Advertisement

ಸಹಕಾರಿ ಬ್ಯಾಂಕ್‌ಗಳಿಗೆ ಏಕ ತಂತ್ರಾಂಶ ಜಾರಿ: ಸಚಿವ ಸೋಮಶೇಖರ್‌

06:58 AM Jul 04, 2020 | mahesh |

ಮಂಗಳೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪ ತಂತ್ರಾಂಶ ಅಳವಡಿಕೆ, ಟ್ಯಾಬ್‌ ಬ್ಯಾಂಕಿಂಗ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಆ್ಯಪ್‌ ಹಾಗೂ ವೀಡಿಯೋ ಕಾನ್ಫರೆನ್ಸ್‌ನ ಉದ್ಘಾಟನೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವಧನ ವಿತರಣೆ ಕಾರ್ಯಕ್ರಮ ಮಂಗಳೂರಿನ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಶುಕ್ರವಾರ ನಡೆಯಿತು. ಏಕರೂಪದ ತಂತ್ರಾಂಶ ಅಳವಡಿಕೆ ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸಹಕಾರ ಕ್ಷೇತ್ರದಲ್ಲಿ ಬದ್ಧತೆ ಹಾಗೂ ಸಾಧನೆಯ ಮೂಲಕ ಡಾ|ಎಂ.ಎನ್‌.ರಾಜೇಂದ್ರ ಕುಮಾರ್‌ ಅಧ್ಯಕ್ಷತೆಯ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ರಾಜ್ಯದಲ್ಲಿಯೇ ಮಾದರಿ ಕಾರ್ಯ ನಡೆಸಿದೆ ಎಂದರು.

Advertisement

ದ.ಕ. ಸಹಕಾರಿ ಕ್ಷೇತ್ರದ ಕಾಶಿ: ನಳಿನ್‌
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ದ.ಕ. ಜಿಲ್ಲೆಯು ಮಾದರಿ ಕಾರ್ಯಗಳ ಮೂಲಕ ಮನೆಮಾತಾಗಿದ್ದು ಡಾ| ಎಂ.ಎನ್‌. ಆರ್‌. ಅವರ ಸಮರ್ಥ ನೇತೃತ್ವದಲ್ಲಿ ಬ್ಯಾಂಕ್‌ ಅದ್ವಿತೀಯವಾಗಿ ಬೆಳವಣಿಗೆ ಕಂಡಿದೆ ಎಂದರು.

ಅಭೂತಪೂರ್ವ ಕಾರ್ಯ: ಕೋಟ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರುವ ಡಾ| ಎಂ.ಎನ್‌.ಆರ್‌. ಅವರು ಅವರಿಗೆ ಸಹಾಯ ಕಲ್ಪಿಸುವ ಮೂಲಕ ಅಭೂತಪೂರ್ವ ಕೆಲಸ ಮಾಡುತ್ತಿದೆ ಎಂದರು.

ಆಶಾ ಕಾರ್ಯಕರ್ತರಿಗೆ ಗೌರವಧನ
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಎಸ್‌ಡಿಸಿಸಿ ಬ್ಯಾಂಕ್‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೊಸತನ ತರುವ ಮೂಲಕ ಜನರಿಗೆ ಹತ್ತಿರವಾಗುತ್ತಿದೆ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ|ಎಂ.ಎನ್‌.ರಾಜೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಉಭಯ ಜಿಲ್ಲೆಗಳ ಒಟ್ಟು 2,300 ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ವಿತರಿಸಲಾಯಿತು. ಶಾಸಕ ಹರೀಶ್‌ ಪೂಂಜ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ವ್ಯವಸ್ಥಾಪನಾ ನಿರ್ದೇಶಕ ಆರ್‌ ಶ್ರೀಧರ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ಸಿಇಒ ರವೀಂದ್ರ ಬಿ. ಮುಖ್ಯ ಅತಿಥಿಗಳಾಗಿದ್ದರು.

ನಿರ್ದೇಶಕರಾದ ಟಿ.ಜಿ. ರಾಜಾ ರಾಮ ಭಟ್‌, ಭಾಸ್ಕರ್‌ ಎಸ್‌. ಕೋಟ್ಯಾನ್‌, ಎಂ. ವಾದಿರಾಜ ಶೆಟ್ಟಿ, ಎಸ್‌.ರಾಜು ಪೂಜಾರಿ, ಶಶಿಕುಮಾರ್‌ ರೈ ಬಾಲೊಟ್ಟು, ಎಸ್‌.ಬಿ.ಜಯರಾಮ್‌ ರೈ, ಕೆ.ಹರಿಶ್ಚಂದ್ರ, ಅಶೋಕ್‌ ಕುಮಾರ್‌ ಶೆಟ್ಟಿ, ಕೆ. ಜೈರಾಜ್‌ ಬಿ.ರೈ, ಸದಾಶಿವ ಉಳ್ಳಾಲ್‌, ರಾಜೇಶ್‌ ರಾವ್‌, ಸಿಇಒ ರವೀಂದ್ರ ಬಿ, ದ.ಕ. ಸಂಘಗಳ ಉಪನಿಬಂಧಕ ಪ್ರವೀಣ್‌ ಬಿ. ನಾಯಕ್‌ ಉಪಸ್ಥಿತರಿದ್ದರು. ನಿರ್ದೇಶಕ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ವಂದಿಸಿದರು. ಲಕ್ಷ್ಮಣ ಕುಮಾರ್‌ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Advertisement

ರೈತರಿಗೆ 14,500 ಕೋ.ರೂ. ಸಾಲ
ರಾಜ್ಯ ಸರಕಾರವು ಎಲ್ಲ ಸಹಕಾರಿ ಸಂಸ್ಥೆಗಳ ಮೂಲಕ ಈ ವರ್ಷ 14,500 ಕೋ.ರೂ ಸಾಲ ನೀಡುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 4,422 ಕೋ.ರೂ. ಸಾಲವನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಕರಾವಳಿ: 196 ಕೋ.ರೂ. ಸಾಲ ಬಿಡುಗಡೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್‌ ಸುಮಾರು 26,000 ರೈತರಿಗೆ ಸಾಲ ನೀಡುವ ಗುರಿ ಇರಿಸಿಕೊಂಡಿದ್ದು, ಇದರಲ್ಲಿ 19,517 ಮಂದಿಗೆ 196 ಕೋ.ರೂ. ಸಾಲ ನೀಡಲಾಗಿದೆ.

ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಲ್ಲ ಸಹಕಾರ ಸಂಸ್ಥೆಗಳಿಂದ ಸುಮಾರು 53 ಕೋ.ರೂ. ಹಣವನ್ನು ನೀಡಲಾಗಿದೆ. ರಾಜ್ಯದ 42,680 ಆಶಾ ಕಾರ್ಯಕರ್ತರಿಗೆ ಸಹಕಾರಿ ಸಂಸ್ಥೆಗಳಿಂದ ಪ್ರೋತ್ಸಾಹಧನ ನೀಡಬೇಕೆಂಬ ಸಿಎಂ ಕೋರಿಕೆ ಹಿನ್ನೆಲೆಯಲ್ಲಿ ಆಯಾಯ ಜಿಲ್ಲೆಯ ಸಹಕಾರ ಸಂಸ್ಥೆಗಳಿಂದ 12.07 ಕೋ.ರೂ.ಗಳನ್ನು ಸಹಕಾರ ಇಲಾಖೆಯ ಮೂಲಕ ಸಂಗ್ರಹಿಸಿ ಆಶಾ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಜು.2ರ ವರೆಗೆ 22,138 ಆಶಾ ಕಾರ್ಯಕರ್ತರಿಗೆ ತಲಾ 3,000 ರೂ. ಗೌರವಧನ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಆಶಾ ಕಾರ್ಯಕರ್ತೆಯರಿಗೆ ಸಾಲ ಸೌಲಭ್ಯ: ಡಾ|ಎಂ.ಎನ್‌.ಆರ್‌
ಏಕರೂಪದ ತಂತ್ರಾಂಶ 2 ತಿಂಗಳಲ್ಲಿ ಬ್ಯಾಂಕ್‌ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಮುಂದಿನ ದಿನದಲ್ಲಿ ಆಶಾ ಕಾರ್ಯಕರ್ತೆಯರು ಸ್ವಸಹಾಯ ಗುಂಪು ರಚಿಸಿದರೆ ಅವರಿಗೂ ಸಾಲ ಸೌಲಭ್ಯ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next