Advertisement

ಸಿಂಗ್‌ ರಾಜ್ಯಸಭೆ ಸದಸ್ಯತ್ವ ಮುಕ್ತಾಯ

08:06 AM Jun 16, 2019 | Team Udayavani |

ಹೊಸದಿಲ್ಲಿ: 30 ವರ್ಷಗಳಿಂದಲೂ ರಾಜ್ಯಸಭೆ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಸದಸ್ಯತ್ವ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡಿದೆ. ಇದರಿಂದ ಬಜೆಟ್ ಅಧಿವೇಶನದಲ್ಲಿ ಅವರ ಅನುಪಸ್ಥಿತಿ ಕಾಡಲಿದೆ. 30 ವರ್ಷದಲ್ಲೇ ಇದೇ ಮೊದಲ ಬಾರಿಗೆ ಸಿಂಗ್‌ಗೆ ಬಜೆಟ್ ಅಧಿವೇಶನದಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದು ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯನ್ನು ಉಂಟು ಮಾಡಲಿದೆ. 1991ರಲ್ಲಿ ಅಸ್ಸಾಂನಿಂದ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಆ ವರ್ಷವನ್ನು ಭಾರತದ ಆರ್ಥಿಕತೆಯಲ್ಲಿ ಸಿಂಗ್‌ ಕೊಡುಗೆಯ ಮಹತ್ವದ ವರ್ಷ ಎಂದೂ ಪರಿಗಣಿಸಲಾಗಿದೆ. ಅದೇ ವರ್ಷ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ನೀತಿಯನ್ನು ಸಿಂಗ್‌ ರೂಪಿಸಿದ್ದರು.

Advertisement

ಕಳೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿದ್ದರಿಂದ, ಸಿಂಗ್‌ರನ್ನು ಮರು ಆಯ್ಕೆ ಮಾಡಲು ಕಾಂಗ್ರೆಸ್‌ ಸಾಕಷ್ಟು ಮತವನ್ನು ಹೊಂದಿಲ್ಲ. ಅಸ್ಸಾಂನಿಂದ ಸಿಂಗ್‌ರನ್ನು ಆಯ್ಕೆ ಮಾಡಲು ಕಾಂಗ್ರೆಸ್‌ಗೆ 43 ಮತಗಳು ಬೇಕು. ಆದರೆ ಪಕ್ಷ ಕೇವಲ 25 ಶಾಸಕರನ್ನು ಹೊಂದಿದೆ. ಎಐಯುಡಿಎಫ್ ಬೆಂಬಲ ನೀಡಿದರೂ 5 ಮತಗಳ ಕೊರತೆ ಎದುರಾಗಲಿದೆ. ಇನ್ನು ಇತರ ರಾಜ್ಯಗಳಲ್ಲೂ ತಕ್ಷಣಕ್ಕೆ ಯಾವುದೇ ಖಾಲಿ ಸ್ಥಾನವಿಲ್ಲ.

ಮಾಜಿ ಪ್ರಧಾನಿಗಳೇ ಇಲ್ಲದ ಸಂಸತ್‌ ಅಧಿವೇಶನ: ಕಳೆದ ಬಾರಿ ಅಧಿವೇಶನದಲ್ಲಿ ಇಬ್ಬರು ಮಾಜಿ ಪ್ರಧಾನಿಗಳ ಉಪಸ್ಥಿತಿ ಇರುತ್ತಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಂಗ್‌ ಅಧಿವೇಶನ ದಲ್ಲಿ ಹಾಜರಿರುತ್ತಿದ್ದರು. ಆದರೆ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಿ ಸೋತಿದ್ದರಿಂದ ಲೋಕ ಸಭೆಯಿಂದ ಹೊರಗುಳಿದರೆ, ಸಿಂಗ್‌ ಸದಸ್ಯತ್ವ ಮುಕ್ತಾಯವಾಗಿದೆ. ಹೀಗಾಗಿ ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಮಾಜಿ ಪ್ರಧಾನಿಗಳೂ ಹಾಜರಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next