Advertisement
ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಅಧ್ಯಕ್ಷೆ ಲಕ್ಷ್ಮೀ ಅಮರೇಶ ಗುರಿಕಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ನರಸಿಂಹ ಮಾತನಾಡಿ, ಜೆಸ್ಕಾಂ ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಮೀಟರ್ ಅಳವಡಿಸಿದೆ. ಈ ಮೀಟರ್‌ವೇಗವಾಗಿ ಓಡುವುದರಿಂದ ಬಿಲ್ನಲ್ಲಿ ಭಾರೀ ವ್ಯತ್ಯಾಸ ಆಗುತ್ತಿದೆ. ಬಿಲ್ ಹೊರೆಗೆ ಬೆಚ್ಚಿದ ಗ್ರಾಮೀಣ ಬಡ ಜನತೆ ಮೊಂಬತ್ತಿ ಬೆಳಕಿನಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ಕುಟುಂಬವೊಂದಕ್ಕೆ ತಿಂಗಳಿಗೆ ಸಾವಿರದಿಂದ ಎರಡೂವರೆ ಸಾವಿರ ರೂ.ವರೆಗೆ ಬಿಲ್ ಬರುತ್ತಿದೆ. ಹಾಗಾಗಿ ಜೆಸ್ಕಾಂ ಇಲಾಖೆಯವರು ಡಿಜಿಟಲ್ ಮೀಟರ್ ಹಾಕಿ ಗ್ರಾಹಕರಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೇ ಡಿಜಿಟಲ್ ಮೀಟರ್ ತೆಗೆದು ಪುನಃ ಹಳೆ ಮೀಟರ್ ಅಳವಡಿಸಬೇಕೆಂದು ಆಗ್ರಹಿಸಿದರು.
Related Articles
Advertisement
ಸದಸ್ಯ ಹನುಮಂತ ಮಾತನಾಡಿ, ಸಾಲಗುಂದಾದಲ್ಲಿ 5 ಮತ್ತು 6ನೇ ವಾರ್ಡ್‌ಗೆ ನೀರು ಸರಿಯಾಗಿ ಬರುತ್ತಿಲ್ಲ. ಗ್ರಾಮ ಸಮಸ್ಯೆಗಳ ತಾಣವಾಗಿದೆ. ಪಿಡಿಒಗಳು ಸಮಸ್ಯೆ ಪರಿಹರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ದೇಸಾಯಿ ಮಾತನಾಡಿ, ಎಲ್ಲ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಸುತ್ತಲೂ ಬ್ಲೀಚಿಂಗ್ ಪೌಡರ್ ಹಾಕಬೇಕು. ಶುದ್ಧೀಕರಣ ಘಟಕಗಳನ್ನು ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.
ತಾಪಂ ಅಧ್ಯಕ್ಷೆ ಲಕ್ಷ್ಮೀ ಗುರಿಕಾರ ಮಾತನಾಡಿ, ಎಲ್ಲ ಗ್ರಾಮಗಳಲ್ಲಿ ಅಂಗನವಾಡಿ, ಆರೋಗ್ಯ, ಶೌಚಾಲಯ, ವಸತಿ ಇನ್ನಿತರ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಗಮನಹರಿಸಬೇಕು. ತಾಪಂ ಸದಸ್ಯರ ಗಮನಕ್ಕೆ ಇಲ್ಲದೆ ಯಾವುದೇ ಕೆಲಸ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೊಡ ಮಾತನಾಡಿ, ಎಲ್ಲ ಗ್ರಾಮಗಳಲ್ಲಿನ ಕುಡಿಯುವ ನೀರಿನ ಕೆರೆ ಭರ್ತಿ ಮಾಡಲಾಗಿದೆ. ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಸದಸ್ಯರ ಸಹಕಾರ ಅಗತ್ಯ ಎಂದರು.
ಕೆಲ ನಿಮಿಷ ನಿಂತಿದ್ದ ಸದಸ್ಯೆ: ಸಭೆ ಆರಂಭವಾಗಿ ಹತ್ತು ನಿಮಿಷ ತಡವಾಗಿ ಬಂದಿದ್ದ ಸದಸ್ಯೆಯೊಬ್ಬರಿಗೆ ಕುಳಿತುಕೊಳ್ಳಲು ಆಸನ ಇಲ್ಲದ್ದರಿಂದ ಕೆಲ ನಿಮಿಷ ನಿಂತುಕೊಂಡಿದ್ದರು. ನಂತರ ತಾಪಂ ಕಾ.ನಿ. ಅಧಿಕಾರಿ ಕುರ್ಚಿ ಹಾಕಿಸಿದ ನಂತರ ಸದಸ್ಯೆ ಕುಳಿತರು.
ತಾಪಂ ಉಪಾಧ್ಯಕ್ಷೆ ಕರಿಯಮ್ಮ, ಸದಸ್ಯರಾದ ಉದಯಗೌಡ, ನಿಂಗಪ್ಪ, ಶರಣಪ್ಪ, ಶೇಖರಪ್ಪ, ಗುರುರಾಜ, ಶರಣಮ್ಮ, ಯಮನಮ್ಮ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.