ಬ್ಯಾಡಗಿ: ಕದರಮಂಡಲಗಿ ಗ್ರಾಮದಲ್ಲಿನ ಕಸ್ತೂರಬಾ ವಸತಿ ನಿಲಯದ ಬಾಲಕಿಯರಿಗೆ ಇಂದಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ, ವಿಳಂಬಕ್ಕೆ ಕಾರಣ ನೀಡುವುದಷ್ಟೇ ಅಲ್ಲ; ತಪ್ಪಿತಸ್ಥರ ವಿರುದ್ಧವೂ ಕ್ರಮವಾಗಬೇಕು. 80 ಬಾಲಕಿಯರಿಗಾಗಿ ಒಂದೇ ಶೌಚಾಲಯವಿರುವುದು ಜಗತ್ತಿನ ಎಂಟನೇ ಅದ್ಭುತಕ್ಕೆ ಸಮಾನ ಎಂದು ಅಧ್ಯಕ್ಷೆ ಸವಿತಾ ಸುತ್ತಕೋಟಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದರು.
ಸೋಮವಾರ ಜರುಗಿದ ತಾಲೂಕು ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರ್ತ್ರ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ರಾತ್ರಿ ವೇಳೆ ಅನುಭವಿಸುತ್ತಿರುವ ಸಮಸ್ಯೆ ಶಿಕ್ಷಣ ಇಲಾಖೆ ಅರ್ಥೈಸಿಕೊಳ್ಳುತ್ತಿಲ್ಲವೇಕೆ?ಸಮಸ್ಯೆ ಕುರಿತು ಮಾಹಿತಿ ಇದ್ದರೂ ಶಿಕ್ಷಣ ಇಲಾಖೆ ಕುರುಡರಂತೆ ವರ್ತಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಬಿಇಒ ಅವರನ್ನು ತರಾಟೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ರುದ್ರಮುನಿ, ಕಂಪೌಂಡ್‌ಗೆ ಹೊಂದಿಕೊಂಡಿರುವ ಖಾಸಗಿ ಪ್ರೌಢಶಾಲೆಯಲ್ಲಿ ಶೌಚಾಲಯ ಬಳಕೆ ಮಾಡಿಕೊಳ್ಳುವಂತೆ ಮಕ್ಕಳಿಗೆ ಸೂಚನೆ ನೀಡಿದ್ದು, ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ ಎಂದು ಸಭೆಗೆ ತಿಳಿಸಿದರು.
ನೀವು ಮೂರನೇ ಬಿಇಒ ಕಣ್ರೀ?: ಬಿಇಒ ಮಾತಿಗೆ ಕೊಪಗೊಂಡ ಅಧ್ಯಕ್ಷೆ ಸವಿತಾ, ಶಿಕ್ಷಣ ಇಲಾಖೆ ಇದೀಗ ಕಲ್ಪಿಸಿರುವ ಶೌಚಾಲಯ ಹಗಲು ವೇಳೆ ಬಳಕೆ ಸಾಧ್ಯ. ಆದರೆ, ರಾತ್ರಿ ವೇಳೆ ಏನು ಮಾಡಲು ಸಾಧ್ಯ? ಅಷ್ಟಕ್ಕೂ ನೀವು ಹೇಳುತ್ತಿರುವ ಶೌಚಾಲಯ ಖಾಸಗಿ ಶಾಲೆಯಲ್ಲಿದೇ ಹೊರತು ನಿಮ್ಮದಲ್ಲ. ನಾಳೆದಿನ ಅವರು ತಕರಾರು ಮಾಡಿದರೇ ಮಕ್ಕಳಿಗೆ ಶೌಚಾಲಯವಿಲ್ಲದೇ ಇರಲು ಸಾಧ್ಯವೇ? ನೀವು ಕೊಡುತ್ತಿರುವ ಉತ್ತರ ಅಸಮಂಜಸ. ಅಷ್ಟಕ್ಕೂ ಈ ಮಾತು ಹೇಳುತ್ತಿರುವ ನೀವು ನಮಗೆ ಮೂರನೇ ಬಿಇಒ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಎಂದರು.
ಜಿಲ್ಲಾ ಕೇಂದ್ರದಿಂದ ನೌಕರರ ನೇಮಕ ಯಾಕೆ?: ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಗಾರರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕ್ರಮ ಸ್ವಾಗತಾರ್ಹ. ಆದರೆ, ನಮ್ಮ ತಾಪಂ ಅನುದಾನವನ್ನೇ ಪಡೆದುಕೊಂಡು ತಾಲೂಕು ಮಟ್ಟದಲ್ಲಿ ಹೊರಗುತ್ತಿಗೆ ನೌಕರರನ್ನು ಜಿಲ್ಲಾ ಕೇಂದ್ರದಿಂದ ಭರ್ತಿ ಮಾಡಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಅಷ್ಟಕ್ಕೂ ಅವರಿಗೆಲ್ಲ ನೀಡುತ್ತಿರುವ ಅನುದಾನ ನಮ್ಮ ಕಚೇರಿಯಿಂದಲೇ. ಹೀಗಿರುವಾಗ ನಾವೇ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಬಾರದೇಕೆ ಎಂದು ಪ್ರಶ್ನಿಸಿದರು ? ಇದಕ್ಕೆ ಪ್ರತಿಕ್ರಿಯಿಸಿದ ಹನುಮಂತಪ್ಪ ಲಮಾಣಿ, ಸದರಿ ನಿಯಮಾವಳಿ ನಾವು ರೂಪಿಸಿದ್ದಲ್ಲ. ಜಿಪಂ ಸಿಇಒ ಅವರು ಮೊದಲಿನಿಂದಲೂ ಏಜನ್ಸಿಗಳನ್ನು ನೇಮಿಸುತ್ತ ಬಂದಿದ್ದಾರೆ. ಅದು ಇಂದಿಗೂ ಹಾಗೆಯೇ ಮುಂದುವರೆದಿದೆ ಎಂದರು.