ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್ ಫೈನಲ್‌ಗೆ ನೆಗೆದಿದ್ದಾರೆ. ಆದರೆ ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಸೆಮಿಫೈನಲ್‌ನಲ್ಲಿ ಎಡವಿದರು.
ಸೆಮಿಫೈನಲ್ ಪಂದ್ಯದ ಮೊದಲ ಗೇಮ್ ವೇಳೆ ಇಂಡೋನೇಷ್ಯಾದ ಎದುರಾಳಿ ಕ್ರಿಸ್ಟಿಯನ್ ಆದಿನಾಥ ಗಾಯಾಳಾದ ಕಾರಣ ಪ್ರಣಯ್‌ಗೆ ಮುನ್ನಡೆ ಲಭಿಸಿತು. ಆಗ ಪ್ರಣಯ್ 19-17ರ ಮುನ್ನಡೆಯಲ್ಲಿದ್ದರು. “ಜಂಪ್ ರಿಟರ್ನ್’ ವೇಳೆ ಎಡವಿ ಬಿದ್ದ ಆದಿನಾಥ, ಎಡ ಮೊಣಕಾಲಿಗೆ ಗಂಭೀರ ಏಟು ಅನುಭವಿಸಿದರು. 21 ವರ್ಷದ ಆದಿನಾಥ 2019ರ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದಾರೆ.
ರವಿವಾರದ ಫೈನಲ್‌ನಲ್ಲಿ ಪ್ರಣಯ್ ಚೀನದ ವೆಂಗ್ ಹಾಂಗ್ ಯಾಂಗ್ ಅಥವಾ ಚೈನೀಸ್ ತೈಪೆಯ ಲಿನ್ ಚುನ್ ಯಿ ಅವರನ್ನು ಎದುರಿಸಲಿದ್ದಾರೆ.
ಇದು ಪ್ರಸಕ್ತ ಋತುವಿನಲ್ಲಿ ಪ್ರಣಯ್ ಕಾಣುತ್ತಿರುವ ಮೊದಲ ಫೈನಲ್ ಆಗಿದೆ. ಕಳೆದ ವರ್ಷ ಸ್ವಿಸ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆದ ಬಳಿಕ ಪ್ರಣಯ್ ಮೊದಲ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.
ಸೋಲನುಭವಿಸಿದ ಸಿಂಧು
ಪಿ.ವಿ. ಸಿಂಧು ಸೆಮಿಫೈನಲ್ ಹರ್ಡಲ್ಸ್ ದಾಟುವಲ್ಲಿ ವಿಫಲರಾ ದರು. ಇಂಡೋನೇಷ್ಯಾದ ಗ್ರೆಗೋ ರಿಯಾ ಮರಿಸ್ಕಾ ಟುಂಜುಂಗ್ ವಿರುದ್ಧ 14-21, 17-21 ನೇರ ಗೇಮ್‌ಗಳಿಂದ ಎಡವಿದರು. ಇದು 9ನೇ ರ್‍ಯಾಂಕಿಂಗ್ ಆಟಗಾರ್ತಿ ಟುಂಜುಂಗ್ ವಿರುದ್ಧ ಸಿಂಧು ಅನುಭವಿಸಿದ ಸತತ 2ನೇ ಸೋಲು. ಇದಕ್ಕೂ ಮೊದಲು ಈ ಇಂಡೋನೇಷ್ಯಾ ಆಟಗಾರ್ತಿ ವಿರುದ್ಧ ಸತತ 7 ಗೆಲುವು ಸಾಧಿಸಿದ ಹೆಗ್ಗಳಿಕೆ ಸಿಂಧು ಅವರದಾಗಿತ್ತು.
Related Articles
ಸಿಂಧು ಇಲ್ಲಿ ಆಕ್ರಮಣಕಾರಿ ಆಟ ವಾಡಲು ವಿಫಲರಾದರು. ಆದರೆ ಟುಂಜುಂಗ್ ಬಲಿಷ್ಠ ರಕ್ಷಣಾತ್ಮಕ ಆಟ ಹಾಗೂ ನಿಯಂತ್ರಿತ ರ್ಯಾಲೀಸ್ ಮೂಲಕ ಯಶಸ್ಸು ಕಾಣುತ್ತ ಹೋದರು.