Advertisement

ಕಾಡು “ಮೇಡಂ’: ದಟ್ಟ ಕಾಡಿನ ನಡುವೆ ಒಬ್ಬಳು…

09:08 AM Jun 06, 2019 | keerthan |

ಕಾಡಿನೊಂದಿಗೆ ಗಂಡಿಗಿರುವ ಒಡನಾಟ, ಏನೋ ಒಂದು ಭಂಡ ಧೈರ್ಯ ಹೆಣ್ಣಿಗಿರುವುದಿಲ್ಲ. ದಟ್ಟ ಕಾಡಿನ ಮಹಾಮೌನ, ಹುಲಿ- ಸಿಂಹಗಳ ಗರ್ಜನೆ… ಇವೆಲ್ಲವನ್ನೂ ಹೆಣ್ಣು ಕಲ್ಪಿಸಿಕೊಂಡರೂ ಸಣ್ಣಗೆ ಕಂಪಿಸುತ್ತಾಳೆ. ಆದರೆ, ಈ ಮಾತಿಗೆ ಅಪವಾದ ನೇತ್ರಾವತಿ ಗೌಡ. ಬಂಡೀಪುರ ಅಭಯಾರಣ್ಯದಲ್ಲಿ ಪ್ರಭಾರ ಡಿಆರ್‌ಎಫ್ಓ (ವನಪಾಲಕಿ) ಆಗಿರುವ ಇವರಿಗೆ, ಕಾಡೆಂದರೆ ಮನೆಯಂತೆ. ದಟ್ಟಡವಿಯಲ್ಲಿ ಒಂಟಿಯಾಗಿ ಸಂಚರಿಸುವ, ಹುಲಿಯ ಸನಿಹದಲ್ಲೇ ನಿಂತು ಫೋಟೋ ತೆಗೆಯುವಂಥ ದಿಟ್ಟೆ. “ವಿಶ್ವ ಪರಿಸರ’ದ ದಿನದ ಈ ಹೊತ್ತಿನಲ್ಲಿ ಹಸಿರಿನೊಳಗೆ ಒಂದಾಗಿ ಜೀವಿಸುತ್ತಿರುವ ಇವರ ಮಾತುಗಳು “ಅವಳು’ ಸಂಚಿಕೆಯ ವಿಶೇಷ…

Advertisement

ಸಣ್ಣವಳಿದ್ದಾಗ, ಖಾಕಿ ಹಾಕಿದವರೆಲ್ಲರೂ ಪೊಲೀಸರೇ ಅಂತಂದುಕೊಂಡಿದ್ದೆ. ಕಾಡಿನ ದಾರಿಯಲ್ಲಿ ಒಬ್ಬಳೇ ನಡೆಯುತ್ತಾ ಶಾಲೆಗೆ ಹೋಗುವಾಗ ಆಗಾಗ ಆ ಖಾಕಿಧಾರಿಗಳು ಎದುರಾಗುತ್ತಿದ್ದರು. ದಟ್ಟ ಕಾಡಿನೊಳಗೆ ನುಗ್ಗುತ್ತಾ ಮುಂದೆ ಸಾಗುವ ಅವರನ್ನು ನೋಡಿದಾಗ, ಇವರಿಗೆ ಹೆದರಿಕೆಯಾಗಲ್ವಾ ಎಂಬ ಪ್ರಶ್ನೆ ಕಾಡುತ್ತಿತ್ತು. ಆಮೇಲೆ ಗೊತ್ತಾಯ್ತು, ಅವರು ಫಾರೆಸ್ಟ್‌ ಆಫೀಸರ್‌ಗಳೆಂದು. ಕಾಡಿನೊಳಗೆ ಅವರ ಕೆಲಸವೇನಂತ ಗೊತ್ತಾಗಿದ್ದು ಮಾತ್ರ, “ಗಂಧದಗುಡಿ’ಯ ಅಣ್ಣಾವ್ರನ್ನು ನೋಡಿದಾಗಲೇ! ಆ ಸಿನಿಮಾ ನೋಡಿ ಅದೆಷ್ಟು ಬಾರಿ ರೋಮಾಂಚಿತಳಾಗಿದ್ದೇನೋ, ಲೆಕ್ಕವಿಲ್ಲ. ಕನಸಿನಲ್ಲಿ ಆನೆಯ ಮೈ ತೊಳೆದಿದ್ದೂ ಇದೆ. ಆಗಿನ್ನೂ ಕಾಡಿನಲ್ಲಿ ವೀರಪ್ಪನ್‌ನ ಪಾರುಪತ್ಯವಿದ್ದ ಕಾಲ. ಕಾಡಿನ ಮಧ್ಯೆಯೇ ಹುಟ್ಟಿ, ಬೆಳೆದ ನನಗೆ ಕಾಡುಗಳ್ಳನ ಕಥೆಗಳೆಂದರೆ ಎಲ್ಲಿಲ್ಲದ ಕುತೂಹಲ. ಒಂದುವೇಳೆ, ನಾನೇನಾದರೂ ಫಾರೆಸ್ಟ್‌ ಆಫೀಸರ್‌ ಆಗಿದ್ದಿದ್ದರೆ, ವೀರಪ್ಪನ್‌ಗೆ ಸರಿಯಾಗಿ ಬುದ್ಧಿ ಕಲಿಸುತ್ತಿದ್ದೆ. ಇನ್ನಾéವತ್ತೂ ಅವನು ಕಾಡಿನ ಕಡೆಗೆ ಹೋಗದ ಹಾಗೆ ಮಾಡುತ್ತಿದ್ದೆ ಅಂತೆಲ್ಲಾ ಸುಮ್‌ಸುಮ್ನೆ ಕಲ್ಪಿಸಿಕೊಳ್ಳುತ್ತಿದ್ದೆ.

2009-10ರಲ್ಲಿ ನಾನಿನ್ನೂ ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದೆ. ಅರಣ್ಯ ಇಲಾಖೆಯಿಂದ ಫಾರೆಸ್ಟ್‌ ಗಾರ್ಡ್‌ (ಅರಣ್ಯ ರಕ್ಷಕ) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಬಾಲ್ಯದಲ್ಲಿ ಕನಸೊಂದು ಮೂಡಿತ್ತಲ್ಲ, ಹಾಗಾಗಿ ನಾನೂ ಅರ್ಜಿ ಹಾಕಿಬಿಟ್ಟೆ. ನಿಜಕ್ಕೂ ನಾನು ಫಾರೆಸ್ಟ್‌ ಗಾರ್ಡ್‌ ಆಗಬಲ್ಲೆನಾ ಎಂಬ ಪ್ರಶ್ನೆಗೆ ಉತ್ತರ ಸಿಗುವ ಮುನ್ನವೇ, ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಯಲ್ಲಿತ್ತು. ನನ್ನೊಂದಿಗೆ ಒಟ್ಟು 35 ಮಹಿಳೆಯರು ಅದೇ ಹುದ್ದೆಗೆ ಆಯ್ಕೆಯಾಗಿದ್ದರು. ಇನ್ನು ಹೆಜ್ಜೆ ಹಿಂದಿಡುವುದು ಬೇಡ ಅಂತ ಗಟ್ಟಿ ನಿರ್ಧಾರ ಮಾಡಿದೆ.

ಏಕಾಂಗಿಯಾಗಿ ಬಂಡೀಪುರಕ್ಕೆ ಬಂದೆ…
ನನ್ನ ಮೊದಲ ಪೋಸ್ಟಿಂಗ್‌ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತ ಅರಣ್ಯ ಪ್ರದೇಶಕ್ಕಾಗಿತ್ತು. ನನ್ನ ಜೊತೆ ಇನ್ನೂ ಇಬ್ಬರು ಮಹಿಳಾ ಅಭ್ಯರ್ಥಿಗಳು ಬಂಡೀಪುರಕ್ಕೆ ಬರಬೇಕಿತ್ತು. ಆದರೆ, ಅವರಿಬ್ಬರೂ ತರಬೇತಿ ಸಂದರ್ಭದಲ್ಲೇ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡುಬಿಟ್ಟರು. ಹಾಗಾಗಿ, ನಾನೊಬ್ಬಳೇ “ಹುಲಿ’ ಬಾಯಿಗೆ ಬಂದು ಬೀಳುವಂತಾಯ್ತು. ಬಂಡೀಪುರ ಅಂದ್ರೆ ಹುಡುಗಾಟವೇ? ಒಂದು ಸಾವಿರ ಚದರ ಕಿ.ಮೀ. ವಿಸ್ತಾರದ ದಟ್ಟ ಅರಣ್ಯ ಪ್ರದೇಶವದು. ಒಂದು ದಿನದಲ್ಲಿ ಸಫಾರಿ ಹೋಗುವವರಿಗೆ ಅದರ ಅಗಾಧತೆಯ ಅರಿವಾಗುವುದಿಲ್ಲ. ಕಾಡು ಇಷ್ಟ ಅನ್ನೋದು ನಿಜವಾದರೂ, ಈ ದಟ್ಟಡವಿಯಲ್ಲಿ ಬದುಕುಳಿಯೋದು ಸಾಧ್ಯಾನಾ ಅಂತ ಅಂಜಿಕೆಯಾಗಿದ್ದೂ ಸುಳ್ಳಲ್ಲ. ಅಕಸ್ಮಾತ್‌, ಕೆಲಸ ಮಾಡೋಕೆ ಸಾಧ್ಯಾನೇ ಇಲ್ಲ ಅಂತಾದರೆ ವರ್ಗಾವಣೆ ಕೇಳ್ತೀನಿ, ಅದೂ ಆಗದಿದ್ದರೆ ಕೆಲಸವನ್ನೇ ಬಿಟ್ಟು ಬಿಡ್ತೀನಿ ಅಂತ ನಿರ್ಧರಿಸಿಯೇ ಕಾಡೊಳಗೆ ಬಂದಿದ್ದೆ. ಆಗ ನನಗಿನ್ನೂ 19 ವರ್ಷ! ಇಡೀ ಬಂಡೀಪುರದಲ್ಲಿ ನಾನೊಬ್ಬಳೇ ಮಹಿಳಾ ಅರಣ್ಯ ಸಿಬ್ಬಂದಿ!


ಕಾಡೇ ಆಫೀಸು, ಕಾಡೇ ಮನೆ
ಮೊದಲಿಗೆ ಬಂಡೀಪುರ ಸಫಾರಿಗೆ ಟಿಕೆಟ್‌ ನೀಡುವ ಕೌಂಟರಿನಲ್ಲಿ ಕಚೇರಿ ಕೆಲಸ ವಹಿಸಿದರು. ಪ್ರವಾಸಿಗರಿಗೆ ಟಿಕೆಟ್‌ ನೀಡುವುದು, ಕಚೇರಿಯ ಕಂಪ್ಯೂಟರ್‌ ಕೆಲಸಗಳು, ಕಡತದ ಕೆಲಸಗಳನ್ನು ನೋಡಿಕೊಳ್ಳುತ್ತಾ ಒಂದು ವರ್ಷ ಕಳೆದೆ. ನಂತರ ಕಳ್ಳಬೇಟೆತಡೆ ಶಿಬಿರದ (ಆ್ಯಂಟಿ ಪೋಚಿಂಗ್‌ ಕ್ಯಾಂಪ್‌) ಕರ್ತವ್ಯಕ್ಕೆ ನಿಯೋಜಿಸಿದರು. ಸವಾಲಿನ ಕೆಲಸ ಶುರುವಾಗಿದ್ದು ಆಗ. ನನ್ನ ಜೊತೆ ನಾಲ್ವರು ಅರಣ್ಯ ವೀಕ್ಷಕರು (ವಾಚರ್‌) ಇರುತ್ತಿದ್ದರು. ಬಂಡೀಪುರ ಅರಣ್ಯ ಇಲಾಖೆ ಕ್ಯಾಂಪಸ್‌ನಿಂದ 2 ಕಿ.ಮೀ. ದೂರದ ಕ್ಯಾಂಪ್‌ಗೆ ಕಾಡಿನಲ್ಲಿ ನಡೆದು ಹೋಗುವುದು, ಕಳ್ಳ ಬೇಟೆತಡೆ ಶಿಬಿರದಲ್ಲಿ ಗಸ್ತಿನ ಕೆಲಸ ನಿರ್ವಹಿಸುವುದು, ಸಂಜೆ ಹಿಂದಿರುಗುವುದು ನನ್ನ ಡ್ನೂಟಿ.

Advertisement

ಬೇಸಿಗೆ ಅಂದ್ರೆ ಅಗ್ನಿ ಪರೀಕ್ಷೆ
ಬೇಸಿಗೆ ಕಾಲ ಅರಣ್ಯ ಇಲಾಖೆಯ ಪಾಲಿಗೆ ಅಗ್ನಿ ಪರೀಕ್ಷೆಯ ಸಮಯ. ಡಿಸೆಂಬರ್‌ ವೇಳೆ ಫೈರ್‌ ಲೈನ್‌ (ಬೆಂಕಿರೇಖೆ) ಮಾಡಬೇಕು. ಜನವರಿಯಲ್ಲಿ ಫೈರ್‌ ವಾಚರ್‌ಗಳ ನೇಮಕವಾಗುತ್ತದೆ. ಅವರೊಂದಿಗೆ ಅರಣ್ಯದಲ್ಲಿ ಗಸ್ತು ಹೊಡೆಯಬೇಕು. ಕಾಡ್ಗಿಚ್ಚು ಕಾಣಿಸಿಕೊಂಡರೆ, ವಾಚರ್‌ಗಳೊಂದಿಗೆ ಹೋಗಿ ಬೆಂಕಿ ನಂದಿಸಬೇಕು. ಪ್ರಾಣಿಗಳ ಬೇಟೆಯ ಭಯ ಕಡಿಮೆಯಾಗಿದ್ದರೂ, ಬೆಂಕಿಯಿಂದ ಕಾಡನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಕಾಡ್ಗಿಚ್ಚಿನಿಂದ ಆಗುವ ಅನಾಹುತಗಳು ಗೊತ್ತೇ ಇದೆಯಲ್ಲ. ಹಾಗಾಗಿ ಸೆಖೆ, ಬಿಸಿಲು ಅಂತ ಆಫೀಸಿನೊಳಗೆ ಕೂರುವಂತಿಲ್ಲ. ಉಳಿದ ಸರ್ಕಾರಿ ನೌಕರರಿಗೆ ಸಿಕ್ಕಿದಷ್ಟು ರಜೆಯೂ ಸಿಗೋದಿಲ್ಲ. ರಜಾ ದಿನಗಳಲ್ಲೇ ಬಂಡೀಪುರಕ್ಕೆ ಹೆಚ್ಚು ಪ್ರವಾಸಿಗರು ಬರುವುದರಿಂದ, ಆಗ ಕೆಲಸದೊತ್ತಡವೂ ಹೆಚ್ಚಿರುತ್ತದೆ.

ಅಟ್ಟಿಸಿಕೊಂಡು ಬಂತು ಆನೆ
ಅದು 2012, ಆಗಸ್ಟ್‌ 15. ಬಂಡೀಪುರ ಕಚೇರಿಯಲ್ಲಿ ಧ್ವಜಾರೋಹಣ ಮುಗಿಸಿ ಮರಳಹಳ್ಳದ ಅಟಿ ಪೋಚಿಂಗ್‌ ಕ್ಯಾಂಪ್‌ಗೆ ನಡೆದು ಹೋಗುತ್ತಿದ್ದೆವು. ನನ್ನೊಟ್ಟಿಗೆ ಇನ್ನೂ ನಾಲ್ವರು ಇದ್ದರು. ಹೈವೇಯಿಂದ 2 ಕಿ.ಮೀ. ಒಳಗಡೆಯ ಕಾಡಿನ ಹಾದಿಯನ್ನು ಎರಡು ಆನೆಗಳು ದಾಟಿ ಹೋಗುತ್ತಿದ್ದವು. ಬಳಿಕ ಇನ್ನೂ ಮೂರ್ನಾಲ್ಕು ಆನೆಗಳು ದಾಟಿ ಹೋದವು. ಹತ್ತು ನಿಮಿಷ ಕಾದ ನಾವು, ಹಿಂಡಿನಲ್ಲಿದ್ದ ಎಲ್ಲ ಆನೆಗಳೂ ಹೋದವು ಅಂತ ಭಾವಿಸಿ ರಸ್ತೆಯಲ್ಲಿ ಹೊರಟೆವು. ಅದೆಲ್ಲಿತ್ತೋ ಗೊತ್ತಿಲ್ಲ, ಪೊದೆಯ ಹಿಂದಿದ್ದ ಆನೆಯೊಂದು ಏಕಾಏಕಿ ನಮ್ಮನ್ನು ಅಟ್ಟಿಸಿಕೊಂಡು ಬಂತು. ಉಳಿದವರೆಲ್ಲ ದಿಕ್ಕಾಪಾಲಾದರು. ಆ ಆನೆ ನನ್ನತ್ತಲೇ ಬರತೊಡಗಿತು. ಜೀವವೇ ಕೈಗೆ ಬಂದಂತಾಯಿತು. ನೂರುಮೀಟರ್‌ನಷ್ಟು ಓಡಿದವಳೇ, ರಸ್ತೆ ಬದಿಯಲ್ಲಿದ್ದ ಸಣ್ಣ ಟ್ರಂಚ್‌ ಅನ್ನು ಜಿಗಿದುಬಿಟ್ಟೆ. ಆನೆಯೂ ಟ್ರಂಚ್‌ಗೆ ಇಳಿಯಿತು. ಮಳೆ ಬಂದು ಕೆಸರಾಗಿದ್ದರಿಂದ ಕಾಲು ಜಾರಿದಂತಾಗಿ ಆನೆ ಅಲ್ಲೇ ನಿಂತು ಬಿಟ್ಟಿತು. ಟ್ರಂಚ್‌ ದಾಟಿದ ನಾನು ಸ್ವಲ್ಪ ಎತ್ತರದ ಜಾಗದಲ್ಲಿ ನಿಂತೆ. ವಾಚರ್‌ಗಳು ಆಗ ತಮ್ಮಲ್ಲಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದರು. ಅಬ್ಟಾ! ಅಂತ ನಿಟ್ಟುಸಿರುಬಿಟ್ಟಿದ್ದೆ.

ಬೆನ್ನ ಹಿಂದೆ ಹುಲಿರಾಯ


ಇನ್ನೊಮ್ಮೆ, ಕಾಡುದಾರಿಯಲ್ಲಿ ಕುಳಿತು ಜಿಂಕೆಗಳ ಫೋಟೋ ತೆಗೆಯುತ್ತಿದ್ದೆ. ಹುಲಿಯೊಂದು ನನ್ನ ಬೆನ್ನ ಹಿಂದೆಯೇ ಬಂದು ನಿಂತಿರುವುದು ನನಗೆ ತಿಳಿಯಲೇ ಇಲ್ಲ. ಎದುರಿಗಿದ್ದ ಜಿಂಕೆಗಳು ಹುಲಿಯನ್ನು ಕಂಡು ಬೆಚ್ಚಿ ಬಿದ್ದು, ತಮ್ಮ ಗುಂಪಿಗೆ ಸುದ್ದಿ ರವಾನೆ ಮಾಡಿದವು. ಆಗ ಏನಾಯ್ತಪ್ಪಾ ಅಂತ ಹಿಂದೆ ತಿರುಗಿ ನೋಡಿದರೆ ಹುಲಿ! ಅದೇ ಸಮಯಕ್ಕೆ ಹುಲಿಯೂ ನನ್ನನ್ನು ನೋಡಿತು. ಇಬ್ಬರಿಗೂ ಗಾಬರಿ, ಭಯ! ಕ್ಯಾಮೆರಾ ಕೈಯಲ್ಲೇ ಇತ್ತಲ್ಲ, ಧೈರ್ಯ ಮಾಡಿ ಫೋಟೊ ಕ್ಲಿಕ್ಕಿಸಿದ್ದೇ ತಡ, ಹುಲಿ ಅಲ್ಲಿಂದ ಪರಾರಿ!

ಇವತ್ತು ನಾಡಿಗಿಂತ ಕಾಡೇ ಇಷ್ಟ
ನನ್ನ ಹುಟ್ಟೂರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಕಾನ್‌ಗೊಡು. ನಮ್ಮದು ಮಧ್ಯಮ ವರ್ಗದ ಸಾಧಾರಣ ಕುಟುಂಬ. ತಂದೆ ಕೃಷಿಕರು. ಕಾನ್‌ಗೊಡಿನಲ್ಲೇ 7ನೇ ತರಗತಿಯವರೆಗೆ ಓದಿದ ನಾನು, ಹೈಸ್ಕೂಲ್‌ಗೆ ಪಕ್ಕದ ಜಲವಳ್ಳಿಗೆ ಹೋಗಬೇಕಾಯ್ತು. ನಮ್ಮೂರಿನಿಂದ ಜಲವಳ್ಳಿಗೆ ನಾಲ್ಕು ಕಿ.ಮೀ. ದೂರ. ಪ್ರತಿ ದಿನ ಕಾಡ ಹಾದಿಯಲ್ಲಿ 8 ಕಿ.ಮೀ. ನಡೆಯುತ್ತಿದ್ದುದರಿಂದ ನನಗೆ ಕಾಡೆಂದರೆ ಮೊದಲಿನಿಂದಲೂ ಭಯ ಇರಲಿಲ್ಲ. ಈಗಂತೂ, ನಾಡಿಗಿಂತ ಕಾಡೇ ಹೆಚ್ಚು ಸುರಕ್ಷಿತ ಅಂತ ಅನ್ನಿಸುತ್ತದೆ. ನನಗೆ ಕಾಡಿನಲ್ಲಿ ನಿಕಾನ್‌ ಡಿ 5600 ಕ್ಯಾಮೆರಾವೇ ಸಂಗಾತಿ. ಹುಲಿ, ಚಿರತೆ, ಆನೆ, ಕರಡಿ, ಪಕ್ಷಿಗಳು, ಚಿಟ್ಟೆಗಳ ಫೋಟೋ ತೆಗೆಯುವುದು ಹವ್ಯಾಸ.

ನಿರೂಪಣೆ: ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next