Advertisement
ಇಂತಹ ಅಪರೂಪದ ಆತಿಥ್ಯಕ್ಕೆ ಸಾಕ್ಷಿಯಾದದ್ದು ಕೇರಳದ ತಿರುವನಂತಪುರ. ಇಲ್ಲಿ ಒಲಿಪಿಂಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಅವರ ತಾಯಿ ವಿಜಯಾ ರಮಣ ಹಾಗೂ ದ.ಕ. ಜಿಲ್ಲೆಯ ಪುತ್ತೂರಿನ ಸಂಪ್ಯ ನಿವಾಸಿ, ಎನ್‌ಐಎಸ್ ಮಾಜಿ ತರಬೇತುದಾರ ಪಿ.ವಿ. ನಾರಾಯಣ್ 35 ವರ್ಷಗಳ ಬಳಿಕ ಪರಸ್ಪರ ಭೇಟಿಯಾದರು. ವಿಜಯಾ ವಾಲಿಬಾಲ್ ಪಟುವಾಗಿದ್ದು, 35 ವರ್ಷಗಳ ಹಿಂದೆ ನಾರಾಯಣ್ ಅವರು ವಾಲಿಬಾಲ್ ತರಬೇತಿ ನೀಡಿರುವುದೇ ಈ ಬೆಸುಗೆಗೆ ಕಾರಣ!
ಕೇರಳ ರಾಜ್ಯ ಒಲಿಂಪಿಕ್ ಅಸೋಸಿಯೇಶನ್ ಸಂಸ್ಥೆ ಬ್ಯಾಡ್ಮಿಂಟನ್ ಸಾಧನೆಗಾಗಿ ಸಿಂಧು ಅವರನ್ನು ಇತ್ತೀಚೆಗೆ ತಿರುವನಂತಪುರದಲ್ಲಿ ಗೌರವಿಸಿತ್ತು. ಇದನ್ನು ನಾರಾಯಣ್ ಅವರಿಗೆ ತಾಯಿ ವಿಜಯಾ ರಮಣ ತಿಳಿಸಿದ್ದರು. ತರಬೇತಿ ನೀಡಿ ಊರಿಗೆ ಮರಳಿದ 35 ವರ್ಷದ ಬಳಿಕ ಪಿ.ವಿ. ನಾರಾಯಣ್ ಹಾಗೂ ಪಿ.ವಿ.ಸಿಂಧು ಕುಟುಂಬ ಭೇಟಿಯಾಗಿದೆ. “ಕೇರಳಕ್ಕೆ ಬರುವ ವಿಚಾರವನ್ನು ವಿಜಯಾ ರಮಣ ತಿಳಿಸಿದ್ದರು. ಅಲ್ಲಿ 35 ವರ್ಷಗಳ ಹಿಂದಿನ ದಿನಗಳ ನೆನಪುಗಳನ್ನು ಹಂಚಿಕೊಂಡೆವು. ಒಂದು ದಿನ ಉಳಿದುಕೊಂಡಿದ್ದ ಸಿಂಧು ಕುಟುಂಬದವ ರೊಂದಿಗೆ ರಾತ್ರಿ ಸಿಹಿ ಭೋಜನ ಸವಿದೆ’ ಎಂದು ನಾರಾಯಣ್ ಆತಿಥ್ಯವನ್ನು ಸ್ಮರಿಸಿಕೊಂಡರು.
Related Articles
Advertisement
ಸಿಂಧು ಕುಟುಂಬದ ಜತೆ ನಂಟುಮೂಲತಃ ಕೇರಳದವರಾದ ಪಿ.ವಿ. ನಾರಾಯಣ್ 1981ರಲ್ಲಿ ತಮಿಳುನಾಡಿನ ವಾಲಿಬಾಲ್ ತರಬೇತುದಾರರಾಗಿದ್ದರು. 1981-84ರಲ್ಲಿ ಚೆನ್ನೈನ ಕ್ರೊಂಪೆಟ್ ವೈಷ್ಣವ ಕಾಲೇಜಿನಲ್ಲಿ ಸಿಂಧು ಅವರ ತಾಯಿ ವಿಜಯಾ ರಮಣ ವ್ಯಾಸಂಗ ಮಾಡುತ್ತಿದ್ದರು. ಆಗ ರಾಜ್ಯ ಮಟ್ಟದ ವಾಲಿಬಾಲ್ ಕ್ಯಾಂಪ್‌ಗೆ ಆಯ್ಕೆಗೊಂಡಿದ್ದರು. ಆಗ ನಾರಾಯಣ್ ಈ ತಂಡಕ್ಕೆ ತರಬೇತಿ ನೀಡಿದ್ದರು. ಇವರ ತರಬೇತಿಯಡಿ ವಿಜಯಾ ಅವರು ಯೂತ್, ಸೀನಿಯರ್, ವಿ.ವಿ. ಮಟ್ಟದಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು. ಅನಂತರ ತರಬೇತಿ ಕೆಲಸ ಬಿಟ್ಟುಬಂದ ನಾರಾಯಣ್ ಅವರು ವಿಜಯಾ ರಮಣ ಕುಟುಂಬದ ಜತೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು. ನಾರಾಯಣ್ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಬೀಚ್ ವಾಲಿಬಾಲ್ ತಾಂತ್ರಿಕ ಸಂಸ್ಥೆಯ ಸದಸ್ಯರಾಗಿದ್ದರು. ಪ್ರತಿ ವರ್ಷ ಪುತ್ತೂರಿನಲ್ಲಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ವಾಲಿಬಾಲ್ ತರಬೇತಿ ನೀಡುತ್ತಿದ್ದಾರೆ. – ಕಿರಣ್ ಪ್ರಸಾದ್ ಕುಂಡಡ್ಕ