Advertisement

ಸಿಂಧೂರ ಲಕ್ಷ್ಮಣ ಚರಿತ್ರೆ-ಸಾಧನೆ ಸ್ಮರಿಸಿ

01:30 PM May 29, 2017 | |

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಸಿಂಧೂರ ಲಕ್ಷ್ಮಣ ಚರಿತ್ರೆ ತಿಳಿಸುವ ಮೂಲಕ ಅವರ ಸಾಧನೆ-ಕಾರ್ಯಗಳ ಕುರಿತು ಮನನ ಮಾಡಿಸುವ ಕೆಲಸವಾಗಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. 

Advertisement

ಗೋಕುಲ ರಸ್ತೆ ಮಂಜುನಾಥ ನಗರ ಕ್ರಾಸ್‌ ದಲ್ಲಿರುವ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಪುತ್ಥಳಿ ಬಳಿ ರವಿವಾರ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಹೋರಾಟ ಸಮಿತಿಯಿಂದ ನಡೆದ ವೀರ ಸಿಂಧೂರ ಲಕ್ಷ್ಮಣ 119ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಶಾಲೆ- ಕಾಲೇಜುಗಳಲ್ಲಿ ಮಕ್ಕಳಿಗೆ ಸಿಂಧೂರ ಲಕ್ಷ್ಮಣರ ಕುರಿತು ಕಥೆ, ಪ್ರಬಂಧ, ಭಾಷಣ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ಅವರನ್ನು ಜಾಗೃತಗೊಳಿಸುವಕೆಲಸವಾಗಬೇಕು. ಸಂಗೊಳ್ಳಿ ರಾಯಣ್ಣ, ಕಿತ್ತೂರ ಚನ್ನಮ್ಮರಂತೆ ಸಿಂಧೂರ ಲಕ್ಷ್ಮಣ ಅವರ ಕುರಿತು ಚಿತ್ರ ನಿರ್ಮಾಣ ಮಾಡುವ ಕೆಲಸ ನಡೆಯಬೇಕು ಎಂದರು. 

ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಇಡೀ ನಾಡಿನಾದ್ಯಂತ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಜಯಂತಿ ಆಚರಣೆ ಮಾಡಬೇಕು. ಸದ್ಯ ನಗರದಲ್ಲಿ ಪ್ರಾರಂಭವಾಗಿರುವ ಕಾರ್ಯ ರಾಜ್ಯದ ತುಂಬ ನಡೆಯಬೇಕು.

ಇಂದಿನ ತಂತ್ರಜ್ಞಾನ ಯುಗದಲ್ಲಿರುವ ನಾವೆಲ್ಲರು ದ್ವೇಷಭಾವನೆ ಬಿಟ್ಟು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಹಾಯ, ಸಹಕಾರದಿಂದ ಜೀವನ ನಡೆಸಬೇಕು ಎಂದರು. ಸ್ವಾತಂತ್ರ ಹೋರಾಟಗಾರು ಹಾಗೂ ಬುದ್ಧ, ಬಸವಣ್ಣ, ಅಂಬೇಡ್ಕರ್‌, ಗಾಂಧೀಜಿಯಂತಹ ಮಹಾನ್‌ ನಾಯಕರು ಒಂದೇ ಸಮುದಾಯಕ್ಕೆ ಸೀಮಿತವಲ್ಲ.

Advertisement

ಆ ಕಾರಣಕ್ಕಾಗಿ ಎಲ್ಲ ಸಮುದಾಯದವರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ವೀರ ಸಿಂಧೂರ ಲಕ್ಷ್ಮಣನ ಶೌರ್ಯ, ಸಾಧನೆ, ದೇಶಾಭಿಮಾನದ ವಿಚಾರಗಳು ಪಠ್ಯದಲ್ಲಿ ಸೇರಿಸುವ ಮೂಲಕ ಮಕ್ಕಳಲ್ಲಿ ಅವರ ಚರಿತ್ರೆ ತಿಳಿವಂತಹ ಕೆಲಸವಾಗಬೇಕು ಎಂದರು.  

ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಸಿಂಧೂರ ಲಕ್ಷ್ಮಣ ಪುತ್ಥಳಿ ಮುಂದೆ ಬಸ್‌ ನಿಲ್ದಾಣ ನಿರ್ಮಿಸಿ ಅದಕ್ಕೆ ಸಿಂಧೂರ ಲಕ್ಷ್ಮಣ ಎಂದು ನಾಮಕರಣ ಮಾಡಲಾಗುವುದು ಎಂದರು. ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕ ವೀರಭದ್ರ ಹಾಲಹರವಿ, ಮಹೇಶ ಟೆಂಗಿನಕಾಯಿ,

ಎಂ.ಎನ್‌. ತಳವಾರ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಚಂದ್ರಶೇಖರ ಜುಟ್ಟಲ, ಮಹಾಪೌರ ಡಿ.ಕೆ. ಚವ್ಹಾಣ, ಪಾಲಿಕೆ ಸದಸ್ಯ ಸಂತೋಷ ಹಿರೇಕೆರೂರ, ರವಿ ಬೆಂತೂರ, ಮಂಜುನಾಥ ಓಲೇಕಾರ, ಅಣ್ಣಪ್ಪ ನವಲೂರ, ಅನಿಲ ಬಾನಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next