ಹೊಸದಿಲ್ಲಿ/ಬೆಂಗಳೂರು: ದೇಶಾದ್ಯಂತ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳು ಜು. 1ರಿಂದ ನಿಷೇಧಗೊಳ್ಳಲಿವೆ. ಅವುಗಳ ಉತ್ಪಾದನೆ, ವಿತರಣೆ, ಆಮದು, ಮಾರಾಟ, ದಾಸ್ತಾನು ಮತ್ತು ಬಳಕೆಯನ್ನು ನಿರ್ಬಂಧಿಸ ಲಾಗಿದೆ.
ನಿಯಮ ಉಲ್ಲಂಘಿಸಿದವರಿಗೆ 5 ವರ್ಷಗಳ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸುವುದಾಗಿ ಸರಕಾರ ಎಚ್ಚರಿಸಿದೆ.
ಕರ್ನಾಟಕ ಸರಕಾರವು 5 ವರ್ಷಗಳ ಹಿಂದೆಯೇ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಗೆ ನಿಷೇಧ ಹೇರಿತ್ತು. ಆದರೆ ಅದಿನ್ನೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಅವರು, ಜು. 1 ರಿಂದ ರಾಜ್ಯದಲ್ಲೂ ಕಟ್ಟುನಿಟ್ಟಾಗಿ ಜಾರಿ ಮಾಡ ಲಾಗುವುದು ಎಂದಿದ್ದಾರೆ.
ಈ ಸಂಬಂಧ ಕೇಂದ್ರ ಸರಕಾರವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಸ್ಥಳೀಯ ಸಂಸ್ಥೆಗಳು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದಿದ್ದಾರೆ.
ಸರಕಾರದ ಈ ನಿರ್ಧಾರದಿಂದ ಸುಮಾರು 88 ಸಾವಿರ ಪ್ಲಾಸ್ಟಿಕ್ ಉತ್ಪಾದಕ ಘಟಕಗಳು ದಿವಾಳಿಯಾಗಲಿವೆ. ಈ ಘಟಕಗಳ 10 ಲಕ್ಷದಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖೀಲ ಭಾರತ ಪ್ಲಾಸ್ಟಿಕ್ ತಯಾರಕರ ಸಂಘ ಆತಂಕ ವ್ಯಕ್ತಪಡಿಸಿದೆ.
ಯಾವುದಕ್ಕೆ ನಿಷೇಧ?
ಪ್ಲಾಸ್ಟಿಕ್ ಕಡ್ಡಿ ಇರುವ ಧ್ವಜ, ಕ್ಯಾಂಡಿ, ಐಸ್‌ಕ್ರೀಂನ ಪ್ಲಾಸ್ಟಿಕ್ ಕಡ್ಡಿಗಳು, ಏಕಬಳಕೆಯ ಪ್ಲಾಸ್ಟಿಕ್ ಆಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ತಟ್ಟೆ, ಲೋಟ, ಚಾಕು, ಪೋರ್ಕ್, ಚಮಚ, ಸಿಹಿ ತಿಂಡಿ ಡಬ್ಬಿಗಳು, ಸಿಗರೇಟ್ ಪ್ಯಾಕ್‌ನ ಪ್ಲಾಸ್ಟಿಕ್ ರ್ಯಾಪರ್, ಆಮಂತ್ರಣ ಪತ್ರಿಕೆ- ಗಿಫ್ಟ್ ರ್ಯಾಪರ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ಇರುವ ಪಿವಿಸಿ ಪ್ಲಾಸ್ಟಿಕ್ ಬ್ಯಾನರ್‌ಗಳು, ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ.