Advertisement

Single Use plastic:ಏಕ ಬಳಕೆ ಪ್ಲಾಸ್ಟಿಕ್‌ ವಿರುದ್ಧ ದಂಡಾಸ್ತ್ರ,ಯಾವ ಉತ್ಪನ್ನಗಳಿಗೆ ನಿಷೇಧ

10:37 AM Aug 08, 2023 | Team Udayavani |

ಉಡುಪಿ: ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ನಗರದ ವ್ಯಾಪ್ತಿಯಲ್ಲಿ ಜುಲೈ ತಿಂಗಳಿನಿಂದ ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ನಿಷೇಧ ಹೇರಿ ನಗರಸಭೆ ಆದೇಶಿಸಿತ್ತು. ಇಲ್ಲಿಯವರೆಗೂ ನಿಷೇಧವಿದ್ದರೂ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆಯಾಗುತ್ತಿರುವ ಬಗ್ಗೆ ನಗರಸಭೆ ದಂಡಾಸ್ತ್ರ
ಪ್ರಯೋಗಿಸಿ 1.83 ಲಕ್ಷ ರೂ. ದಂಡ ವಸೂಲಿ ಮಾಡಿದೆ.

Advertisement

ಏಕ ಬಳಕೆಯ ಪ್ಲಾಸ್ಟಿಕ್‌ ವಸ್ತುಗಳ ಕಸದಿಂದ ಭೂ ಮತ್ತು ಜಲ ಪರಿಸರ ವ್ಯವಸ್ಥೆ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕ ಬಳಕೆ ಪ್ಲಾಸ್ಟಿಕನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಲು ದೇಶದ ಜನತೆಗೆ ಕರೆ ನೀಡಿದ್ದರು.

ಅನಂತರ ಕೇಂದ್ರ ಪರಿಸರ ಸಚಿವಾಲಯವು ಹಲವಾರು ಮಾರ್ಗಸೂಚಿಯೊಂದಿಗೆ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧಿಸಿ ಆದೇಶ ಹೊರಡಿಸಿತ್ತು. ಅದರಂತೆ ಸ್ಥಳೀಯಾಡಳಿತ ಸಂಸ್ಥೆಗಳು ವರ್ತಕರ, ಹೊಟೇಲ್‌ ಮಾಲಕರು, ಅಂಗಡಿ ವ್ಯಾಪಾರಸ್ಥನ್ನು ಕರೆಸಿ ಸಭೆ, ಸಮಾಲೋಚನೆ ನಡೆಸಿ, ಮಾಹಿತಿ ನೀಡಿದ್ದರು.

ಕೆಲವು ಕಡೆಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ಇನ್ನೂ ನಿಂತಿಲ್ಲ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಗೂಡಂಗಡಿ, ಹೊಟೇಲ್‌, ಫ್ಯಾನ್ಸಿ ಸೆಂಟರ್‌, ಬಟ್ಟೆ ಅಂಗಡಿ, ಇತರ ವರ್ತಕರ ಶಾಪ್‌ಗ್ಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿ ಜಾಗೃತಿ ಮೂಡಿಸಿದ್ದಾರೆ. ಆರೋಗ್ಯ ನಿರೀಕ್ಷಕರು, ಪರಿಸರ ಎಂಜಿನಿಯರ್‌, ಕಂದಾಯ ಅಧಿಕಾರಿ, ನಗರಸಭೆ ಸಿಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ತಂಡವು ನಗರದ ವಿವಿಧ ಭಾಗಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಅಂಗಡಿ ಮಾಲಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ಬಳಕೆ ಪುನರಾವರ್ತನೆಯಾದರೆ ದುಬಾರಿ ದಂಡದ ಜತೆಗೆ ಪರವಾನಿಗೆ ರದ್ದುಗೊಳಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ.

Advertisement

632 ಕೆ.ಜಿ. ಪ್ಲಾಸ್ಟಿಕ್‌ ವಶಕ್ಕೆ
ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಬಂದ ಅನಂತರ ನಗರದ ವ್ಯಾಪ್ತಿಯಲ್ಲಿ 632 ಕೆ.ಜಿ. ಏಕ ಬಳಕೆ ಪ್ಲಾಸ್ಟಿಕ್‌ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಂಗಡಿ, ಹೊಟೇಲ್‌, ಇನ್ನಿತರ ಶಾಪ್‌ಗ್ಳಲ್ಲಿ ಕಾರ್ಯಾಚರಣೆ ನಡೆಸಿ ನಿಷೇಧಿಕ ಪ್ಲಾಸ್ಟಿಕ್‌ ವಶಕ್ಕೆ ತೆಗೆದುಕೊಂಡಿದ್ದೇವೆ. ಉಡುಪಿಯಲ್ಲಿ ಪ್ಲಾಸ್ಟಿಕ್‌ ಉತ್ಪಾದನೆ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.

ಹೊರ ರಾಜ್ಯ, ಜಿಲ್ಲೆಗಳಿಂದ ಕಳ್ಳ ಮಾರ್ಗದಲ್ಲಿ ಅಪಾರ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಜಿಲ್ಲೆಗೆ ಪೂರೈಕೆಯಾಗುತ್ತಿದೆ. ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸ್‌ ತಪಾಸಣೆಯಲ್ಲಿ ಇದನ್ನು ಪರಿಶೀಲಿಸಬೇಕಿದೆ. ಈ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಬೇಕಿದೆ. ಜಿಲ್ಲೆಯ ವರ್ತಕರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಎಚ್ಚರವಹಿಸಬೇಕಿದೆ.

ಯಾವೆಲ್ಲ ಉತ್ಪನ್ನಗಳಿಗೆ ನಿಷೇಧ ?
ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳ ನಿಷೇಧದ ಜತೆಗೆ ಇಯರ್‌ ಬಡ್‌, ಬಲೂನುಗಳಿಗೆ ಬಳಸುವ ಪ್ಲಾಸ್ಟಿಕ್‌ ಸ್ಟಿಕ್‌, ಧ್ವಜ, ಕ್ಯಾಂಡಿ ಸ್ಟಿಕ್‌ಗಳು, ಐಸ್‌ ಕ್ರೀಮ್‌ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸೈರೀನ್‌ (ಥರ್ಮಾಕೋಲ್‌), ಪ್ಲಾಸ್ಟಿಕ್‌ ಪ್ಲೇಟ್‌, ಕಪ್‌ ಮತ್ತು ಲೋಟ, ಫೋರ್ಕ್‌, ಚಮಚ, ಚಾಕು, ಟ್ರೇ ಗಳಂತಹ ಕಟ್ಲರಿ, ಸ್ವೀಟ್‌ ಬಾಕ್ಸ್‌ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್‌ ಫಿಲ್ಮ್, ಸಿಗರೇಟ್‌ ಪ್ಯಾಕೆಟ್‌ ಮೇಲಿನ ಕವರ್‌, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಅಥವಾ ಪಿವಿಸಿ ಬ್ಯಾನರ್‌, ಪ್ಲಾಸ್ಟಿಕ್‌ ಸ್ಟಿರರ್‌ ನಿಷೇಧಿಸಲಾಗಿದೆ ಎಂದು ನಗರಸಭೆ ಪರಿಸರ ಎಂಜಿನಿಯರ್‌ ಸ್ನೇಹಾ ಮಾಹಿತಿ ನೀಡಿದ್ದಾರೆ.

ಜಾಗೃತಿ ಕಾರ್ಯ;
ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಸಂಬಂಧಿಸಿ ಎಲ್ಲ ವರ್ತಕರು, ವಿವಿಧ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಉತ್ತಮ ಸಹಕಾರ ನೀಡುತ್ತಿದ್ದಾರೆ. ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಸೂಚನೆ ನೀಡಿದ್ದೇವೆ. ಇಲ್ಲಿಯವರೆಗೆ 1.83 ಲಕ್ಷ ರೂ. ದಂಡ ವಿಧಿಸಲಾಗಿದೆ. ಉಡುಪಿ ನಗರ ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಪರಿಸರ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು.
ರಾಯಪ್ಪ,ಪೌರಾಯುಕ್ತರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next