Advertisement

ಸಿಂಗೇರದೊಡ್ಡಿ : ಮತದಾನ ಬಹಿಷ್ಕಾರಕ್ಕೆ ನಿರ್ಧಾರ

05:25 PM Apr 20, 2018 | Team Udayavani |

ದೇವದುರ್ಗ: ಪ್ರತಿ ಸಾರಿ ಚುನಾವಣೆ ಬಂದಾಗ ಮತಗಟ್ಟೆ ಸ್ಥಾಪಿಸುವುದಾಗಿ ಹೇಳುವ ಅಧಿಕಾರಿಗಳ ಹುಸಿ ಭರವಸೆಗೆ ಬೇಸತ್ತ ಕ್ಯಾದಿಗೇರಾ ಗ್ರಾಪಂ ವ್ಯಾಪ್ತಿಯ ಸಿಂಗೇರದೊಡ್ಡಿ ಗ್ರಾಮಸ್ಥರು ಈ ಬಾರಿಯೂ ತಮ್ಮ ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸದಿರುವುದಕ್ಕೆ ಆಕ್ರೋಶ ಹೊರಹಾಕಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

Advertisement

ಕ್ಯಾದಿಗೇರಾ ಗ್ರಾಪಂ ವ್ಯಾಪ್ತಿಯ ಸಿಂಗೇರದೊಡ್ಡಿಯಲ್ಲಿ 380 ಜನ ಮತದಾರರಿದ್ದಾರೆ. ಇಲ್ಲಿ ನಾಲ್ವರು ಗ್ರಾಪಂ ಸದಸ್ಯರಿದ್ದಾರೆ. ಗ್ರಾಮ ಪಂಚಾಯತಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಸಿಂಗೇರದೊಡ್ಡಿ ಗ್ರಾಮಸ್ಥರು 7 ಕಿ.ಮೀ. ಅಂತರದ ಕುರ್ಲೇರದೊಡ್ಡಿ ಗ್ರಾಮದಲ್ಲಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕಿದೆ. ಕುರ್ಲೇರದೊಡ್ಡಿಗೆ ಹೋಗಲು ಸಮರ್ಪಕ ರಸ್ತೆ, ವಾಹನ ಸೌಲಭ್ಯವಿಲ್ಲ. ಸೌಲಭ್ಯ ಕೊರತೆ ಮಧ್ಯೆ ಮತದಾನ ಕೇಂದ್ರಕ್ಕೆ ತೆರಳಲು ಪರದಾಡಬೇಕಿದೆ.

ಸಿಂಗೇರದೊಡ್ಡಿಯಲ್ಲೇ ಮತಗಟ್ಟೆ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಗ್ರಾಮಸ್ಥರು ತಹಶೀಲ್ದಾರ್‌ ಸೇರಿ ವಿವಿಧ ಹಂತದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ತಾಲೂಕು ಆಡಳಿತ ಮತಗಟ್ಟೆ ಸ್ಥಾಪನೆಗೆ ನಿರ್ಲಕ್ಷé ವಹಿಸಿದೆ. ಹೀಗಾಗಿ ಮೇ 12ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥ ಶೇಖರಪ್ಪ ತಿಳಿಸಿದ್ದಾರೆ.

ಹುಸಿಯಾದ ಭರವಸೆ: ಸಿಂರ್ಗೇದೊಡ್ಡಿ ಗ್ರಾಮ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿನ ಗ್ರಾಮಸ್ಥರು 7 ಕಿ.ಮೀ. ಅಂತರದ ಕುರ್ಲೇರದೊಡ್ಡಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತ ಬಂದಿದ್ದಾರೆ. ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನದಿಂದ ದೂರವಿದ್ದರು. ಆಗ ತಹಶೀಲ್ದಾರ್‌ ಆಗಿದ್ದ ಶಿವಾನಂದ ಸಾಗರ, ಸಿಪಿಐ ದೌಲತ್‌ ಎನ್‌.ಕುರಿ ಮುಂದಿನ ಚುನಾವಣೆ ವೇಳೆಯಲ್ಲಿ ಸಿಂಗೇರದೊಡ್ಡಿ ಗ್ರಾಮದಲ್ಲೇ ಮತಗಟ್ಟೆ ಸ್ಥಾಪಿಸುವುದಾಗಿ ಭರವಸೆ ನೀಡಿ ಮನವೊಲಿಸಿದ್ದರು. ಆದರೆ ಅವರ ವರ್ಗಾವಣೆ ನಂತರ ಈ ವಿಷಯ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಚುನಾವಣೆಗಳು ಬಂದಾಗೊಮ್ಮೆ ಮತಗಟ್ಟೆ ಸ್ಥಾಪಿಸುವ ಭರವಸೆ ನೀಡುವ ಅಧಿಕಾರಿಗಳು ನಂತರದ ದಿನಗಳಲ್ಲಿ ನಿರ್ಲಕ್ಷ್ಯತನ ಮುಂದುವರಿಸುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರದಾಟ: 7 ಕಿ.ಮೀ. ಅಂತರದ ಕುರ್ಲೇರದೊಡ್ಡಿ ಗ್ರಾಮದ ಮತಗಟ್ಟೆ ತಲುಪುವವರೆಗೆ ರಸ್ತೆ ಮಧ್ಯೆ ಕುಡಿಯುವ ನೀರು ಸೇರಿ ಯಾವುದೇ ರೀತಿಯ ಅಗತ್ಯ ಸೌಲಭ್ಯಗಳಿಲ್ಲ. ಹದಗೆಟ್ಟ ರಸ್ತೆಯಲ್ಲಿ ಹೇಗೋ ಕಷ್ಟಪಟ್ಟು ಹೋಗಿ ಯುವಕರು ಮತ ಚಲಾಯಿಸುತ್ತೇವೆ. ಆದರೆ ವೃದ್ಧರು,, ಗರ್ಭೀಣಿಯರು, ವಿಕಲಾಂಗರು ಅಲ್ಲಿಗೆ ಹೋಗಿ ಮತ ಚಲಾಯಿಸುವುದು ಕಷ್ಟಕರವಾಗುತ್ತದೆ. ಈ ಬಾರಿ ಬೇಸಿಗೆಯಲ್ಲೇ ಚುನಾವಣೆ ನಡೆಯುತ್ತಿದ್ದು, ಬಿಸಿಲಿನ ತಾಪಮಾನವೂ ಹೆಚ್ಚಿದೆ. ಬಿಸಿಲಲ್ಲೇ ಹೋಗಿ ಮತ ಚಲಾಯಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ನಮ್ಮ ಹಕ್ಕು ಚಲಾವಣೆಗೆ ಇಷ್ಟೊಂದು ಸಂಕಷ್ಟ ಎದುರಿಸಬೇಕಾ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

Advertisement

ಸಿಂಗೇರದೊಡ್ಡಿಯಲ್ಲಿ 380 ಮತದಾರರು ಇದ್ದಾರೆ. 7ಕಿ.ಮೀ. ಅಂತರದ ಕುರ್ಲೇರದೊಡ್ಡಿಗೆ ನಡೆದುಕೊಂಡು ಹೋಗಿ ಮತದಾನ ಮಾಡಬೇಕಾಗಿದೆ. ಸಿಂಗೇರದೊಡ್ಡಿಯಲ್ಲೇ ಮತಗಟ್ಟೆ ಸ್ಥಾಪನೆ ಮಾಡುವುದಾಗಿ ಹಿಂದಿನ ಅಧಿಕಾರಿಗಳು ನೀಡಿದ ಭವರಸೆ ಈಡೇರಿಲ್ಲ. ಈ ಬಾರಿ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ.  ಪಂಪಣ್ಣ, ಸಿಂಗೇರದೊಡ್ಡಿ ಗ್ರಾಮಸ್ಥ 300ಕ್ಕೂ ಹೆಚ್ಚು ಮತದಾರರು ಇದ್ದರೆ ಮತಗಟ್ಟೆ ಸ್ಥಾಪಿಸಲು ಅವಕಾಶವಿದೆ. ಕಡಿಮೆ ಇರುವ ಕಾರಣಕ್ಕೆ ಆಗಿಲ್ಲ. ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುತ್ತಾರೆ ಎಂಬುದು ಗಮನಕ್ಕೆ ಬಂದಿದೆ.  
ಮಹ್ಮದ್‌ ಇರ್ಫಾನ್‌, ಚುನಾವಣಾಧಿಕಾರಿ 

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next