ಜಕಾರ್ತ : ಏಷ್ಯಾಡ್ ನಲ್ಲಿ ಚಿನ್ನದ ನಿರೀಕ್ಷೆ ಮೂಡಿಸಿದ್ದ ಭಾರತದ ಪಿ.ವಿ.ಸಿಂಧು ಮತ್ತೊಮ್ಮೆ ನಿರಾಸೆಗೆ ಒಳಗಾಗಿದ್ದಾರೆ . ಮಂಗಳವಾರ ನಡೆದ ಬ್ಯಾಡ್ಮಿಂಟನ್ ವನಿತಾ ಸಿಂಗಲ್ಸ್ ನ ಫೈನಲ್ ಪಂದ್ಯಾವಳಿಯಲ್ಲಿ ಸಿಂಧು ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ದ 13-21, 16-21 ಸೆಟ್ ಗಳ ಅಂತರದಿಂದ ಸೋತು ರಜತ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಕಳೆದ ಒಲಿಂಪಿಕ್ಸ್ ನ ವನಿತಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದಿದ್ದ ಪಿ.ವಿ.ಸಿಂಧು, ಏಶ್ಯನ್ ಗೇಮ್ಸ್ ನಲ್ಲಿ ಕೂಡಾ ಬಂಗಾರದಿಂದ ವಂಚಿತರಾದರು.
ವಿಶ್ವ ವನಿತಾ ಬ್ಯಾಡ್ಮಿಂಟನ್ ನ ಅಗ್ರ ಶ್ರೇಯಾಂಕ ಮತ್ತು ಮೂರನೇ ಶ್ರೇಯಾಂಕಿತೆಯ ನಡುವಿನ ಫೈನಲ್ ಸೆಣಸಾಟದಲ್ಲಿ ಅಗ್ರ ಶ್ರೇಯಾಂಕಿತೆ ತೈ ಜು ಯಿಂಗ್ ಜಯ ಗಳಿಸುವಲ್ಲಿ ಸಫಲರಾದರು. ಈ ಮೂಲಕ ಸಿಂಧು ಪ್ರಮುಖ ಕೂಟಗಳ ಫೈನಲ್ ಗಳ ಸೋಲಿನ ಸರಣಿ ಮತ್ತೆ ಮುಂದುವರಿಯಿತು. ಸಿಂಧು ಜು ಯಿಂಗ್ ವಿರುದ್ದ ರಿಯೋ ಒಲಿಂಪಿಕ್ ಸೇರಿದಂತೆ ಕಳೆದ ಐದು ಫೈನಲ್ ಗಳಲ್ಲಿ ಸೋತಿದ್ದರು.
ಸೋಮವಾರ ನಡೆದ ಸೆಮಿ ಫೈನಲ್ ನಲ್ಲಿ ಸಿಂದು ಜಪಾನಿನ ಅಕಾನೆ ಯೆಮಾಗುಚಿ ವಿರುದ್ದ21-17, 15-21, 21-10 ಅಂಕಗಳ ಅಂತರದಿಂದ ಗೆದ್ದು ಅಂತಿಮ ಘಟ್ಟಕ್ಕೆ ತಲುಪುವಲ್ಲಿ ಸಫಲರಾಗಿದ್ದರು.
ಮತ್ತೊಂದು ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತೆ ತೈ ಜು ಯಿಂಗ್ ಭಾರತದ ಸೈನಾ ನೆಹ್ವಾಲ್ ವಿರುದ್ದ 17-21, 14-21 ಅಂತರದಿಂದ ಗೆಲುವು ಸಾಧಿಸಿದ್ದರು. ಈ ಸೋಲಿನೊಂದಿಗೆ ಸೈನಾ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ಬೆಳ್ಳಿಗೆ ಗುರಿಯಿಟ್ಟ ಮಹಿಳಾ ಆರ್ಚರಿ ತಂಡ
ಬಿಲ್ಗಾರಿಕೆಯಲ್ಲಿ ಭಾರತದ ವನಿತಾ ಕಂಪೌಂಡ್ ತಂಡ ರಜಕ ಪದಕಕ್ಕೆ ಗುರಿ ಇಟ್ಟಿತು. ಭಾರತ ಮಹಿಳೆಯರ ತಂಡ 228-231 ಅಂಕಗಳಿಂದ ಕೊರಿಯಾ ಮಹಿಳೆಯರ ವಿರುದ್ದ ಸೋಲನುಭವಿಸಿ ಬೆಳ್ಳಿಗೆ ತೃಪ್ತಿ ಪಟ್ಟರು.