ಚಂಡೀಗಢ್: ಗ್ಯಾಂಗ್ ಸ್ಟರ್ ಗಳ ಗುಂಡೇಟಿಗೆ ಬಲಿಯಾಗಿದ್ದ ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅಂತ್ಯಕ್ರಿಯೆ ಮಂಗಳವಾರ (ಮೇ 31) ಬಿಗಿ ಭದ್ರತೆಯಲ್ಲಿ ಹುಟ್ಟೂರಾದ ಜವಾಹರ್ಕೆಯಲ್ಲಿ ನೆರವೇರಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಮಳೆ ಹಾನಿ ಪರಿಹಾರ: 10 ಸಾವಿರ ರೂ. ಭರವಸೆ ಕೊಟ್ಟು, 1 ರೂ. ಪರಿಹಾರ ಹಾಕಿದ ಬಿಬಿಎಂಪಿ
ಸಾವಿರಾರು ಮಂದಿ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದರು. 28 ವರ್ಷದ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಭಾನುವಾರ ಪಂಜಾಬ್ ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಟ್ಟು ಹತ್ಯೆಗೈಯಲಾಗಿತ್ತು.
ಅಂತ್ಯಕ್ರಿಯೆ ನಡೆಯುವ ಮುನ್ನ ನೆರೆದಿದ್ದ ಸಾವಿರಾರು ಅಭಿಮಾನಿಗಳು, ಗ್ರಾಮಸ್ಥರು ಮೂಸೆವಾಲಾ ಅವರ ಹಾಡನ್ನು ಘೋಷಣೆ ಕೂಗಿ, ಗೌರವ ಸಲ್ಲಿಸಿರುವುದಾಗಿ ವರದಿ ವಿವರಿಸಿದೆ. ಮೂಸೆವಾಲಾ ಅವರ ಸ್ವಂತ ಕೃಷಿ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿರುವುದಾಗಿ ವರದಿ ಹೇಳಿದೆ.
ಪಂಜಾಬ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೂಸೆವಾಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮಾನ್ ನೇತೃತ್ವದ ಆಪ್ ಸರ್ಕಾರ ಮೂಸೆವಾಲಾ ಸೇರಿದಂತೆ ನೂರಾರು ಗಣ್ಯರ ಭದ್ರತೆಯನ್ನು ಹಿಂಪಡಿದ್ದು, ಈ ಘಟನೆ ಬೆನ್ನಲ್ಲೇ ಮೂಸೆವಾಲ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಮೂಸೆವಾಲಾ ದೇಹದೊಳಗೆ ಸುಮಾರು 30 ಗುಂಡುಗಳು ಹೊಕ್ಕಿರುವುದಾಗಿ ವರದಿ ತಿಳಿಸಿದೆ.
400ಕ್ಕೂ ಅಧಿಕ ಮಂದಿ ಗಣ್ಯರ ಭದ್ರತೆಯನ್ನು ಯಾವ ಆಧಾರದ ಮೇಲೆ ವಾಪಸ್ ಪಡೆದಿರುವುದು ಯಾವ ಕಾರಣಕ್ಕೆ ಎಂಬ ಬಗ್ಗೆ ವಿವರಣೆ ನೀಡುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪಂಜಾಬ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ಬಿಷ್ಣೋಯಿ ಗ್ಯಾಂಗ್ ಜತೆ ಶಾಮೀಲಾಗಿದ್ದ ಶಂಕಿತ ಪ್ರಮುಖ ಆರೋಪಿಯನ್ನು ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಸೋಮವಾರ ಜಂಟಿ ಕಾರ್ಯಾಚರಣೆಯಲ್ಲಿ (ಮೇ 30) ಬಂಧಿಸಲಾಗಿತ್ತು. ಪ್ರಮುಖ ಶಂಕಿತ ಆರೋಪಿ ಹಾಗೂ ಇತರ ಐವರನ್ನು ಬಂಧಿಸಲಾಗಿದ್ದು, ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿ ಹೇಳಿದೆ.