒಂದು ವಾರದೊಳಗೆ ನಿರಾಕ್ಷೇಪಣ ಪತ್ರ (ಎನ್‌ಒಸಿ)ಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಅದು ಆನ್‌ಲೈನ್‌ ಮೂಲಕ ಹೋಗುತ್ತದೆ. ಅವರು ಇದನ್ನು ಪರಿಶೀಲಿಸಿ ವಾರದೊಳಗೆ ಅಭಿಪ್ರಾಯ ತಿಳಿಸಬೇಕು. ಸ್ಥಳ ಪರಿಶೀಲನೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳನ್ನು ಒಟ್ಟು ಸೇರಿಸಿ ನಿರ್ದಿಷ್ಟ ದಿನಾಂಕ ಹಾಗೂ ಸಮಯ ನಿಗದಿಪಡಿಸಿ ಮೊಬೈಲ್‌ನಲ್ಲಿ ಸಂದೇಶ ಹೋಗುತ್ತದೆ. ಅಂದು ಸ್ಥಳಕ್ಕೆ ತೆರಳಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ಅಲ್ಲಿಂದಲೇ ದಿನಾಂಕ ಹಾಗೂ ಸಮಯವನ್ನು ಮೊಬೈಲ್‌ನಲ್ಲಿ ನಮೂದಿಸಿ ಕಳುಹಿಸಬೇಕು. ಇದು ಸಿಂಗಲ್‌ ವಿಂಡೋ ವ್ಯವಸ್ಥೆಯ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ ಎಂದವರು ವಿವರಿಸಿದರು.
ವಾರದೊಳಗೆ ಎನ್‌ಒಸಿ ಬಗ್ಗೆ ವರದಿ ನೀಡದಿದ್ದರೆ ಆಕ್ಷೇಪವಿಲ್ಲ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಸಂಬಂಧಿಸಿ ಮುಂದಿನ ಯಾವುದೇ ವಿಚಾರಗಳಿಗೆ ಆಯಾ ಇಲಾಖೆಯನ್ನೇ ಹೊಣೆಯಾಗಿಸಲಾಗುವುದು. ಎಲ್ಲ ಪ್ರಕ್ರಿಯೆಗಳು ಮುಗಿದು ತಿಂಗಳೊಳಗೆ ಅಂಗೀಕಾರ ಪತ್ರ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.

30×40 ನಿವೇಶನ 
30×40 ನಿವೇಶನಗಳಲ್ಲಿ ಮನೆ ನಿರ್ಮಿಸಲು ಎನ್‌ಒಸಿ ಅಗತ್ಯವಿಲ್ಲ; ಸ್ವಯಂ ಆಗಿ ಆನ್‌ಲೈನ್‌ನಲ್ಲಿ ಸಮಗ್ರ
ವಿವರ ದಾಖಲಿಸಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದಾಗಿದೆ. 94ಸಿ, 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ಪಡೆದವರಿಗೆ ಆರ್‌ಟಿಸಿ ಕೊಡಲು 9/11 ಪತ್ರ ಅಥವಾ ಸಿಂಗಲ್‌ ಸೈಟ್‌ ಅಂಗೀಕಾರ ಪತ್ರ ಸಲ್ಲಿಕೆ ಅಗತ್ಯವಿಲ್ಲ. ಹಕ್ಕುಪತ್ರ ನೀಡುವಾಗಲೇ ಕಂದಾಯ  ಇಲಾಖೆಯವರು ನಕ್ಷೆ ಮಾಡಿಸಿರು ತ್ತಾರೆ. ಅದ್ದರಿಂದ ಕೂಡಲೇ ಅಧಿಕಾರಿ ಗಳು ಆರ್‌ಟಿಸಿ ನೀಡಬೇಕು ಎಂದರು.

ಪ್ರತಾಪಸಿಂಹ ತಪ್ಪು ಮಾಹಿತಿ
ಕೊಡಗಿನ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಸಮಾರಂಭದಲ್ಲಿ ಸಂಸದ ಪ್ರತಾಪಸಿಂಹ ಮಾಹಿತಿ ಕೊರತೆಯಿಂದ ಮತ್ತು ಪ್ರಚಾರಕ್ಕಾಗಿ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ. ಸಂತ್ರಸ್ತರ ಮನೆ ನಿರ್ಮಾಣಕ್ಕೆ ನೆರವು ಕಲ್ಪಿಸಲು ಕೇಂದ್ರ ಸರಕಾರದಿಂದ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗ ಪಡಿಸಲಿ. ನೈಜ ಕಾಳಜಿ ಇದ್ದರೆ ಸಂಸತ್‌ನಲ್ಲಿ ಮಾತನಾಡಲಿ. ರಾಜ್ಯ ಸರಕಾರ ಪ್ರತಿ ಸಂತ್ರಸ್ತನಿಗೂ 9.5 ಲಕ್ಷ ರೂ. ವೆಚ್ಚದಲ್ಲಿ 2 ಬೆಡ್‌ರೂಂ ಮನೆ ನೀಡುತ್ತಿದೆ. 8 ಜಿಲ್ಲೆಗಳಲ್ಲಿ ಆಗಿರುವ ಹಾನಿಗೆ ರಾಜ್ಯ ಸರಕಾರ 2,000 ಕೋ.ರೂ. ಕೇಳಿತ್ತು. ಆದರೆ ಬರೇ 546 ಕೋ.ರೂ. ಮಂಜೂರಾಗಿದೆ ಎಂದರು.

ಮರಳು ದೂರಿಗೆ ದೂರವಾಣಿ
ಸಿಆರ್‌ಝಡ್‌ ವಲಯದಲ್ಲಿ ಪರವಾನಿಗೆ ಪಡೆದವರಿಂದ ಮರಳುಗಾರಿಕೆ ಆರಂಭವಾಗಿದೆ. ಇಲ್ಲಿ ಜನರಿಗೆ ಮರಳು ಪಡೆಯಲು ಸಮಸ್ಯೆಯಾದರೆ ದೂರು ದಾಖಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಚಿತ ದೂರವಾಣಿ ಕರೆ ನಂಬರ್‌ (ಟೋಲ್‌ಫ್ರೀ) ಸ್ಥಾಪಿಸಲಾಗುವುದು. ಇದು ಲಭ್ಯವಾಗಲು ಸ್ವಲ್ಪ ಕಾಲಾವಕಾಶ ತಗಲುವುದರಿಂದ ಸದ್ಯಕ್ಕೆ ಒಂದು ಮೊಬೈಲ್‌ ನಂಬರ್‌ ಪ್ರಕಟಿಸಲಾಗುವುದು. ಮರಳಿಗೆ ದರ ನಿಗದಿ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ ಎಂದು ಸಚಿವ ಖಾದರ್‌ ತಿಳಿಸಿದರು. ತುಂಬೆ ವೆಂಟೆಡ್‌ ಡ್ಯಾಂನಲ್ಲಿ ತುಂಬಿರುವ ಮರಳು ತೆಗೆದು ವಿಲೇವಾರಿ ಮಾಡುವ ಬಗ್ಗೆ ಮಹಾನಗರ ಪಾಲಿಕೆ ಟೆಂಡರ್‌ ಪ್ರಕ್ರಿಯೆ ನಡೆಸಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next