ಕೆ.ಆರ್.ನಗರ: ವಿಶ್ವ ಬಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದು ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿರುವ ಪಿ.ವಿ.ಸಿಂಧು ಅವರನ್ನು ನಾವು ಮಾದರಿಯಾಗಿಟ್ಟುಕೊಂಡು ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಆಗ ನಿರೀಕ್ಷಿತ ಗುರಿ ತಲುಪಬಹುದು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಎ.ಬಿ.ಮಲ್ಲಿಕಾ ಸಲಹೆ ನೀಡಿದರು. ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಾಧನೆ, ಆರೋಗ್ಯ: ವಿದ್ಯಾರ್ಥಿಗಳು ಶೈಕ್ಷಣಿಕ ಅಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಸಾಧನೆಯನ್ನೂ ಮಾಡಬಹುದು ಎಂದರು.
ವಿಫುಲ ಅವಕಾಶ: ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಷ್ಟೇ ವಿಫುಲ ಅವಕಾಶಗಳು ಕ್ರೀಡಾ ಕ್ಷೇತದಲ್ಲಿಯೂ ದೊರೆಯುತ್ತಿದ್ದು, ಪೋಷಕರು ಮತ್ತು ಶಿಕ್ಷಕರು ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದರೆ ನಮ್ಮ ನಡುವೆ ಇರುವ ಪ್ರತಿಭೆಗಳು ಬೆಳಗಲಿವೆ. ತಾಲೂಕು ಪಂಚಾಯ್ತಿಯ ವತಿಯಿಂದ ಕ್ರೀಡೆಗೆ ಹೆಚ್ಚಿನ ರೀತಿಯ ಸಹಕಾರ ಮತ್ತು ಸಹಾಯ ಧನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕ್ರೀಡಾ ಶಾಲೆ: ಗ್ರಾಮಾಂತರ ಪ್ರದೇಶಗಳ ಪೋಷಕರು ತಮ್ಮ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸದೆ ಅವರನ್ನು ಶಿಕ್ಷಣಕ್ಕಷ್ಟೇ ಸೀಮಿತಗೊಳಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಇಂತಹ ವಿಚಾರದ ಬಗ್ಗೆ ಅವರು ಗಂಭೀರವಾಗಿ ಚಿಂತಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಜಿಲ್ಲೆಗೊಂದು ಕ್ರೀಡಾ ತರಬೇತಿ ಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭೆಗೆ ಪ್ರೋತ್ಸಾಹಿಸಿ: ಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದ ತಹಶೀಲ್ದಾರ್ ಎಂ.ಮಂಜುಳಾ ಮಾತನಾಡಿ, ಕ್ರೀಡೆಯಿಂದ ಮನುಷ್ಯನ ಮನಸ್ಸು ಮತ್ತು ದೇಹಕ್ಕೆ ಉತ್ತಮ ಆರೋಗ್ಯ ದೊರೆಯುವುದರ ಜತೆಗೆ ಇದು ಆ ಕ್ಷೇತ್ರದಲ್ಲಿ ಸಾಧನೆಗೆ ಸಹಕಾರಿಯಾಗಲಿದೆ. ಓದಿಗೆ ಕೊಡುವಷ್ಟು ಮಹತ್ವವನ್ನು ಕ್ರೀಡಾ ಕ್ಷೇತ್ರಕ್ಕೂ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಹೊಸೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಯದುಗಿರೀಶ್, ಪ್ರಾಂಶುಪಾಲರಾದ ಸುಧಾಮಣಿ, ಪುರುಷೋತ್ತಮ, ಉಪನ್ಯಾಸಕರಾದ ಕೃಷ್ಣ, ಉಮಾಶಂಕರ, ಜಗದೀಶ್, ಲೋಕೇಶ್, ಗಿರೀಶ್, ಶ್ರೀನಿವಾಸ್, ರೇವಣ್ಣ, ರಾಜೇಂದ್ರ ಮತ್ತಿತರರು ಹಾಜರಿದ್ದರು.