Advertisement

ಕೊಪ್ಪಳ ಅಭ್ಯರ್ಥಿಗೆ ಸಿಂಧನೂರು ನಿರ್ಣಾಯಕ

03:21 PM Apr 17, 2019 | pallavi |

ಸಿಂಧನೂರು: ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರವಹಿಸುವ ಸಿಂಧನೂರು ವಿಧಾನಸಭೆ ಕ್ಷೇತ್ರ, ಈ ಬಾರಿ ಎರಡು ಪಕ್ಷದ ಅಭ್ಯರ್ಥಿಗಳಿಗೆ ಸವಾಲಾಗಿ ಪರಣಮಿಸಿದೆ.

Advertisement

ಕಳೆದ 2014ರ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿಯವರಿಗೆ 21 ಸಾವಿರಕ್ಕೂ ಅಧಿಕ ಮತಗಳ ಲೀಡ್‌ ದೊರೆತಿತ್ತು. ಹೀಗಾಗಿ ಸಿಂಧನೂರು ಕೊಪ್ಪಳ ಸಂಸದರ ಆಯ್ಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಿಂದೆ ಪ್ರತಿಸ್ಪರ್ಧಿಗಳಾಗಿದ್ದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಈಗ ಒಂದಾಗಿದ್ದಾರೆ.

ಜೆಡಿಎಸ್‌ನ ಸಚಿವ ವೆಂಕಟರಾವ್‌ ನಾಡಗೌಡರು ಮೈತ್ರಿ ಸರ್ಕಾರದ ಅಭ್ಯರ್ಥಿ ಬಿ.ವಿ.ನಾಯಕರಿಗೆ ಬೆಂಬಲಿಸುವ ಸಂದಿಗ್ಧತೆಗೆ ಸಿಲುಕಿದ್ದಾರೆ. ಆದರೆ, ಈವರೆಗೆ ಕಾಂಗ್ರೆಸ್‌, ಜೆಡಿಎಸ್‌ ಪರಮಶತ್ರುಗಳಂತೆ ಇದ್ದವು. ಮೈತ್ರಿಗಾಗಿ ತೋರಿಕೆಗೆ ಒಂದು ಎಂದು ತೋರಿದರೂ ಒಳಗೊಳಗೆ ಅದೇ ಅಸಮಾಧಾನ ಇದೆ ಎನ್ನುವುದು ಸತ್ಯ. ಈ ನಿಟ್ಟಿನಲ್ಲಿ ಸಚಿವರು ಮೈತ್ರಿ ನೆಪದಲ್ಲಿ ಎಷ್ಟು ಮತ ಹಾಕಿಸುವರೋ ಎಂಬ ಕುತೂಹಲ ಇದ್ದೇ ಇದೆ.

ಬಿಜೆಪಿಯಲ್ಲೂ ಗೊಂದಲ: ಬಿಜೆಪಿ ಮುಖಂಡರ ವೈಮನಸ್ಸಿನಿಂದ ಕಾರ್ಯಕರ್ತರು ಗೊಂದಲದಲ್ಲಿ ಇರುವುದು ಕಂಡು ಬರುತ್ತಿದೆ. ಕಳೆದ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕೊಲ್ಲಾ ಶೇಷಗಿರಿರಾವ್‌, ಬಿಜೆಪಿ ತಾಲೂಕು ಅಧ್ಯಕ್ಷ ಅಮರೇಗೌಡ ವಿರೂಪಾಪುರ, ರಾಜಶೇಖರ ಪಾಟೀಲ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರು.

ಆದರೆ ಶೇಷಗಿರಿರಾವ್‌ ಪರಾಭವಗೊಂಡ ನಂತರ ಅಮರೇಗೌಡ ಹಾಗೂ ರಾಜಶೇಖರ ಪಾಟೀಲ ದೂರ ಸರಿದಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಕೊಲ್ಲಾ ಶೇಷಗಿರಿರಾವ್‌ ಹಾಗೂ ಅಮರೇಗೌಡ ವಿರೂಪಾಪುರ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದಾರೆ. ರಾಜಶೇಖರ ಪಾಟೀಲರು ಮಾತ್ರ ತಟಸ್ಥ ಧೋರಣೆಯಲ್ಲಿದ್ದಾರೆ. ಆದರೆ ಕಾರ್ಯಕರ್ತರು, ಯುವ ಮತದಾರರು ನಾಯಕರ ಭಿನ್ನಮತ ನಮಗೆ ಬೇಕಾಗಿಲ್ಲ.

Advertisement

ಮೋದಿ ಆಡಳಿತ ಮಾತ್ರ ನಮಗೆ ಬೇಕು. ಅವರು ಪ್ರಧಾನಿಯಾಗಲು ನಾವು ಶ್ರಮಿಸುತ್ತೇವೆ ಎಂದು ಸ್ವಇಚ್ಛೆಯಿಂದಲೇ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೇ ಗೆದ್ದು ಬರಲಿ ಅಲ್ಲಿ ನಿರ್ಣಾಯಕ ಪಾತ್ರ ಸಿಂಧನೂರು ವಿಧಾನಸಭೆ ಕ್ಷೇತ್ರವಾಗಿರುತ್ತದೆ. ಎಲ್ಲ ಜಾತಿ,ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಲಿಂಗಾಯತ, ಆಂಧ್ರ, ಅಲ್ಪಸಂಖ್ಯಾತರು, ಕುರುಬರು, ನಾಯಕ ಸಮುದಾಯ ತಮ್ಮದೇ ಆದ ಜನಸಂಖ್ಯೆ ಪ್ರಾಬಲ್ಯ ಹೊಂದಿವೆ. ಈ ಹಿನ್ನಲೆಯಲ್ಲಿ ಲೋಕಸಭೆ ಚುನಾವಣೆ ಯಲ್ಲಿ ಸಚಿವ ವೆಂಕಟ ರಾವ್‌ ನಾಡಗೌಡ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ , ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಕೆಲ ಪ್ರದೇಶದಲ್ಲಿ ಪ್ರಾಬಲ್ಯ ಇದ್ದು ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ.

ಬಾದರ್ಲಿ-ವಿರೂಪಾಕ್ಷಪ್ಪ ಬೆಂಬಲಿಗರ
ಅಸಮಾಧಾನ: ಲೋಕಸಭೆ ಸ್ಪರ್ಧೆ ಮಾಡಲು ಮುಂಚೂಣಿಯಲ್ಲಿದ್ದ ಯುವ ಕಾಂಗ್ರೆಸ್‌ ಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪನವರ ಬೆಂಬಲಿಗರು ನಮ್ಮ ನಾಯಕರಿಗೆ ಟಿಕೆಟ್‌ ಸಿಗಲಿಲ್ಲ ಎಂಬ ಬೇಸರದಲ್ಲಿದ್ದಾರೆ. ಆದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಒಂದಾಗಿ ಶ್ರಮಿಸುವುದಾಗಿ ಹೇಳುತ್ತಿದ್ದಾರೆ.

ಬಂಗಾಲಿ ಮತಗಳ ಮೇಲೆ ಕಣ್ಣು: ಇಲ್ಲಿ ವಲಸೆ ಬಂದು ನೆಲೆ ನಿಂತ 20 ಸಾವಿರಕ್ಕೂ ಅಧಿಕ ಬಂಗಾಲಿಗರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರಿಗೂ ಗುರುತಿನ ಚೀಟಿ ವಿತರಿಸಲಾಗಿದೆ. ಆ ಮತಗಳು ಒಂದು ಪಕ್ಷಕ್ಕೆ ವಾಲುವುದರಿಂದ ಗೆಲುವು ಸೋಲು ನಿರ್ಣಯಿಸುವ ಶಕ್ತಿ ಇದೆ.

ಮೋದಿ ಅಲೆ: ದೇಶದ ಪ್ರಗತಿಗೆ ನರೇಂದ್ರ ಮೋದಿಯೇ ಸೂಕ್ತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯುವ ಸಮೂಹ ದೇಶಕ್ಕಾಗಿ ಮೋದಿಗೆ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ. ಸಮೀಪದ ಗಂಗಾವತಿಗೆ ಮೋದಿ ಬಂದು ಪ್ರಚಾರ ನಡೆಸಿರುವುದು ಬಿಜೆಪಿ ಬಲ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next