•ಚಂದ್ರಶೇಖರ ಯರದಿಹಾಳ
ಸಿಂಧನೂರು: ಮಠಾಧೀಶರಲ್ಲಿ ಸಾಮಾಜಿಕ ಕಳಕಳಿ ಇದ್ದರೆ ಶ್ರೀಮಠ, ಭಕ್ತರು ಮತ್ತು ಸಮಾಜದ ಉದ್ಧಾರ ಸಾಧ್ಯ ಎಂಬುದನ್ನು ತೋರಿದವರು ಮೂರುಮೈಲ್ನ ಬಾಳೆಹೊನ್ನೂರು ರಂಭಾಪುರಿ ಖಾಸಾ ಶಾಖಾಮಠದ ಶ್ರೀ ಷ.ಬ್ರ. ಸೋಮನಾಥ ಶಿವಾಚಾರ್ಯರು.
ಈ ಮಠ ಸಿಂಧನೂರು ನಗರದಿಂದ ಎರಡು ಕಿ.ಮೀ. ದೂರದ ಮೂರುಮೈಲ್ನಲ್ಲಿದೆ. ಈ ಪ್ರದೇಶದಲ್ಲಿ ಹಿಂದೆ ಜಾಲಿಮರಗಳೇ ಬೆಳೆದಿದ್ದವು. ಜನ ವಾಸಿಸಲು ಹಿಂದೇಟು ಹಾಕುತ್ತಿದ್ದರು. ಅಂತಹ ಸ್ಥಳದಲ್ಲಿದ್ದ ಮಠಕ್ಕೆ ಶ್ರೀ ಸೋಮನಾಥ ಶಿವಾಚಾರ್ಯರು ಪಟ್ಟಾಧಿಕಾರಿಗಳಾಗಿ ನೇಮಕಗೊಂಡ ನಂತರ ಮೂರುಮೈಲ್ ಜತೆಗೆ ಸಿಂಧನೂರು ತಾಲೂಕಿಗೆ ಬೆಳಕು ಬಂದಿದೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಪೀಠಾಧಿಪತಿಗಳಾದ ಶ್ರೀ ಸೋಮನಾಥ ಶಿವಾಚಾರ್ಯರು ಹತ್ತಾರು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಶ್ರೀಮಠಕ್ಕೆ ಬರುವ ಭಕ್ತರಿಗೆ ನಿತ್ಯ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಸರ ಜಾಗೃತಿ, ಬರದಿಂದ ಕಂಗೆಟ್ಟ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ, ಮಳೆ ಮತ್ತು ಲೋಕಕಲ್ಯಾಣಕ್ಕಾಗಿ ಮೌನನಾನುಷ್ಠಾನ, ಜನರನ್ನು ದುಶ್ಚಟದಿಂದ ಮುಕ್ತಿ ಮಾಡಲು ಜಾಗೃತಿ ಜೊತೆಗೆ ಜೋಳಿಗೆಯೊಡ್ಡಿ ದುಶ್ಚಟಗಳ ಭಿಕ್ಷೆ, ವಟುಗಳ ಅಯ್ನಾಚಾರ, ಸಾಧಕರಿಗೆ ಸನ್ಮಾನ, ಯೋಗ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಗಳ ಸಾಮಾಜಿಕ ಕಳಕಳಿ, ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ ಪೂಜ್ಯರ ದ್ವಾದಶ ಗುರು ಪಟ್ಟಾಧಿಕಾರ ಮಹೋತ್ಸವವನ್ನು ಭಕ್ತರು ಹಮ್ಮಿಕೊಂಡಿದ್ದಾರೆ. ರಂಭಾಪುರಿ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಶ್ರೀಗಳ ಬಾಲ್ಯ-ಶಿಕ್ಷಣ: ಶ್ರೀ ಸೋಮನಾಥ ಶಿವಾಚಾರ್ಯರ ಪೂರ್ವಾಶ್ರಮದ ಹೆಸರು ಶ್ರೀ ಮಲ್ಲಿಕಾರ್ಜುನಯ್ಯಸ್ವಾಮಿ. ವಿಜಯಪುರ ಜಿಲ್ಲೆಯ ಕನಮಡಿ ಗ್ರಾಮದ ವೇ.ಮೂ. ಶ್ರೀ ಚಂದ್ರಶೇಖರಯ್ಯಸ್ವಾಮಿ ಹಿರೇಮಠ ಮತ್ತು ಸಿದ್ಧಮ್ಮತಾಯಿಯವರ ಪುತ್ರ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸ್ವಗ್ರಾಮ ಕನಮಡಿಯಲ್ಲಿ ಮುಗಿಸಿದರು. ಮುಂದಿನ ವ್ಯಾಸಂಗದ ಚಿಂತನೆಯಲ್ಲಿದ್ದಾಗ ತೊರವಿಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಕಣ್ಣೂರು ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಭಕ್ತರು ಸೇರಿ ಅವರನ್ನು ಕನಮಡಿ ಗ್ರಾಮದ ಹಿರೇಮಠಕ್ಕೆ ಮರಿ ಬಿಡಲು ನಿರ್ಧರಿಸಿದರು. ಬಳಿಕ ಶ್ರೀಮದ್ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಬಾಳೆಹೊನ್ನೂರು ರಂಭಾಪುರಿ ಮಠದ ರೇಣುಕಾಚಾರ್ಯ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಸೇರಿಸಿದರು.
ಇಲ್ಲಿಂದ ನಾಲ್ಕು ವರ್ಷಗಳ ಕಾಲ ಹೂಲಿಮಠದ ಶ್ರೀ ಶಿವಮಹಾಂತ ಶಿವಾಚಾರ್ಯರಿಂದ ಆಧ್ಯಾತ್ಮದ ಅರಿವಿನ ಪಾಠ ಪಡೆಯುತ್ತಾರೆ. ವಿದ್ವಾನ್ ರಾಜಶೇಖರ ಶಾಸ್ತ್ರಿಗಳಿಂದ ಸಂಸ್ಕೃತ, ವೇದ, ಆಗಮ, ಉಪನಿಷತ್ತುಗಳನ್ನು ಕಲಿತು, ಸಿದ್ಧಾಂತ ಶಿಖಾಮಣಿ, ಜ್ಯೋತಿಷ್ಯ ವಿದ್ವಾನ್ ದ್ವಾರಕ ಶಾಸ್ತ್ರಗಳಿಂದ ಜ್ಯೋತಿಷ್ಯವನ್ನು ಪರಿಪೂರ್ಣತೆಯಿಂದ ಅಭ್ಯಸಿಸಿದ್ದಾರೆ.