Advertisement
ಅನಾಮಿಕಳಾಗಿದ್ದು ತಿರುಪೆ ಎತ್ತುತ್ತಾ ಹಾಡು ಹಾಡುತ್ತಾ ಹಣ ಸಂಗ್ರಹಿಸಿ ಬದುಕಿನ ಬಂಡಿ ಸಾಗಿಸುತ್ತಾ ಒಂದೇ ಒಂದು ಹಾಡಿನ ಮೂಲಕ ಬದುಕಿನ ಹಳಿಯನ್ನೇ ಬದಲಾಯಿಸಿ, ಈಗ ಖ್ಯಾತಿ ಗಳಿಸಿದ ಈಕೆಯ ಬಾಯಿಯಲ್ಲೇ ಕೇಳ್ಳೋದಾದರೆ; ರಾನಾಘಾಟ್‌ನ ಲತಾ ಎಂದೇ ಕರೆಯಲ್ಪಡುವ ಈಕೆ ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಜನಿಸಿದರು. ಬಾಲ್ಯವನ್ನು ತನ್ನ ಅತ್ತೆಯ ಜತೆ ಕಳೆದ ಈಕೆ ಯೌವನಕ್ಕೆ ತಲುಪುವ ವೇಳೆಗೆ ತಾಯಿಯನ್ನು ಕಳೆದುಕೊಳ್ಳಬೇಕಾಗಿ ಬಂತು. 19ನೆಯ ವಯಸ್ಸಿಗೆ ವಿವಾಹವಾಯಿತು. ಮದುವೆಯ ತರುವಾಯ ದಂಪತಿ ಮುಂಬಯಿಗೆ ತೆರಳಿದರು. ಒಂದು ದುರ್ದಿನದಲ್ಲಿ ಪತಿಯನ್ನು ಕಳೆದುಕೊಂಡು ರಾನಾಘಾಟ್‌ಗೆ ಬರಬೇಕಾಗಿ ಬಂತು. ಈಗ 50ರ ಹರೆಯದ ರಾನು ಮೊಂಡಲ್ ರಾನಾಘಾಟ್ ರೈಲು ನಿಲ್ದಾಣದಲ್ಲಿ ಹಾಡು ಹಾಡಿ ಭಿಕ್ಷೆ ಬೇಡಿ ಪ್ರಯಾಣಿಕರು ನೀಡಿದ ಹಣದಲ್ಲಿ ದಿನಕಳೆಯುತ್ತಿದ್ದರು. ತಲೆ ಮೇಲೊಂದು ಸೂರು ಕೂಡಾ ಇರಲಿಲ್ಲ.
ಆ ದಿನ ಜು.23ನೆಯ ತಾರೀಕು. ರಾನಾಘಾಟ್ ರೈಲು ನಿಲ್ದಾಣದಲ್ಲಿ ಅತೀಂದ್ರ ಚಕ್ರವರ್ತಿ ಎಂಬ 26 ವಯಸ್ಸಿನ ತರುಣ ಎಂಜಿನಿಯರ್ ಈಕೆಯನ್ನು ನೋಡಿ ಹಾಡುವುದನ್ನು ಕೇಳಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಕೆಲವೇ ದಿನಗಳಲ್ಲಿ ಈ ವಿಡಿಯೋ 25 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿತು. 50 ಸಾವಿರ ಲೈಕ್‌ಗಳು ದೊರೆತವು. ಈಕೆಯ ಕೋಮಲ ಧ್ವನಿಯನ್ನು ಜನ ಲತಾ ಮಂಗೇಶ್ಕರ್ ಅವರ ಧ್ವನಿಗೆ ಹೋಲಿಸಿ ಪ್ರಶಂಸಿಸತೊಡಗಿದರು. ಅಲ್ಲಿಂದ ಈಕೆಯ ಬದುಕಿನ ದಿಕ್ಕೇ ಬದಲಾಯಿತು. ಅತೀಂದ್ರ ಹೇಳುವ ಪ್ರಕಾರ;ಪ್ಲಾಟ್‌ಫಾರಂ ನಂ.6ರಲ್ಲಿ ನಾನು ಗೆಳೆಯರ ಜತೆ ಚಹಾ ಸೇವಿಸುತ್ತಿದ್ದೆ. ದೂರದಲ್ಲಿ ಮೊಹಮ್ಮದ್ ರಫಿಯ ಹಾಡನ್ನು ರೇಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರು. ಹಾಡು ಸಣ್ಣದಾಗುತ್ತಿದ್ದಂತೆಯೇ ಪ್ಲಾಟ್‌ಫಾರಂನಲ್ಲಿ ನೆಲದಲ್ಲಿ ಕುಳಿತ ಮಹಿಳೆಯೊಬ್ಬರು ಅದೇ ಹಾಡನ್ನು ಧ್ವನಿಸುತ್ತಿದ್ದುದು ಕೇಳಿತು. ನಾನು ಆಕೆಯ ಬಳಿ ನಮಗಾಗಿ ಒಂದು ಹಾಡು ಹಾಡಬಹುದೇ ಎಂದು ಕೇಳಿದೆ. ಆಕೆ ಅತ್ಯಂತ ಮಾಧುರ್ಯದಿಂದ ಹಾಡಿದ ಹಾಡನ್ನೇ ನಾನು ಮೊಬೈಲ್‌ನಲ್ಲಿ ಚಿತ್ರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟೆ.
Related Articles
ಜಾಲತಾಣದಲ್ಲಿ ಜನಪ್ರಿಯರಾಗುತ್ತಿದ್ದ ರಾನು ಅವರನ್ನು ಗುರುತಿಸಿದ ಸೋನಿ ಟಿವಿ ತನ್ನ ಸುಪರ್‌ಸ್ಟಾರ್ ಸಿಂಗರ್ ರಿಯಾಲಿಟಿ ಶೋಗೆ ಕರೆಸಿ ಹಾಡಿಸಿತು. ಕಾರ್ಯಕ್ರಮ ಪ್ರಸಾರವಾಗುವ ಟೀಸರ್‌ನ್ನು ಪ್ರಸಾರ ಮಾಡತೊಡಗಿತು. ಅದೇ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಹಿಮೇಶ್ ರೇಷಮಿಯಾ ಅವರು ಈಕೆಗೆ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟರು. ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಅವರು ಹೇಳಿದ ಮಾತನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರೆ. ನಾವು ಒಂದು ಪ್ರಭಾವರ್ತುಲದಲ್ಲಿ ಮುನ್ನ°ಲೆಗೆ ಬಂದ ಬಳಿಕ ಪ್ರತಿಭೆಯುಳ್ಳ ಇನ್ನೊಂದು ವ್ಯಕ್ತಿಗೆ ಅವಕಾಶ ನೀಡಲು ಮರೆಯಬಾರದು ಎಂದು. ಈಕೆಗೆ ದೇವರು ನೀಡಿದ ಅದ್ಭುತ ಸ್ವರ ಇದೆ. ಅವಕಾಶ ಮಾತ್ರ ದೊರೆತಿರಲಿಲ್ಲ. ಈಗ ನನ್ನ ಸಿನಿಮಾದಲ್ಲಿ ಹಾಡುವ ಮೂಲಕ ಈಕೆಯ ಧ್ವನಿ ಸೌಂದರ್ಯ ಎಲ್ಲರಿಗೂ ತಲುಪಲಿದೆ. ಈಕೆಗೆ ಒಳ್ಳೆಯದು ಮಾಡು ಎಂದು ದೇವರಲ್ಲಿ ಪ್ರಾರ್ಥಿಸುವುದರ ಹೊರತಾಗಿ ಬೇರೇನೂ ನನಗೆ ತೋಚಲಿಲ್ಲ . ಬಾಲಿವುಡ್‌ನಲ್ಲಿ ಈಕೆಯ ಬೆಳವಣಿಗೆಯನ್ನು ಇನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎನ್ನುತ್ತಾರೆ ರೇಷಮಿಯಾ.
Advertisement
ಈಗ…ಸೋಷಿಯಲ್ ಮೀಡಿಯಾದಲ್ಲಿ ಈಕೆ ಪ್ರಸಿದ್ಧಿ ಪಡೆದ ಬಳಿಕ ಒಂದು ಸ್ವಯಂ ಸೇವಾ ಸಂಸ್ಥೆ ಈಕೆಯ ಬಾಳಿಗೆ ನೆರವಾಗಲು ಮುಂದೆ ಬಂದಿದೆ. ಹಿಮೇಶ್ ಅವರು 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ. ಈ ಮೊತ್ತವನ್ನು ರಾನು ವಿನಯದಿಂದ ನಿರಾಕರಿಸಿದ್ದರು. ಆದರೆ ಹಿಮೇಶ್ ಅವರು ಒತ್ತಾಯಪೂರ್ವಕವಾಗಿ ನೀಡಿದ್ದಾರೆ. ಸಲ್ಮಾನ್ ಖಾನ್ 55 ಲಕ್ಷ ರೂ.ಗಳ ಮನೆ ನೀಡುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅಷ್ಟೇ ಅಲ್ಲ 10 ವರ್ಷಗಳಿಂದ ಈಕೆಯಿಂದ ದೂರವಾಗಿದ್ದ ಈಕೆಯ ಪುತ್ರಿ ಸೋಷಿಯಲ್ ಮೀಡಿಯಾದಲ್ಲಿ ಈಕೆಯನ್ನು ಗುರುತಿಸಿ ಜತೆಯಾಗಿದ್ದಾರೆ. -ಲಕ್ಷ್ಮೀ ಮಚ್ಚಿನ