Advertisement

ಸುಂದರ ಪರಿಸರ ನಿರ್ಮಿಸಲು ಶ್ರಮಿಸೋಣ

01:27 PM Jul 01, 2019 | Naveen |

ಸಿಂಧನೂರು: ಭವಿಷ್ಯದ ಪೀಳಿಗೆಗೆ ಸುಂದರ ಪರಿಸರ ಕೊಡುಗೆ ನೀಡಲು ಪ್ರತಿಯೊಬ್ಬರು ಗಿಡ, ಮರಗಳನ್ನು ಪೋಷಿಸಿ ಬೆಳೆಸಲು ಮುಂದಾಗಬೇಕಿದೆ ಎಂದು ಶಿಕ್ಷಕಿ ಬಿ.ವಿ. ಅಕ್ಕಮಹಾದೇವಿ ಹೇಳಿದರು.

Advertisement

ತಾಲೂಕಿನ ಕಲಮಂಗಿ ಸರ್ಕಾರಿ ಪ್ರೌಢಶಾಲೆ, ಅರಣ್ಯ ಇಲಾಖೆ ಮತ್ತು ವನಸಿರಿ ಟ್ರಸ್ಟ್‌ ವತಿಯಿಂದ ಕಲಮಂಗಿ ಗ್ರಾಮದ ಅರಣ್ಯಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಅರಣ್ಯದಲ್ಲಿ ಬೀಜದುಂಡೆ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಅರಣ್ಯಪ್ರದೇಶ ಹೆಚ್ಚಾಗಬೇಕು. ಆದರೆ ಪರಿಸರ ಮತ್ತು ಕಾಡುಗಳನ್ನು ನಾಶ ಮಾಡಿ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣದಿಂದಾಗಿ ಸರಿಯಾಗಿ ಮಳೆ ಆಗುತ್ತಿಲ್ಲ. ಪರಿಸರ ಕಲುಷಿತವಾಗಿ ಶುದ್ಧ ಗಾಳಿ ದೊರೆಯುತ್ತಿಲ್ಲ. ಪರಿಸರ ಸಮತೋಲನ ಕಾಪಾಡಲು ಸಾರ್ವಜನಿಕರು, ಯುವಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರೂ ಗಿಡ, ಮರ ಬೆಳೆಸಲು ಕೈಜೋಡಿಸಬೇಕು ಎಂದರು.

ಶಿಕ್ಷಕ ವೀರೇಶ ಗೋನವಾರ ಮಾತನಾಡಿ, ಬೀಜದುಂಡೆ ಎನ್ನುವುದು ಪ್ರಾಚೀನವಾದ ಪರಿಕಲ್ಪನೆದಾರೂ ಜಪಾನ್‌ ದೇಶದ ಸಹಜ ಕೃಷಿ ತಜ್ಞ ಫುಕುಓಕಾ ಅವರು ಹೆಚ್ಚು ಪ್ರಚುರ ಪಡಿಸಿದರು. ಕಡಿಮೆ ಶ್ರಮ ಮತ್ತು ಉಳಿತಾಯದ ಕಾಳಜಿಯನ್ನು ಹೊಂದಿರುವ ಈ ಪರಿಕಲ್ಪನೆಯಲ್ಲಿ ಜನರು, ವಿದ್ಯಾರ್ಥಿಗಳು, ಯುವಕರು ಸಾಮೂಹಿಕವಾಗಿ ಒಂದೆಡೆ ಸೇರಿ ಆಯಾ ಪ್ರದೇಶಗಳಿಗೆ ಒಗ್ಗುವಂತಹ ಬೀಜಗಳನ್ನು ಮಣ್ಣು ಮತ್ತು ಗೊಬ್ಬರ ಮಿಶ್ರಿತ ಕೆಸರಿನ ಮಣ್ಣಿನಲ್ಲಿ ಒಂದೇ ತರಹದ ಇಲ್ಲವೇ 2-3 ತೆರೆನಾದ ಬೀಜಗಳನ್ನು ಇಟ್ಟು ಉಂಡೆಗಳನ್ನು ತಯಾರಿಸಲಾಗುತ್ತದೆ. ಹೀಗೆ ತಯಾರಿಸಲಾದ ಬೀಜದುಂಡೆಗಳನ್ನು ಅರಣ್ಯ ಪ್ರದೇಶ, ಖಾಲಿ ಜಾಗದಲ್ಲಿ ಹಾಕಲಾಗುತ್ತದೆ. ನೆಲಕ್ಕೆ ಹಾಕಲಾಗಿರುವ ಬೀಜವು ಪಶು-ಪಕ್ಷಿಗಳಿಂದ ಸುರಕ್ಷಿತ ವಾಗಿರುತ್ತದೆ. ಮಳೆ ಬಂದಾಗ ಮಣ್ಣು ಕರಗಿ ಬೀಜಗಳು ಮೊಳಕೆಯೊಡೆದು ಸಸಿಗಳಾಗಿ ಬೆಳೆಯುತ್ತವೆ ಎಂದು ಹೇಳಿದರು. ಶಿಕ್ಷಕರಾದ ಜಯಶ್ರೀ ಆಶ್ರಿತ್‌, ಶರಣಪ್ಪ ಮುಳ್ಳೂರು, ಅರುಣಕುಮಾರ, ರಾಜಪ್ಪ, ಅರಣ್ಯ ಇಲಾಖೆಯ ಶರಣಬಸವ ಪಾಟೀಲ, ಸ್ನೇಹ ಸಿರಿ ಟ್ರಸ್ಟ್‌ ಅಧ್ಯಕ್ಷ ವಿಶ್ವನಾಥರೆಡ್ಡಿ ಕುಲಕರ್ಣಿ, ಖಜಾಂಚಿ ಅಯ್ಯನಗೌಡ ಹೊಸಮನಿ, ಕಾರ್ಯದರ್ಶಿ ಗಿರಿರಾಜ, ಅಭಿ, ಶಿವರಾಜ, ಅರ್ಚನಾ ಹಿರೇಮಠ, ದೊಡ್ಡಬಸವ, ಚೆನ್ನಬಸವ, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ, ಗ್ರಾಮಸ್ಥರು, ಯುವಕರು ಸೇರಿದಂತೆ ಅನೇಕು ಉಪಸ್ಥಿತರಿದ್ದರು. 8000ಕ್ಕೂ ಹೆಚ್ಚು ಬೀಜದುಂಡೆಗಳನ್ನು ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾಕಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next