ಸಂಗೀತ ನಿರ್ದೇಶಕರು ಗಾಯಕರಾಗಿದ್ದಾರೆ. ಗಾಯಕರು ಸಂಗೀತ ನಿರ್ದೇಶಕರೂ ಆಗಿದ್ದಾರೆ. ಈಗ ಆ ಸಾಲಿಗೆ ಗಾಯಕ ಹೇಮಂತ್ ಹೊಸ ಸೇರ್ಪಡೆ. ಹೌದು, ಹೇಮಂತ್ ಇದುವರೆಗೆ ನೂರಾರು ಹಾಡುಗಳನ್ನು ಹಾಡಿರುವ ಹೇಮಂತ್ ಅಂದಾಕ್ಷಣ ಥಟ್ಟನೆ ನೆನಪಾಗೋದೇ “ಪ್ರೀತ್ಸೆ ಪ್ರೀತ್ಸೆ..’ ಹಾಡು. ಆ ಹಾಡು ಸೂಪರ್ ಹಿಟ್ ಆಗುತ್ತಿದ್ದಂತೆಯೇ, ಹೇಮಂತ್ ಅವರನ್ನು ಹುಡುಕಿ ಬಂದ ಹಾಡುಗಳಿಗೆ ಲೆಕ್ಕವಿಲ್ಲ.
ಆ ಬಳಿಕೆ ಹೇಮಂತ್ ಅದೆಷ್ಟೋ ಜನಪ್ರಿಯ ಹಾಡುಗಳಿಗೆ ಧ್ವನಿಯಾದರು. “ಕುರಿಗಳು ಸಾರ್ ಕುರಿಗಳು’ ಚಿತ್ರದಲ್ಲಿ “ನಿದಿರೆ ಬರದಿರೆ ಏನಂತೀ…’, “ಕುಟುಂಬ’ ಚಿತ್ರದ “ನೀ ನನ್ ಅಪ್ಪಿಕೊಳ್ಳಲ್ವಾ..’, “ದುನಿಯಾ’ ಚಿತ್ರದ “ಪ್ರೀತಿ ಮಾಯೆ ಹುಷಾರು…’ , “ಇಂತಿ ನಿನ್ನ ಪ್ರೀತಿಯ’ ಚಿತ್ರದ “ಓ ಕನಸ ಜೋಕಾಲಿ …’ ಹಾಡುಗಳು ಇಂದಿಗೂ ಗುನುಗುವಂತಿವೆ. ಅದಲ್ಲದೆ ಸಾಕಷ್ಟು ಸ್ಟಾರ್ ನಟರ ಚಿತ್ರಗಳಿಗೆ ಹೇಮಂತ್ ಹಾಡಿದ್ದಾರೆ.
ಹಿನ್ನೆಲೆ ಗಾಯನಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದ ಅವರೀಗ, ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿದ್ದಾರೆ. “ಕರ್ಷಣಂ’ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ ಹೇಮಂತ್. ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಅವರು ಗೀತೆಗಳನ್ನು ರಚಿಸಿದ್ದಾರೆ. ಅಂದಹಾಗೆ, ಈ ಚಿತ್ರವನ್ನು “ಮಹಾಭಾರತ’ ಧಾರಾವಾಹಿ ಖ್ಯಾತಿಯ ಶರವಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಧನಂಜಯ ಅತ್ರೆ ಈ ಚಿತ್ರದ ನಿರ್ಮಾಣದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ನಾಯಕರಾಗಿ ಇದು ಇವರ ಮೊದಲ ಚಿತ್ರ. ಕಿರುತೆರೆಯಲ್ಲಿ ನಟರಾಗಿ ಗುರುತಿಸಿಕೊಂಡಿರುವ ಧನಂಜಯ್ ಅತ್ರೆ, “ಚಿತ್ರಲೇಖ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದ ಧನಂಜಯ್ ಅತ್ರೆಗೆ “ಕರ್ಷಣಂ’ ಮೊದಲ ಚಿತ್ರ.
ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇತ್ತೀಚೆಗೆ, ಸ್ಲಂ ಒಂದರಲ್ಲಿ “ಹೊಂಬಾಳೆ ಕಟ್ಟು ಗುರು, ಚಪ್ಪಾಳೆ ತಟ್ಟು ಗುರು…’ ಎಂಬ ನಾಯಕನ ಪರಿಚಯಿಸುವ ಹಾಡಿನೊಂದಿಗೆ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಅಂದಹಾಗೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ.
ಚಿತ್ರಕ್ಕೆ ಮೋಹನ್ ಎಂ.ಮುಗುಡೇಶ್ವರ ಛಾಯಾಗ್ರಹಣ, ಹೇಮಂತ್ ಸಂಗೀತ ನಿರ್ದೇಶನ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಗಿರೀಶ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ವಸಂತರಾವ್ ಕುಲಕರ್ಣಿ ಕಲಾನಿರ್ದೇಶನವಿದೆ. ಧನಂಜಯ ಅತ್ರೆ, ಅನೂಷಾರೈ, ಶ್ರೀನಿವಾಸ ಮೂರ್ತಿ, ಮನಮೋಹನ್ ರೈ, ವಿಜಯ ಚಂಡೂರು, ಗೌತಮ್ ರಾಜ್, ಯಮುನಾ ಶ್ರೀನಿಧಿ ಇನ್ನು ಮುಂತಾದವರ ತಾರಾಬಳಗವಿದೆ.