Advertisement

ತೆರೆ ಸರಿಸಿ ಪ್ರದರ್ಶನ ನೀಡುವ ಬದಲು ತಾವೇ ತೆರೆಮರೆಗೆ: ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಕಹಾನಿ

12:24 PM Feb 12, 2022 | Team Udayavani |

ಮಹಾನಗರ : ಮಲ್ಟಿಪ್ಲೆಕ್ಸ್‌ ಎಂಬ ಮಾಯಾಲೋಕ ಹಾಗೂ ಮೊಬೈಲ್‌ ಟ್ರೆಂಡ್‌ ಸದ್ಯ ಏಕಪರದೆ (ಸಿಂಗಲ್‌ ಸ್ಕ್ರೀನ್‌) ಸಿನಿಮಾ ಟಾಕೀಸುಗಳಿಗೆ ಮುಳ್ಳಾಗಿವೆ. ಪರಿಣಾಮವಾಗಿ ಮಂಗಳೂರಿನ ನೆನಪುಗಳ ಖಜಾನೆಯಾಗಿದ್ದ ಹಲವು ಸಿನಿಮಾ ಮಂದಿರಗಳು ತೆರೆ ಸರಿಸಿ ಸಿನಿಮಾ ಪ್ರದರ್ಶಿಸುವ ಬದಲು ತಾವೇ ತೆರೆಮರೆಗೆ ಸರಿಯುತ್ತಿವೆ.

Advertisement

ನಗರದ 3-4 ಕಿ.ಮೀ ವ್ಯಾಪ್ತಿಯಲ್ಲೇ ಸುಮಾರು 10 ಥಿಯೇಟರ್‌ಗಳಿದ್ದವು. ಆದರೆ ಅಮೃತ್‌, ಪ್ಲಾಟಿನಂ, ನ್ಯೂಚಿತ್ರಾ ಥಿಯೇಟರ್‌ಗಳು ಹಲವು ತಿಂಗಳ ಹಿಂದೆಯೇ ಬಾಗಿಲು ಹಾಕಿದ್ದವು. ಸೆಂಟ್ರಲ್‌ ಟಾಕೀಸ್‌ ಇತ್ತೀಚೆಗೆ ಪ್ರದರ್ಶನ ಸ್ಥಗಿತಗೊಳಿಸಿದೆ. ಸದ್ಯ ಜ್ಯೋತಿ ಥಿಯೇಟರ್‌ ಕೂಡ ಮಲ್ಟಿಪ್ಲೆಕ್ಸ್‌ನ ಕನಸಿನೊಂದಿಗೆ ವೇಷವನ್ನು ಕಳಚುತ್ತಿದೆ.

ಅಮೃತ್‌ ಥಿಯೇಟರ್‌
ಪಾಂಡೇಶ್ವರದಲ್ಲಿ 1969ರಲ್ಲಿ ಡಿ.ಎನ್‌.ಪೈ ಅವರು ಅಮೃತ್‌ ಎಂಬ ಚಿತ್ರಮಂದಿರವನ್ನು ಸ್ಥಾಪಿಸಿದರು. ಸುಮಾರು 750 ಆಸನದ ಚಿತ್ರಮಂದಿರ. ಇಲ್ಲಿ “ನಯೀ ರೋಶನ್‌’ ಎಂಬ ಹಿಂದಿ ಚಿತ್ರ ಮೊದಲು ಪ್ರದರ್ಶನವಾಗಿತ್ತು. 2007ರಲ್ಲಿ ತಮಿಳಿನ “ಈ’ ಸಿನೆಮಾವೇ ಕೊನೆ ಸಿನಿಮಾ. ಬಳಿಕ ಸಿನೆಮಾ ಮಂದಿರ ನೆಲಸಮವಾಗಿ ಸದ್ಯ ಬಹು ಅಂತಸ್ತಿನ ದೊಡ್ಡ ಕಟ್ಟಡವಾಗಿ ಎದ್ದು ನಿಂತಿದೆ.

ಪ್ಲಾಟಿನಂ ಥಿಯೇಟರ್‌
ಫಳ್ನೀರ್‌ ರಸ್ತೆಯಲ್ಲಿ 1974ರಲ್ಲಿ ಆರಂಭ ವಾದದ್ದು ಫ್ಲಾಟಿನಂ ಚಿತ್ರಮಂದಿರ. ಪಿ.ಎಂ. ಶಾಹಿದಾ ಇಬ್ರಾಹಿಂ ಅವರು ಇದನ್ನು ಸ್ಥಾಪಿಸಿದ್ದರು. 780 ಆಸನಗಳ ವ್ಯವಸ್ಥೆ ಇತ್ತು. ಮಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳ ಸಾಲಿಗೆ ಇದೂ ಸೇರಿತ್ತು. 2017ರಲ್ಲಿ ಇದೂ ಮುಚ್ಚಿತು.

ನ್ಯೂ ಚಿತ್ರಾ ಟಾಕೀಸ್‌
ಬ್ರಹ್ಮಾವರದಲ್ಲಿದ್ದ ಕೊಚ್ಚಿಕಾರ್‌ ವಿಟ್ಟಲದಾಸ್‌ ಪೈ ಅವರು ಮಂಗಳೂರಿಗೆ ಬಂದು, ಪಾಲುದಾರ ರೊಬ್ಬರೊಂದಿಗೆ ಕಾರ್‌ಸ್ಟ್ರೀಟ್‌, ಕುದ್ರೋಳಿಯ ಸಂಗಮ ಸ್ಥಳದಲ್ಲಿ 1926ರಲ್ಲಿ ಸ್ಥಾಪಿಸಿದ್ದು “ಹಿಂದೂಸ್ಥಾನ್‌ ಸಿನೆಮಾ’ ಚಿತ್ರಮಂದಿರ. ಇದು ಆಗ ಇಡೀ ಕರಾವಳಿ ಜಿಲ್ಲೆಯ ಪ್ರಥಮ ಚಿತ್ರಮಂದಿರ. 1973ರಲ್ಲಿ ಇದರ ಹೆಸರು ನ್ಯೂ ಚಿತ್ರಾ ಆಯಿತು. ವಿಶೇಷವೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಎಂಬ ಹೆಗ್ಗಳಿಕೆ ಇದರದ್ದು. ಇದೂ 2020ರಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿ ವಾಣಿಜ್ಯ ಚಟುವಟಿಕೆಗೆ ತೆರೆದುಕೊಂಡಿದೆ.

Advertisement

ಸೆಂಟ್ರಲ್‌ ಟಾಕೀಸ್‌
“ಸೆಂಟ್ರಲ್‌’ ಥಿಯೇಟರ್‌ ನಗರದ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು. ಕೆ. ಕೃಷ್ಣೋಜಿ ರಾವ್‌ ಅವರು “ಕೃಷ್ಣ ಟೂರಿಂಗ್‌ ಟಾಕೀಸ್‌’ ಎಂಬ ಹೆಸರಿನಲ್ಲಿ 1927ರಲ್ಲಿ ಸ್ಥಾಪಿಸಿದರು. ಮಣ್ಣಿನ ಗೋಡೆಯ ಹುಲ್ಲಿನ ಮಾಡಿನ ಈ ಟಾಕೀಸ್‌ ನಲ್ಲಿ ಕುಳಿತು ಚಿತ್ರ ನೋಡಲು ನೆಲ, ಬೆಂಚಿನ ವ್ಯವಸ್ಥೆಯಿತ್ತು. 1941ರಲ್ಲಿ “ಸೆಂಟ್ರಲ್‌ ಟಾಕೀಸ್‌’ ಆಯಿತು. 2021ರಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿತು.

ಇದನ್ನೂ ಓದಿ : ಮಾವೋವಾದಿಗಳ ಎನ್ ಕೌಂಟರ್ ನಲ್ಲಿ ಪ್ಯಾರಾಮಿಲಿಟರಿ ಅಧಿಕಾರಿ ಹತ್ಯೆ

ಜ್ಯೋತಿ ಥಿಯೇಟರ್‌
1950 ಎ. 22 ರಂದು ಆರಂಭವಾದದ್ದು ಜ್ಯೋತಿ ಟಾಕೀಸ್‌. “ಮಂಜ್ಹೂರ್’ ಎಂಬ ಹಿಂದಿ ಸಿನೆಮಾ ಇಲ್ಲಿ ಮೊದಲಿಗೆ ಪ್ರದರ್ಶನವಾಗಿತ್ತು. ಕೆಲವು ಬಾರಿ ಇಲ್ಲಿ ಮದುವೆಯೂ ನಡೆದಿತ್ತು. ತುಳು ಭಾಷೆಯ ಪ್ರಥಮ ಸಿನೆಮಾ “ಎನ್ನ ತಂಗಡಿ’ ಇಲ್ಲೇ ಬಿಡುಗಡೆಯಾಗಿದ್ದು. 886 ಆಸನಗಳಿದ್ದವು. ಸದ್ಯ ಈ ಥಿಯೇಟರ್‌ ಕೂಡ ನೆಲಸಮ ಆಗುತ್ತಿದ್ದು ಮಲ್ಟಿಪ್ಲೆಕ್ಸ್‌ ಸ್ವರೂಪದ ನಿರೀಕ್ಷೆಯಲ್ಲಿದೆ.
1947ರಲ್ಲಿ ಕಾರ್‌ಸ್ಟ್ರೀಟ್‌ ಬಳಿ ಕೆ. ದಾದಾಬಾಯಿ ರಾವ್‌ ಅವರು ಸ್ಥಾಪಿಸಿದ ಬಾಲಾಜಿ ಥಿಯೇಟರ್‌ನಲ್ಲಿ ಸದ್ಯ ಚಿತ್ರ ಪ್ರದರ್ಶನ ನಡೆ ಯುತ್ತಿಲ್ಲ. ಈ ಮಧ್ಯೆ, 2006ರಲ್ಲಿ ಬಿಗ್‌ ಸಿನೆಮಾಸ್‌, 2012ರಲ್ಲಿ ಸಿನಿಪೊಲೀಸ್‌ ಹಾಗೂ 2014ರಿಂದ ಪಿವಿಆರ್‌ ಮಲ್ಟಿಪ್ಲೆಕ್ಸ್‌ ನಲ್ಲಿ ಚಿತ್ರ ಪ್ರದರ್ಶನವಿದೆ.

ಸಿಂಗಲ್‌ ಸ್ಕ್ರೀನ್‌ ಗೆ ಇಲ್ಲಿ ಬನ್ನಿ
ಕೆ.ಎಸ್‌.ರಾವ್‌ ರಸ್ತೆಯಲ್ಲಿ 1958ರಲ್ಲಿ ಬಿ.ಕೆ. ವಾಸು ದೇವ ರಾವ್‌ ನಿರ್ಮಿಸಿದ ಪ್ರಭಾತ್‌, ಅದರ ಪಕ್ಕದಲ್ಲಿ 1970ರಲ್ಲಿ ಆರಂಭವಾದ ಸುಚಿತ್ರಾ, ಭವಂತಿಸ್ಟ್ರೀಟ್‌ ರಸ್ತೆಯಲ್ಲಿ 1950ರಲ್ಲಿ ಕೆ.ರಾಮರಾವ್‌ ಅವರಿಂದ ಸ್ಥಾಪನೆಯಾದ ರಾಮಕಾಂತಿ, 1948ರಲ್ಲಿ ಕೊಚ್ಚಿಕಾರ್‌ ವಿಟ್ಟಲದಾಸ್‌ ಪೈ ಅವರಿಂದ ಸೆಂಟ್ರಲ್‌ ಮಾರ್ಕೆಟ್‌ ಬಳಿ ನಿರ್ಮಾಣವಾದ ರೂಪವಾಣಿ ಥಿಯೇಟರ್‌ಗಳು ನಗರದ ಪ್ರೇಕ್ಷಕರನ್ನು ಮನರಂಜನೆ ನೀಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next