Advertisement

ಗಾಯಕ, ಸಂಗೀತ ನಿರ್ದೇಶಕ ಎಲ್‌.ಎನ್‌.ಶಾಸ್ತ್ರಿ ನಿಧನ

10:05 AM Aug 31, 2017 | |

ಬೆಂಗಳೂರು: ಕೆಲವು ತಿಂಗಳಿಂದ ಕರಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ಗಾಯಕ- ಸಂಗೀತ ನಿರ್ದೇಶಕ ಎಲ್‌.ಎನ್‌. ಶಾಸ್ತ್ರಿ (46) ಅವರು ಬುಧವಾರ ಮಧ್ಯಾಹ್ನ ಕೊನೆಯು ಸಿರೆಳೆದಿದ್ದಾರೆ. ಅವರು ಪತ್ನಿ ಹಾಗೂ ಗಾಯಕಿ ಸುಮಾ ಶಾಸ್ತ್ರಿ ಮತ್ತು ಮಗಳನ್ನು ಅಗಲಿದ್ದಾರೆ.

Advertisement

ನಗರದ ಎಚ್‌ಸಿಜಿ, ಜೈನ್‌ ಆಸ್ಪತ್ರೆ ಸೇರಿದಂತೆ ಹಲವು ಕಡೆ ಚಿಕಿತ್ಸೆ ಪಡೆದ ಅವರು, ಇತ್ತೀಚೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಇತ್ತೀಚಿನ ದಿನಗಳಲ್ಲಿ ಹದಗೆಟ್ಟಿದ್ದು, ಅವರ ನೆರವಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ನಟ ಜಗ್ಗೇಶ್‌ ಸೇರಿದಂತೆ ಹಲವರು ಮುಂದಾಗಿದ್ದರು. ಒಂದೆರೆಡು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು, ಬುಧವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಅವರ ಗೆಳೆಯರಾದ ರವಿಶಂಕರ್‌ಗೌಡ, ಕಾರ್ತಿಕ್‌, ಹೇಮಂತ್‌, ನಂದಿತಾ, ಸುಮಿತ್ರಾ, ಎಂ.ಡಿ.ಶ್ರೀಧರ್‌, ವಿ.ಮನೋಹರ್‌ ಸೇರಿದಂತೆ ಹಲವರು ಆಗಮಿಸಿ, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.  ಮೃತರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಚಾಮರಾಜಪೇಟೆಯ ವಿದ್ಯುತ್‌ ಚಿತಾಗಾರದಲ್ಲಿ ನಡೆಯಲಿದೆ.

“ಅಜಗಜಾಂತರ’ ಮೂಲಕ ಬೆಳಕಿಗೆ: ಮೂಲತಃ ಹಂಸಲೇಖ ಅವರ ಬಳಿ ಟ್ರಾಕ್‌ ಸಿಂಗರ್‌ ಆಗಿದ್ದ ಎಲ್‌.ಎನ್‌. ಶಾಸ್ತ್ರಿ, ಹಂಸಲೇಖ ಸಂಗೀತ ನಿರ್ದೇಶನದ ಹಲವು ಚಿತ್ರಗಳಿಗೆ ಟ್ರಾಕ್‌ ಸಿಂಗರ್‌ ಆಗಿ ಗುರುತಿಸಿಕೊಂಡಿದ್ದರು. ನಂತರ ಕಾಶೀನಾಥ್‌ ಅಭಿನಯ, ನಿರ್ದೇಶನದ “ಅಜಗಜಾಂತರ’ ಚಿತ್ರದ ಮೂಲಕ ಗಾಯಕರಾಗಿ ಗುರುತಿಸಿಕೊಂಡರು. ಬಳಿಕ, ಹಲವು ಸೂಪರ್‌ ಹಿಟ್‌ ಹಾಡುಗಳಿಗೆ ಧ್ವನಿಯಾದರು.  ವಿ.ಮನೋಹರ್‌ ಸಂಗೀತ ನಿರ್ದೇಶನದ ಮೊದಲ ಚಿತ್ರವಾದ “ತರೆಲ ನನ್ಮಗ’ದ “ಸಂಗೀತ ಕಲಿಸಿ ಕೊಡು ಸಂಗೀತ …’ ಹಾಡಿನ ಮೂಲಕ ಜನಪ್ರಿಯರಾದ ಅವರು, ನಂತರ ಹಲವು ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. “ಶ್‌’ ಚಿತ್ರದ “ಅವನಲ್ಲಿ ಅವಳಿಲ್ಲಿ …’, “ಜನುಮದ ಜೋಡಿ’ ಚಿತ್ರದ “ಕೋಲುಮಂಡೆ ಜಂಗಮದೇವ …’, “ಜೋಡಿ ಹಕ್ಕಿ’ ಚಿತ್ರದ “ಲಾಲಿ ಸುವ್ವಾಲಿ ಹಾಡೆಲ್ಲಾ ಲಾಲಿ …’, “ಎ’ ಚಿತ್ರದ “ಹೇಳ್ಕೊಳ್ಳಾಕ್‌ ಒಂದೂರು …’, “ಪ್ರೀತ್ಸೋದ್‌ ತಪ್ಪಾ’ ಚಿತ್ರದ “ಒಂದು ಮೋಡ …’, “ಮಲ್ಲ’ ಚಿತ್ರದ “ಕರುನಾಡೇ ಕೈಚಾಚಿದೆ ನೋಡೆ …’ ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿದ್ದಾರೆ. “ಕೋಲುಮಂಡೆ ಜಂಗಮದೇವ …’ ಹಾಡಿಗೆ ರಾಜ್ಯಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಗಾಯನದ ಜೊತೆಗೆ, “ಕನಸಲೂ ನೀನೇ ಮನಸಲೂ ನೀನೇ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡರು. ಚೈತನ್ಯ ಎಂಬ ಹೆಸರಿನಲ್ಲಿ ಹಲವು ಚಿತ್ರಗಳಿಗೆ ಸಂಗೀತವನ್ನೂ ಸಂಯೋಜಿಸಿದರು. “”ರವಿ ಮಾಮ’, “ಅಮ್ಮ ನಿನ್ನ ತೋಳಿನಲ್ಲಿ’, “ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ’, “ಸಖೀ’, “ಬಳ್ಳಾರಿ ನಾಗ’ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ ಶಾಸ್ತ್ರಿಯವರ ಕೊನೆಯ ಸಂಗೀತ ನಿರ್ದೇಶನದ ಚಿತ್ರ, 2 ವರ್ಷಗಳ ಹಿಂದೆ ಬಿಡುಗಡೆಯಾದ “ಮೆಲೋಡಿ’.

ಶಾಸ್ತ್ರೀ ನನ್ನ 24 ವರ್ಷದ ಆತ್ಮೀಯ ಗೆಳೆಯ. ನನ್ನ ವೃತ್ತಿ ಜೀವನದಲ್ಲಿ “ಹಂತಕ’ ಚಿತ್ರಕ್ಕೆ ಬರೆದ ಹಾಡನ್ನು ಮೊದಲ ಸಲ ಹಾಡಿದ್ದರು. ಆ ದಿನಗಳಲ್ಲಿ ನಾನು 200 ರೂ.ಬಾಡಿಗೆಯ ಮನೆಯಲ್ಲಿದ್ದೆ. ನಮ್ಮನೆ ಗೊತ್ತಿರಲಿಲ್ಲ. ಆ ಮನೆ ಹುಡುಕಿ ಬಂದಿದ್ದ ಶಾಸ್ತ್ರಿ, “ಹಂತಕ’ ಸಿನಿಮಾದ ಹಾಡನ್ನು ನೀನೆ
ಬರೆಯಬೇಕು’ ಅಂತ ಹೇಳಿ, ಅಲ್ಲೇ ಬರೆಸಿ, ಅಲ್ಲೇ ಹಾಡಿದ್ದರು. ನನ್ನ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಅವರ ಸಂಗೀತ ನಿರ್ದೇಶನದಲ್ಲಿ ನಾನು ಹಾಡು ಬರೆದಿದ್ದೇನೆ. ಈಗ ಪುಟವೆಲ್ಲ ಖಾಲಿಯಾಗಿದೆ. ಅವನಿಲ್ಲ ಎಂಬ ನೋವಿದೆ.  
ಕೆ. ಕಲ್ಯಾಣ್‌, ಗೀತೆರಚನೆಕಾರ, ಸಂಗೀತ ನಿರ್ದೇಶಕ

Advertisement

ಎಲ್‌.ಎನ್‌.ಶಾಸ್ತ್ರಿ ಅವರ ನಿಧನ ಅತ್ಯಂತ ನೋವು ಉಂಟು ಮಾಡಿದೆ. ಎರಡು ದಶಕಗಳಿಂದ ಹಲವಾರು ಚಿತ್ರಗಳ ಗೀತೆಗಳಿಗೆ ಧ್ವನಿಯಾಗಿದ್ದ ಅವರು ಕನ್ನಡ ಚಲನಚಿತ್ರ ಸಂಗೀತ ಲೋಕದಲ್ಲಿ ತಮ್ಮ ವಿಶಿಷ್ಠ ಸ್ವರ ಮಾಧುರ್ಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ಭಗವಂತಕರುಣಿಸಲಿ. 
ಸಿದ್ದರಾಮಯ್ಯ, ಮುಖ್ಯಮಂತ್ರಿ

ಶಾಸ್ತ್ರಿ ಮಂಡ್ಯದಿಂದ ಸಿಂಗರ್‌ ಆಗಬೇಕು ಅಂತ ಬಂದಿದ್ದರು. ಹಂಸಲೇಖ ಅವರ ಜತೆ ಟ್ರಾಕ್‌ ಸಿಂಗರ್‌ ಆಗಿದ್ದರು. ಆಗ ನಾನು ಹಂಸಲೇಖ ಅವರ ಜತೆ ಅಸಿಸ್ಟೆಂಟ್‌ ಕೆಲಸ ಮಾಡುತ್ತಿದ್ದೆ. 1990ರಲ್ಲಿ ನಾನು, ಶಾಸ್ತ್ರಿ ಒಂದೇ ರೂಮ್‌ನಲ್ಲಿದ್ದೆವು. ಆಗ ಇಬ್ಬರೂ ಸೇರಿ ಒಂದು ಆಡಿಯೋ  ಆಲ್ಬಂ ಮಾಡೋಣ ಅಂತ ನಿರ್ಧರಿಸಿದೆವು. “ಓ ಕುಸುಮ ಬಾಲೆ’ ಎಂಬ ಹೆಸರಿನ ಆಲ್ಬಂ ಮಾಡಿದ್ದೆವು. ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದ ಶಾಸ್ತ್ರಿ ಮೊನ್ನೆಯಷ್ಟೇ, “ಮೆಲೋಡಿ’ ಚಿತ್ರಕ್ಕೆ ಸಂಗೀತ ನೀಡಿ, ಮೆಲೋಡಿಯಾಗಿಯೇ ಉಳಿದು ಬಿಟ್ಟ.
ವಿ.ಮನೋಹರ್‌, ಸಂಗೀತ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next