ಸಿಂಧನೂರು: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಿಂಧನೂರು ನಗರ ಸೇರಿ ತಾಲೂಕಿನ ಭಕ್ತರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಪೂಜ್ಯರು ಹಲವು ಬಾರಿ ಸಿಂಧನೂರಿನಲ್ಲಿ ನಡೆದ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಭಕ್ತರಿಗೆ ಉಪದೇಶಾಮೃತ ನೀಡಿದ್ದರು. ಅಲ್ಲದೇ ಭಕ್ತರ ಮನೆಗಳಿಗೆ ತೆರಳಿ ಪಾದಪೂಜೆ ಸ್ವೀಕರಿಸಿ ಆಶೀರ್ವದಿಸಿದ್ದನ್ನು ಇಲ್ಲಿನ ಭಕ್ತರು, ವಿಪ್ರ ಸಮಾಜದ ಮುಖಂಡರು ಸ್ಮರಿಸುತ್ತಾರೆ.
ಶ್ರೀ ವಿಶ್ವೇಶತೀರ್ಥ ಶ್ರೀಪಾದರು ರವಿವಾರ ಹರಿಪಾದ ಸೇರಿದ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಭಕ್ತರು ಕಂಬನಿ ಮಿಡಿದಿದ್ದಾರೆ. ಹಿಂದೂಪರ ಸಂಘಟನೆಗಳು ನಗರದಲ್ಲಿ ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ಪೇಜಾವರ ಶ್ರೀಗಳು ಸಕ್ರೀಯವಾಗಿ ಭಾಗವಹಿಸಿ ಹಿಂದುತ್ವದ ಬಗ್ಗೆ ಅರಿವು ಮೂಡಿಸಿದ್ದರು. ಉಡುಪಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಇತರೆ ಸಿಂಧನೂರು ಮಾರ್ಗವಾಗಿ ಹೋಗುವಾಗಲೆಲ್ಲ ಭಕ್ತರಿಗೆ ಮಾಹಿತಿ ನೀಡಿ ಭಕ್ತರ ಮನೆಗಳಿಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವದಿಸಿ ಮುಂದೆ ಪ್ರಯಾಣ ಬೆಳೆಸುತ್ತಿರುವುದು ವಿಶೇಷವಾಗಿತ್ತು.
ಇದೇ ವರ್ಷ ಸಿಂಧನೂರು ತಾಲೂಕಿನ ಗೋಮರ್ಸಿಯಲ್ಲಿ ನಡೆದ ಆಂಜನೇಯ ದೇವಸ್ಥಾನ ಉದ್ಘಾಟನೆ ಮತ್ತು ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಪೂಜ್ಯರು ಆಗಮಿಸಿದ್ದರು. 2014ರಲ್ಲಿ ನೆರೆಹಾವಳಿಗೆ ತುತ್ತಾದ ಜನರಿಗೆ ಉಡುಪಿ ಶ್ರೀಮಠದಿಂದ ದವಸ ಧಾನ್ಯ ಹಾಗೂ ಪರಿಹಾರ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದರು. ಅಲಬನೂರಿನ ಶ್ರೀ ವೆಂಕಟೇಶ್ವರ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲೂ ಪೂಜ್ಯರು ಭಾಗಿಯಾಗಿದ್ದರು.
ಪಿಡಬ್ಲ್ಯೂಡಿ ಕ್ಯಾಂಪ್‌ನ ರಸ್ತೆಯಲ್ಲಿರುವ ಕನಕ ಪರಮೇಶ್ವರ ಪೂಜಾ ಕಾರ್ಯಕ್ರಮದಲ್ಲಿ, ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾರ್ಯಕ್ರಮದಲ್ಲಿ ಪೂಜ್ಯರು ಭಾಗಿಯಾಗಿದ್ದರು. ನಗರದ ಪಟೇಲ್
ವಾಡಿಯಲ್ಲಿನ ಶ್ರೀರಾಮ ಮಂದಿರದಲ್ಲಿ ನಡೆಯುವ ಅನೇಕ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಭಾಗಿಯಾಗಿದ್ದರು.
2017ರಲ್ಲಿ ಈಗಿನ ಶಾಸಕ ವೆಂಕಟರಾವ್ ನಾಡಗೌಡರು ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಪೂಜ್ಯರು ಭಾಗಿಯಾಗಿದ್ದರು. ವಿಶ್ವ ಹಿಂದೂ ಪರಿಷತ್‌ನಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದ ದಿ| ಸ್ವಾಮಿನಾಥ ವಕೀಲರ ಪರಿಚಯದಿಂದ ಶ್ರೀಗಳು ಸಿಂಧನೂರಿನ ಅನೇಕ ಭಕ್ತರ ಮನೆಗೆ ಭೇಟಿ ನೀಡುತ್ತಿದ್ದರು. ದಲಿತ ಮುಖಂಡರಾದ ಬಿಎಸ್‌ಪಿಯ ಮರಿಯಪ್ಪ ಹಾಗೂ ಜಾನಪದ ಕಲಾವಿದ ನಾರಾಯಣಪ್ಪ ಮಾಡಸಿರವಾರ ಸೇರಿದಂತೆ ಇತರ ಭಕ್ತರ ಮನೆಗೆ ತೆರಳಿ ಆಶೀರ್ವದಿಸಿದ್ದನ್ನು ಇಲ್ಲಿನ ಭಕ್ತರು ಸ್ಮರಿಸುತ್ತಾರೆ.