Advertisement

ವಿಜಯನಗರದಲ್ಲಿ ಸಿಂಗ್‌ ಈಸ್‌ ಕಿಂಗ್‌

09:50 PM Dec 09, 2019 | Team Udayavani |

ಬಳ್ಳಾರಿ: ವಿಜಯನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್‌ ಮತ್ತೂಮ್ಮೆ ವಿಜಯ ಪತಾಕೆ ಹಾರಿಸಿದ್ದು, 30125 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುನ್ನುಡಿ ಬರೆದಿದ್ದ ಆನಂದ್‌ಸಿಂಗ್‌, ಸಿಎಂ ಯಡಿಯೂರಪ್ಪ ಅವರಿಗೆ ಗೆಲುವಿನ ಉಡುಗೊರೆ ನೀಡಿದ್ದಾರೆ.

Advertisement

2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೇವಲ 8228 ಮತಗಳ ಅಂತರದಿಂದ ಜಯ ಗಳಿಸಿದ್ದ ಆನಂದ್‌ಸಿಂಗ್‌ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರೂ, ವಿರೋಧದ ಅಲೆ ಮುಂದುವರೆಯಲಿದೆ ಎಂಬ ರಾಜಕೀಯ ಮುಖಂಡರ ಮಾತುಗಳಿಗೆ ದಾಖಲೆ ಗೆಲುವಿನ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಿಂದಾಗಿ ಕ್ಷೇತ್ರದಲ್ಲಿ ಹಿಡಿತ ತಪ್ಪಿದ್ದ ಸಿಂಗ್‌ಗೆ ಉಪಚುನಾವಣೆ ದಾಖಲೆ ಗೆಲುವಿನಿಂದ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮತ್ತೂಮ್ಮೆ ಸಾಬೀತು ಪಡಿಸಿದ್ದಾರೆ.

ಪುನಃ ಬಿಜೆಪಿ ಭದ್ರಕೋಟೆ: ದಶಕಗಳ ಹಿಂದೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ವಿಜಯನಗರ ಕ್ಷೇತ್ರ 2008ರಲ್ಲಿ ಆನಂದ್‌ ಸಿಂಗ್‌ ಗೆಲುವಿನಿಂದಾಗಿ ಬಿಜೆಪಿ ಭದ್ರಕೋಟೆಯಾಯಿತು. 2008, 2013ರಲ್ಲಿ ಎರಡು ಬಾರಿ ಸತತ ಬಿಜೆಪಿಯಿಂದ ಭರ್ಜರಿ ಜಯ ಗಳಿಸಿದ್ದ ಆನಂದ್‌ ಸಿಂಗ್‌, ಕಳೆದ ವರ್ಷ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಜಯ ಗಳಿಸಿದರಾದರೂ ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಅಂತರ ಕಡಿಮೆ ಎನಿಸಿದ್ದು, ಆನಂದ್‌ಸಿಂಗ್‌ಗೆ ಬಿಸಿ ಮುಟ್ಟಿದ್ದನ್ನು ಅಲ್ಲಗಳೆಯುವಂತಿಲ್ಲ. ಇದರಿಂದ ಕ್ಷೇತ್ರದಲ್ಲೂ ಹಿಡಿತ “ಕೈ’ ತಪ್ಪಿದ್ದ ಆನಂದ್‌ ಸಿಂಗ್‌ಗೆ ಉಪ ಚುನಾವಣೆ ದಾಖಲೆ ಗೆಲುವಿನಿಂದ ವಿಜಯನಗರ ಕ್ಷೇತ್ರವನ್ನು ಪುನಃ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಲ್ಕು ಬಾರಿ ಗೆಲುವು: ಕಾಂಗ್ರೆಸ್‌ನ ವೆಂಕಟರಾವ್‌ ಘೋರ್ಪಡೆ ವಿರುದ್ಧ 30125 ಮತಗಳ ಅಂತರದಿಂದ ದಾಖಲೆ ಗೆಲುವು ಸಾಧಿ ಸಿದ್ದಾರೆ. ವಿಜಯನಗರ ಕ್ಷೇತ್ರದ ಮಟ್ಟಿಗೆ ಎರಡು ಸಲಕ್ಕಿಂತಲೂ ಹೆಚ್ಚು ಗೆದ್ದವರಿಲ್ಲ. ಈ ಹಿಂದೆ ಮಾಜಿ ಶಾಸಕ ದಿ.ಶಂಕರಗೌಡ ಅವರು ಎರಡು ಸಲ ಜಯಗಳಿಸಿದ್ದರು. ಮೂರನೇ ಬಾರಿಗೆ ಯಾರಿಗೂ ಕ್ಷೇತ್ರದ ಮತದಾರರು ಮನ್ನಣೆ ನೀಡಿರಲಿಲ್ಲ. ಆದರೆ, ಆನಂದ್‌ ಸಿಂಗ್‌ ಸತತವಾಗಿ ನಾಲ್ಕು ಬಾರಿ ಜಯ ಗಳಿಸಿದ ಏಕೈಕ ಶಾಸಕರಾಗಿದ್ದಾರೆ.

ಗೆದ್ದವರು
ಆನಂದ್‌ ಸಿಂಗ್‌ (ಬಿಜೆಪಿ)
ಪಡೆದ ಮತ: 85477
ಗೆಲುವಿನ ಅಂತರ‌: 30125

Advertisement

ಸೋತವರು
ವೆಂಕಟರಾವ್‌ ಘೋರ್ಪಡೆ(ಕಾಂಗ್ರೆಸ್‌)
ಮತ: 55352

ಕವಿರಾಜ ಅರಸ್‌ (ಪಕ್ಷೇತರ)
ಪಡೆದ ಮತ: 3950

ಗೆದ್ದದ್ದು ಹೇಗೆ?
-ಆನಂದ್‌ಸಿಂಗ್‌ ಮೂಲತಃ ಸ್ಥಳೀಯರಾಗಿದ್ದು, ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿರುವುದೇ ಆಗಿದೆ.

-ಕ್ಷೇತ್ರದ ಜನರ ನಾಡಿಮಿಡಿತ ಅರಿತಿರುವ ಆನಂದ್‌ ಸಿಂಗ್‌ ಪ್ರಚಾರ ಕಾರ್ಯದ ವೇಳೆ ಜನರ ಬಳಿ ತೆರಳಿ ಅನ್ಯೋನ್ಯವಾಗಿ ಬೆರೆತಿದ್ದು.

-ತನ್ನದೇ ಆದ ಯುವ ಕಾರ್ಯಕರ್ತರ ಪಡೆ ಹೊಂದಿರುವುದು

ಸೋತದ್ದು ಹೇಗೆ?
-ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಮೂಲತಃ ಸ್ಥಳೀಯರಲ್ಲ.

-ರಾಜಕೀಯವಾಗಿ ಪರಿಚಿತರೆನಿಸಿದರೂ ಕ್ಷೇತ್ರದ ಮತದಾರರಿಗೆ ಅವರು ಅಪರಿಚಿತರು.

-ಕಾಂಗ್ರೆಸ್‌ನ‌ಲ್ಲಿ ಒಗ್ಗಟ್ಟಿನ ಕೊರತೆ, ಸಂಘಟಿತ ಪ್ರಚಾರ ಮಾಡದೇ ಇರುವುದು.

ಕ್ಷೇತ್ರದ ಮತದಾರರಿಗೆ ನನ್ನ ಅಭಿನಂದನೆ. ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಒಂದೊಮ್ಮೆ ವಿಜಯನಗರ ಜಿಲ್ಲೆ ಆಗದಿದ್ದರೆ ಮತ್ತೆ ರಾಜೀನಾಮೆಗೆ ಸಿದ್ಧ.
-ಆನಂದಸಿಂಗ್‌, ಬಿಜೆಪಿ ವಿಜೇತ ಅಭ್ಯರ್ಥಿ

55 ಸಾವಿರಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಅಭಿನಂದನೆ. ಈಗ ಬಿಜೆಪಿ ಟ್ರೆಂಡ್‌ ಇದೆ. ಪದೇ ಪದೇ ಉಪ ಚುನಾವಣೆ ನಡೆಯಬಾರದೆಂದು ಜನ ಈ ಫಲಿತಾಂಶ ನೀಡಿದ್ದಾರೆ.
-ವೆಂಕಟರಾವ್‌ ಘೋರ್ಪಡೆ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next