ಸಿಂಗಾಪುರ: “ಸಿಂಗಾಪುರ್ ಸ್ಮಾಶ್ ಟೇಬಲ್ ಟೆನಿಸ್’ ಪಂದ್ಯಾವಳಿ ಯಲ್ಲಿ ಅಚಂತ ಶರತ್ ಕಮಲ್ ಅವರ ಕನಸಿನ ಓಟ ಕ್ವಾರ್ಟರ್ ಫೈನಲ್ನಲ್ಲಿ ಕೊನೆಗೊಂಡಿದೆ. ಶುಕ್ರವಾರದ ಮುಖಾ ಮುಖೀಯಲ್ಲಿ ಅವರು ವಿಶ್ವದ 6ನೇ ರ್ಯಾಂಕಿಂಗ್ ಆಟಗಾರ, ಫ್ರಾನ್ಸ್ನ 17 ವರ್ಷದ ಫೆಲಿಕ್ಸ್ ಲೆಬ್ರುನ್ ವಿರುದ್ಧ 1-4 ಅಂತರದ ಸೋಲನುಭವಿಸಿದರು (9-11, 2-11, 7-11, 11-9, 8-11).
ಪ್ರಬಲವಾದ ಫೋರ್ಹ್ಯಾಂಡ್ ಟಾಪ್ ಸ್ಪಿನ್, ಬ್ಯಾಕ್ಹ್ಯಾಂಡ್ ಡ್ರೈವ್ ಮೂಲಕ ಗಮನ ಸೆಳೆದರೂ ಫ್ರಾನ್ಸ್ನ ಯುವ ಆಟಗಾರನೆದುರು 41 ವರ್ಷದ ಅಚಂತ ಮಂಕಾದರು. 31 ನಿಮಿಷಗಳಲ್ಲಿ ಶರಣಾಗತಿ ಸಾರಿದರು.
ಇದಕ್ಕೂ ಮೊದಲು ಅಚಂತ ಶರತ್ ಕಮಲ್ ಈಜಿಪ್ಟ್ನ ನಂ. 22 ರ್ಯಾಂಕಿಂಗ್ ಆಟಗಾರ ಒಮರ್ಅಸ್ಸಾರ್, ಸ್ಲೊವೇನಿಯಾದ 13ನೇ ರ್ಯಾಂಕಿಂಗ್ ಆಟಗಾರ ಡಾರ್ಕೊ ಜಾರ್ಜಿಕ್, ಚಿಲಿಯ ನಂ. 51ನೇ ರ್ಯಾಂಕಿಂಗ್ ಆಟಗಾರ ನಿಕೋಲಸ್ ಬರ್ಗೋಸ್ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು.
ಕ್ವಾರ್ಟರ್ ಫೈನಲ್ ಸಾಧನೆಯಿಂದ ಶರತ್ ಕಮಲ್ ವಿಶ್ವ ರ್ಯಾಂಕಿಂಗ್ನಲ್ಲಿ ಟಾಪ್-40ಕ್ಕೆ ಏರಲಿದ್ದಾರೆ. ಸದ್ಯ 88ನೇ ರ್ಯಾಂಕಿಂಗ್ ಹೊಂದಿದ್ದಾರೆ. ಹಾಗೆಯೇ ಮುಂದಿನ ವಾರ ಭಾರತದ ನಂ.1 ಟಿಟಿ ಆಟಗಾರನಾಗಿಯೂ ಮೂಡಿಬರುವರು.