ಸಿಂಗಾಪುರ: ಭಾರತದ ಪಿ.ವಿ. ಸಿಂಧು ಅವರು ಸ್ಪೇನ್‌ನ ಕ್ಯಾರೋಲಿನ್ ಮರಿನ್ ವಿರುದ್ಧ ಮತ್ತೂಮ್ಮೆ ಸೋಲನ್ನು ಕಂಡಿದ್ದಾರೆ. ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಕೂಟದ ಪಂದ್ಯದಲ್ಲಿ ಸಿಂಧು ನಿರ್ಣಾಯಕ ಗೇಮ್‌ನಲ್ಲಿ 18-15 ಮುನ್ನಡೆ ಸಾಧಿಸಿದ್ದರೂ ಅಂತಿಮವಾಗಿ ಮರಿನ್ ಅವರಿಗೆ 21-13, 11-21, 20-22 ಗೇಮ್‌ಗಳಿಂದ ಸೋತು ನಿರಾಶೆ ಅನುಭವಿಸಿದರು. ಇದು ಕಳೆದ 2018ರಿಂದ ಮರಿನ್ ಅವರ ವಿರುದ್ಧ ಸಿಂಧು ಅವರ ಸತತ ಆರನೇ ಸೋಲು ಆಗಿದೆ.
ಆದರೆ ವನಿತೆಯರ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ವಿಶ್ವದ ಎರಡನೇ ರ್‍ಯಾಂಕಿನ ದಕ್ಷಿಣ ಕೊರಿಯದ ಬಾಯೆಕ್ ಹಾ ನಾ ಮತ್ತು ಲೀ ಸೊ ಹೀ ಅವರನ್ನು ಸೋಲಿಸಿ ಅಚ್ಚರಿಗೊಳಿಸಿದರು. ಒಂದು ತಾಸುಗಳ ಈ ಹೋರಾಟದಲ್ಲಿ ಟ್ರೀಸಾ-ಗಾಯತ್ರಿ 21-9, 14-21, 21-15 ಗೇಮ್‌ಗಳಿಂದ ಜಯಭೇರಿ ಬಾರಿಸಿ ಕ್ವಾರ್ಟರ್‌ಫೈನಲಿಗೇರಿದರು. ಇದು ಕೊರಿಯದ ಎದುರಾಳಿಯೆದುರಿನ ಕಳೆದ ಮೂರು ಹೋರಾಟಗಳಲ್ಲಿ ಟ್ರೀಸಾ-ಗಾಯತ್ರಿ ದಾಖಲಿಸಿದ ಮೊದಲ ಗೆಲುವು ಆಗಿದೆ.
ಟ್ರೀಸಾ-ಗಾಯತ್ರಿ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಕೊರಿಯದ ಇನ್ನೊಂದು ಜೋಡಿ ಆರನೇ ಶ್ರೇಯಾಂಕದ ಕಿಮ್ ಸೊ ಯಿಯಾಂಗ್ ಮತ್ತು ಕಾಂಗ್ ಹೀ ಯಾಂಗ್ ಅವರನ್ನು ಎದುರಿಸಲಿದ್ದಾರೆ. ಭಾರರತೀಯ ಜೋಡಿ ಕಳೆದ ವರ್ಷ ನಡೆದ ಹ್ಯಾಂಗ್‌ಝೂ ಏಷ್ಯನ್ ಗೇಮ್ಸ್‌ನ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಕೊರಿಯದ ಈ ಜೋಡಿಗೆ ಶರಣಾಗಿತ್ತು.
ಪ್ರಣಯ್‌ಗೆ ಸೋಲು:
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 10ನೇ ರ್‍ಯಾಂಕಿನ ಎಚ್. ಎಸ್. ಪ್ರಣಯ್ ಅವರು ಜಪಾನಿನ ಕೆಂಟೊ ನಿಶಿಮೊಟೊ ಅವರ ಕೈಯಲ್ಲಿ 13-21, 21-14, 15-21 ಗೇಮ್‌ಗಳಿಂದ ಶರಣಾದರು. ಇದು ಕಳೆದ ಆರು ಪಂದ್ಯಗಳಲ್ಲಿ ಪ್ರಣಯ್ ಅವರಿಗೆ ಎದುರಾದ ನಾಲ್ಕನೇ ಸೋಲು ಆಗಿದೆ. ಪ್ರಣಯ್ ಕಳೆದ ವಾರ ನಡೆದ ಮಲೇಷ್ಯ ಮಾಸ್ಟರ್ ಕೂಟದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು.