Advertisement

ಮುದ್ರಣ ಅಗತ್ಯಗಳಿಗೆ ಒಂದೇ ಸೂರು

11:56 AM Aug 06, 2018 | Team Udayavani |

ಬೆಂಗಳೂರು: ಕನಕಪುರ ರಸ್ತೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯದ ಮೊದಲ ಪ್ರಿಂಟ್‌ ಟೆಕ್‌ ಪಾರ್ಕ್‌ ಕ್ಲಸ್ಟರ್‌ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಅಕ್ಟೋಬರ್‌ನಲ್ಲಿ ಉದ್ಘಾಟನೆಗೆ ಸಜ್ಜಾಗಿದೆ. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯ “ಕ್ಲಸ್ಟರ್‌ ಡೆವೆಲಪ್‌ಮೆಂಟ್‌’ ಯೋಜನೆಯಡಿ 2016ರಲ್ಲಿ ಪ್ರಿಂಟ್‌ ಟೆಕ್‌ ಪಾರ್ಕ್‌ ನಿರ್ಮಾಣ ಆರಂಭವಾಗಿತ್ತು.

Advertisement

ಪ್ರಸ್ತುತ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈಗಾಗಲೇ 10ಕ್ಕೂ ಹೆಚ್ಚು ಮುದ್ರಣ ಘಟಕಗಳು ಚಟುವಟಿಕೆ ಆರಂಭಿಸಿವೆ. ಈ ಯೋಜನೆಯಲ್ಲಿ ರಾಜ್ಯ ಮುದ್ರಣಕಾರರ ಸಂಘದ ನೇತೃತ್ವದಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರವನ್ನೂ (ಕಾಮನ್‌ ಫೆಸಿಲಿಟಿ ಸೆಂಟರ್‌) ಆರಂಭಿಸುತ್ತಿದ್ದು, ಇಲ್ಲಿಗೆ 15 ಕೋಟಿ ರೂ. ವೆಚ್ಚದ ದೇಶಿ-ವಿದೇಶಿ ಮುದ್ರಣ ಯಂತ್ರಗಳನ್ನು ಇದೇ ತಿಂಗಳಲ್ಲಿ ತರಿಸಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಶಿವಕಾಶಿ ಬಿಟ್ಟರೆ ಬೇರೆಲ್ಲೂ ಪ್ರಿಂಟ್‌ ಟೆಕ್‌ ಪಾರ್ಕ್‌ ಇಲ್ಲ. ಹೀಗಾಗಿ, ರಾಜ್ಯದ ಮುದ್ರಣ ಉದ್ಯಮದ ತಂತ್ರಜ್ಞಾನ ಉನ್ನತೀಕರಣ, ಮುದ್ರಣದ ವೇಗ ಹಾಗೂ ಗುಣಮಟ್ಟ ವೃದ್ಧಿ ಉದ್ದೇಶದಿಂದ ಈ ಪಾರ್ಕ್‌ ಸಿದ್ಧವಾಗುತ್ತಿದೆ. ಇನ್ನು ಆರ್ಥಿಕ ಹಾಗೂ ತಂತ್ರಜ್ಞಾನದಲ್ಲಿ ಹಿಂದುಳಿದ ಮುದ್ರಕರಿಗೆ ಸಾಮಾನ್ಯ ಸೌಲಭ್ಯ ಕೇಂದ್ರದ ಮೂಲಕ ರಿಯಾಯಿತಿ ಬೆಲೆಯಲ್ಲಿ ಉತ್ಪನ್ನ, ಯಂತ್ರ ಹಾಗೂ ತಂತ್ರಜ್ಞಾನಗಳನ್ನು ಒದಗಿಸಲಾಗುತ್ತದೆ.

92 ಮುದ್ರಣ ಘಟಕಗಳು: 57 ಎಕರೆ ವಿಸ್ತೀರ್ಣದ ಟೆಕ್‌ ಪಾರ್ಕ್‌ನಲ್ಲಿ ಒಂದು ಎಕರೆ, ಅರ್ಧ ಹಾಗೂ ಕಾಲು ಎಕರೆಯಂತೆ ವಿಂಗಡಣೆ ಮಾಡಿ 92 ಮುದ್ರಣ ಘಟಕಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಅರ್ಜಿ ಆಹ್ವಾನಿಸಿ ರಾಜ್ಯ ಮುದ್ರಣಕಾರರ ಸಂಘದ ಸದಸ್ಯರಿಗೆ ಸ್ಥಳ ನಿಗದಿ ಮಾಡಿದ್ದು, ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. 92ಕ್ಕೂ ಹೆಚ್ಚು ಮುದ್ರಕರು ಒಂದೇ ಸೂರಿನಡಿ ಕಾರ್ಯನಿರ್ವಹಿಸುವುದರಿಂದ ಈ ಪ್ರಿಂಟ್‌ ಟೆಕ್‌ ಪಾರ್ಕ್‌ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಕಾರ್ಯದರ್ಶಿ ಮೋಹನ್‌ಕುಮಾರ್‌.

ಕೇಂದ್ರದಿಂದ ಶೇ.70 ಅನುದಾನ: ಪ್ರಿಂಟ್‌ ಟೆಕ್‌ ಪಾರ್ಕ್‌ ನಿರ್ಮಾಣಕ್ಕೆ 20 ಕೋಟಿ ರೂ. ವೆಚ್ಚವಾಗಲಿದೆ. ಕೇಂದ್ರ ಸರ್ಕಾರದಿಂದ ಶೇ.70 ಅನುದಾನ ಬಂದಿದ್ದು, ರಾಜ್ಯ ಸರ್ಕಾರ ಶೇ.15 ಹಾಗೂ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ ಶೇ.15 ರಷ್ಟು ಹಣ ಹೂಡಿಕೆ ಮಾಡಿದೆ.

Advertisement

ವಿದೇಶಿ ಯಂತ್ರಗಳು: ಪಾರ್ಕ್‌ನ ಸಾಮಾನ್ಯ ಸೌಲಭ್ಯ ಕೇಂದ್ರದಲ್ಲಿ ರಾಜ್ಯದ ಎಲ್ಲ ಮುದ್ರಕರಿಗೂ ರಿಯಾಯಿತಿ ದರದಲ್ಲಿ ಮುದ್ರಣಕ್ಕೆ ಅವಕಾಶವಿದ್ದು, ಸಂಘದಿಂದ 60ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಲಾಗುತ್ತಿದೆ. ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ, ತ್ವರಿತ ಹಾಗೂ ಗುಣಮಟ್ಟದ ಮುದ್ರಣ ಸೌಲಭ್ಯ ನೀಡುವ ಉದ್ದೇಶ ಇರುವುದರಿಂದ ವಿದೇಶಿ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. 20ಕ್ಕೂ ಹೆಚ್ಚು ದೇಶಿ ಯಂತ್ರಗಳ ಜತೆಗೆ ಜರ್ಮನಿಯಿಂದ 4 ಅಧ್ಯಾಧುನಿಕ ಹೈಡಲ್‌ ಬರ್ಗ್‌ ಮುದ್ರಣ ಯಂತ್ರಗಳು ತರಿಸಲಾಗುತ್ತಿದೆ.

ಮುದ್ರಣ ತರಬೇತಿ ಆರಂಭ: ಚಾಮರಾಜಪೇಟೆಯಲ್ಲಿರುವ ರಾಜ್ಯ ಮುದ್ರಣಕಾರರ ಸಂಘದ ಕಟ್ಟಡದಲ್ಲಿ ಕಳೆದ 5 ವರ್ಷಗಳಿಂದ 1000ಕ್ಕೂ ಯುವಕರಿಗೆ ಮುದ್ರಣ ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗುತ್ತಿದೆ. ಪ್ರಿಂಟ್‌ ಟೆಕ್‌ ಪಾರ್ಕ್‌ನಲ್ಲಿ ಉತ್ಕೃಷ್ಟ ದರ್ಜೆಯ ವಿದೇಶಿ ಯಂತ್ರಗಳು ಇರಲಿವೆ. ಹೀಗಾಗಿ, ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ 20 ಅಭ್ಯರ್ಥಿಗಳ ಒಂದು ಬ್ಯಾಚ್‌ನಂತೆ ಮೂರು ತಿಂಗಳ ಅವಧಿಯ ಕೋರ್ಸ್‌ ಅನ್ನು ಆರಂಭಿಸುವುದಾಗಿ ಸಂಘ ತಿಳಿಸಿದೆ.

ಪ್ರಿಂಟ್‌ ಟೆಕ್‌ ಪಾರ್ಕ್‌ನ ಸಾಮಾನ್ಯ ಸೌಲಭ್ಯ ಕೇಂದ್ರದಲ್ಲಿ ಉನ್ನತ ತಂತ್ರಜ್ಞಾನ ಬಳಸಿ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಮುದ್ರಣ ಸೌಲಭ್ಯ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದಾಗಿ ತಂತ್ರಜ್ಞಾನ ಹಾಗೂ ಆರ್ಥಿಕವಾಗಿ ಹಿಂದುಳಿದ ಮುದ್ರಕರಿಗೆ ನೆರವಾಗಲಿದೆ.
-ಬಿ.ಆರ್‌.ಅಶೋಕ್‌ಕುಮಾರ್‌, ಅಧ್ಯಕ್ಷರು, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ

ಮುದ್ರಣ ತಂತ್ರಜ್ಞಾನ ಆಧುನೀಕರಣಕ್ಕೆ ಪ್ರಿಂಟ್‌ ಟೆಕ್‌ ಪಾರ್ಕ್‌ ಸಹಕಾರಿ ಆಗಲಿದೆ. ಇನ್ನು ಇಲ್ಲಿ ಮುದ್ರಕರ ಸಂಘ ವಿದೇಶಿ ತಂತ್ರಜ್ಞಾನದ ಕುರಿತು ನೀಡುವ ತರಬೇತಿಯಿಂದ ಪರಿಣಿತ ಮುದ್ರಕರು ನಮಗೆ ಸಿಗಲಿದ್ದಾರೆ.
-ಡಾ.ವಸುಂಧರಾ ಭೂಪತಿ, ಅಧ್ಯಕ್ಷರು, ಕರ್ನಾಟಕ ಪುಸ್ತಕ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next